ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಪಿ: ಐದು ರಾಜ್ಯಗಳಲ್ಲಿನ ಚುನಾವಣೆ ಮುಗಿದ ನಂತರ ಸಮಿತಿ ರಚನೆ

ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ತೋಮರ್‌ ಮಾಹಿತಿ
Last Updated 4 ಫೆಬ್ರುವರಿ 2022, 14:51 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಮುಗಿದ ನಂತರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ರಾಜ್ಯಸಭೆಯಲ್ಲಿ ಶುಕ್ರವಾರ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ತೋಮರ್, ‘ಚುನಾವಣೆಗಳು ಮುಗಿದ ನಂತರ ಸಮಿತಿಯನ್ನು ರಚಿಸಬಹುದು ಎಂಬುದಾಗಿ ಚುನಾವಣಾ ಆಯೋಗ ಹೇಳಿದೆ. ಈ ಬಗ್ಗೆ ಆಯೋಗಕ್ಕೆ ಸರ್ಕಾರ ಪತ್ರ ಬರೆದು ಮಾಹಿತಿ ಕೇಳಿತ್ತು’ ಎಂದು ಮಾಹಿತಿ ನೀಡಿದರು.

‘ಎಂಎಸ್‌ಪಿಗೆ ಸಂಬಂಧಿಸಿ ಸಮಿತಿಯೊಂದರನ್ನು ರಚಿಸುವುದಾಗಿ ಪ್ರಧಾನಿ ಘೋಷಣೆ ಮಾಡಿರುವುದು ದೇಶಕ್ಕೇ ಗೊತ್ತಿದೆ. ಬೆಳೆಗಳಲ್ಲಿ ವೈವಿಧ್ಯ, ನೈಸರ್ಗಿಕ ಕೃಷಿಗೆ ಉತ್ತೇಜನ ಹಾಗೂ ಎಂಎಸ್‌ಪಿ ನಿರ್ಧರಿಸುವಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಅವರು ವಿವರಿಸಿದ್ದರು. ಪ್ರಧಾನಿಗಳ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ಧ ಇದೆ’ ಎಂದು ಅವರು ರಾಜ್ಯಸಭೆಗೆ ತಿಳಿಸಿದರು.

‘ಚುನಾವಣೆಗಳು ಘೋಷಣೆಯಾಗಿರುವ ಕಾರಣ, ಸಮಿತಿ ರಚನೆಗೆ ಸಂಬಂಧಿಸಿ ಸ್ಪಷ್ಟೀಕರಣ ಕೋರಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಆಯೋಗವು ಉತ್ತರ ನೀಡಿದ್ದು, ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಮಿತಿ ರಚಿಸಬಹುದು ಎಂಬುದಾಗಿ ತಿಳಿಸಿದೆ’ ಎಂದು ಅವರು ಹೇಳಿದರು.

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅಲ್ಲದೇ, ಎಂಎಸ್‌ಪಿಗೆ ಕಾನೂನಾತ್ಮಕ ಖಾತರಿ ನೀಡುವ ಸಂಬಂಧ ರೈತರೊಂದಿಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವುದಾಗಿಯೂ ಅವರು ಆಗ ಭರವಸೆ ನೀಡಿದ್ದರು.

ಎಂಎಸ್‌ಪಿಗೆ ಸಂಬಂಧಿಸಿ ಸಮಿತಿ ರಚಿಸುವ ಭರವಸೆಯನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಇತ್ತೀಚೆಗೆ ಟೀಕೆ ಮಾಡಿತ್ತು. ಈ ಕಾರಣಕ್ಕೆ, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಮತದಾರರಿಗೆ ತಿಳಿಸುವ ಸಲುವಾಗಿ ‘ಮಿಷನ್‌ ಉತ್ತರಪ್ರದೇಶ’ ಆಂದೋಲನ ನಡೆಸುವುದಾಗಿಯೂ ಮೋರ್ಚಾ ಹೇಳಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT