ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರನ್ನು ಮತ್ತೆ ಬಿಎಸ್‌ಪಿ ತೆಕ್ಕೆಗೆ ತರಬಲ್ಲುದೇ 'ಪರಶುರಾಮ' ರಾಜಕಾರಣ

ಉತ್ತರ ಪ್ರದೇಶ
Last Updated 13 ಆಗಸ್ಟ್ 2020, 14:07 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದಲ್ಲಿ ದಲಿತ-ಬ್ರಾಹ್ಮಣ ಸೂತ್ರವನ್ನು ನಾಜೂಕಾಗಿ ಹೆಣೆದು, ನಿರ್ವಹಿಸುವ ಮೂಲಕ 2007ರಲ್ಲಿ ಮಾಯಾವತಿ ಬಿಎಸ್‌ಪಿಯನ್ನು ಅಧಿಕಾರಕ್ಕೆ ತಂದಿದ್ದರು.

'ಸಮಾಜವಾದಿ ಪಕ್ಷವು ಭರವಸೆ ನೀಡಿರುವುದಕ್ಕಿಂತಲೂ ದೊಡ್ಡದಾದ ಪರಶುರಾಮ ದೇಗುಲವನ್ನು ನಾನು ಸ್ಥಾಪಿಸುತ್ತೇನೆ' ಎನ್ನುವ ಮೂಲಕ ಇದೀಗ ಮಾಯಾವತಿ ಮತ್ತೆ ಇದೇ ಸೂತ್ರ ಹೆಣೆಯುತ್ತಿದ್ದಾರೆಯೇ ಎಂಬ ಲೆಕ್ಕಾಚಾರಗಳು ಈ ಬಾರಿ ಹೊಸದಾಗಿ ಚಾಲ್ತಿಗೆ ಬಂದಿವೆ.

ಕಳೆದ ಕೆಲ ವರ್ಷಗಳಿಂದ ಬಿಎಸ್‌ಪಿ ಸಾಲುಸಾಲಾಗಿ ಸೋಲನುಭವಿಸಿದೆ. ಪಕ್ಷಕ್ಕೆ ಮರುಜೀವ ನೀಡಲು ಪಣತೊಟ್ಟಿರುವ ಮಾಯಾವತಿ ಹೊಸ ತಂತ್ರವೊಂದರ ಅನ್ವೇಷಣೆಯಲ್ಲಿದ್ದಾರೆ. ಬಿಎಸ್‌ಪಿಗೆ ಸಿಗುತ್ತಿರುವ ಮತಗಳ ಪ್ರಮಾಣ ಶೇ 20ಕ್ಕಿಂತ ಹೆಚ್ಚಾಗುತ್ತಿಲ್ಲ. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಶೇ 50ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು. ಉತ್ತರ ಪ್ರದೇಶದಲ್ಲಿಹೆಚ್ಚುತ್ತಿರುವ ಬಿಜೆಪಿ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ವಿನೂತನ ತಂತ್ರವೊಂದನ್ನು ಬಿಎಸ್‌ಪಿ ಅನುಸರಿಸಬೇಕಾದ ಅಗತ್ಯತೆ ಕಾಣಿಸಿಕೊಂಡಿದೆ.

ಈ ವಿಚಾರ ಅರಿತಿರುವ ಬಿಎಸ್‌ಪಿ ನಾಯಕರುದಲಿತ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ಬಿಜೆಪಿಯತ್ತ ವಾಲುತ್ತಿರುವ ಜಾಟವ್‌ ಹೊರತಾದ ದಲಿತ ಸಮುದಾಯಗಳನ್ನು ತನ್ನತ್ತ ಸೆಳೆದುಕೊಳ್ಳಲು ಹೊಸ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದೇ ಹೊತ್ತಿಗೆ ಬ್ರಾಹ್ಮಣ ಸಮುದಾಯವನ್ನು ಬಿಎಸ್‌ಪಿ ತೆಕ್ಕೆಗೆ ಮರಳಿ ಆಕರ್ಷಿಸಲು ಹೊಸ ದಾಳಗಳನ್ನು ಉರುಳಿಸಲು ಮುಂದಾಗಿದೆ.

ಠಾಕೂರ್-ಬ್ರಾಹ್ಮಣ ಸಮುದಾಯಗಳ ತಿಕ್ಕಾಟ ಉತ್ತರ ಪ್ರದೇಶಕ್ಕೆ ಹೊಸದೇನಲ್ಲ. ವಿಕಾಸ್‌ ದುಬೆ ಎನ್‌ಕೌಂಟರ್ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ಬ್ರಾಹ್ಮಣ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪಗಳು ದೊಡ್ಡ ದನಿಯಲ್ಲಿ ಕೇಳಿ ಬಂದಿತ್ತು. ಈ ಸಂಗತಿಯನ್ನು ಬಿಎಸ್‌ಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹಾತೊರೆಯುತ್ತಿದೆ.

ಇದೇ ಕಾರಣಕ್ಕೆ ಎಸ್‌ಪಿ ಮತ್ತು ಬಿಎಸ್‌ಪಿಗಳಿಗೆ ಪರಶುರಾಮನ ನೆನಪಾಗಿದೆ. ಈ ಪೌರಾಣಿಕ ಸಂತ ಓರ್ವ ಬ್ರಾಹ್ಮಣ ಎನ್ನುವುದು ಜನಪ್ರಿಯ ನಂಬಿಕೆ.

ವಿವಿಧ ಸಮುದಾಯಗಳ ನಡುವಣ ಹೊಂದಾಣಿಕೆ ಲೆಕ್ಕಾಚಾರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಬಿಎಸ್‌ಪಿ ಕೆಲ ಸೂತ್ರಗಳನ್ನು ಪ್ರಯೋಗಿಸಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ರಾಮಜನ್ಮಭೂಮಿ ಇರುವ ಫೈಜಾಬಾದ್‌ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವೆಡೆ ಒಟ್ಟು97 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಆದರೆ ಅದರಿಂದ ಹೆಚ್ಚೇನೂ ಪ್ರಯೋಜನವಾಗಿರಲಿಲ್ಲ. ಇದೀಗ ಪಕ್ಷವು ಬ್ರಾಹ್ಮಣ (ಶೇ 9), ಮುಸ್ಲಿಮರು (ಶೇ 19) ಮತ್ತು ದಲಿತರ(ಶೇ 21) ಮತಗಳನ್ನು ಒಗ್ಗೂಡಿಸಿಕೊಳ್ಳಲು ತಂತ್ರ ಹೆಣೆಯುತ್ತಿದೆ.

ಕಳೆದ ಕೆಲ ವರ್ಷಗಳಿಂದ ಉತ್ತರ ಪ್ರದೇಶಗಳಲ್ಲಿ ಬಿಜೆಪಿಗೆ ತಾನು ಪರ್ಯಾಯ ಎಂದು ತೋರಿಸಿಕೊಳ್ಳಲು ಎಸ್‌ಪಿ ಯತ್ನಿಸಿ, ವಿಫಲವಾಗಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಹೆಚ್ಚು ಪ್ರಯೋಜನವಾಗಿರಲಿಲ್ಲ. ಆದರೆ ಬಹುಕಾಲದಿಂದ ಅಧಿಕಾರದಿಂದ ದೂರ ಉಳಿದಿರುವ ಬಿಎಸ್‌ಪಿ ಇದೀಗ ಪರುಶುರಾಮ ದೇಗುಲದ ವಿಚಾರ ಪ್ರಸ್ತಾಪಿಸುವ ಮೂಲಕಬಿಜೆಪಿಗೆ ತಾನು ಪರ್ಯಾಯ ಎನ್ನುವುದನ್ನುವಿನೂತನ ರೀತಿಯಲ್ಲಿ ಸಾರಿ ಹೇಳಲು ಮುಂದಾಗಿದೆ.

'ಬಿಎಸ್‌ಪಿಯ ಈ ಪ್ರಯತ್ನಕ್ಕೆ ಫಲ ಸಿಗುವುದೇ?'

ನಾನು ಇದೇ ಪ್ರಶ್ನೆಯನ್ನು ಏಷ್ಯನ್ ಡೆವಲಪ್‌ಮೆಂಟ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನಸ್ಥಾಪಕ ಸದಸ್ಯ ಶೈಬಲ್ ಗುಪ್ತ ಅವರ ಮುಂದಿಟ್ಟೆ. ಅವರ ಉತ್ತರ ನಕಾರಾತ್ಮಕವಾಗಿತ್ತು.

'ಈಗಿನ ಸಂದರ್ಭದಲ್ಲಿ ಹೊಸದಾಗಿ ಸಾಮಾಜಿಕ ಹೊಂದಾಣಿಕೆಯ ಸೂತ್ರಗಳನ್ನು ಮುಂದಿಡುವುದು ಕಷ್ಟವಾಗುತ್ತದೆ. ಬ್ರಾಹ್ಮಣ ಸಮುದಾಯದಲ್ಲಿ ಮಹತ್ವಾಕಾಂಕ್ಷೆ ಹೆಚ್ಚಾಗಿ ಕಂಡುಬರುತ್ತಿದೆ.ಈಗೇನೋ ಬ್ರಾಹ್ಮಣರು ಬಿಜೆಪಿ ಜೊತೆಗೆ ತುಸು ಅಸಮಾಧಾನ ಹೊಂದಿರಬಹುದು. ಆದರೆ ಬಹುಕಾಲದಿಂದ ಅವರು ಬಿಜೆಪಿಯ ಪರವಾಗಿಯೇ ಒಲವು ತೋರಿಸಿದ್ದಾರೆ. ಬಿಜೆಪಿ ಪ್ರವರ್ಧಮಾನಕ್ಕೆ ಬರುವ ಮೊದಲು ಕಾಂಗ್ರೆಸ್ ಅವರ ನೆಚ್ಚಿನ ಪಕ್ಷವಾಗಿತ್ತು. ಇಡೀ ರಾಜ್ಯದಲ್ಲಿ ಈ ಸಮುದಾಯ ಯಾವುದೋ ಒಂದು ಪಕ್ಷಕ್ಕೆ ಇಡಿಯಾಗಿ ನಿಷ್ಠೆ ಪ್ರದರ್ಶಿಸುತ್ತದೆ ಎಂದುಕೊಳ್ಳುವುದು ತಪ್ಪಾದೀತು. ಸ್ಥಳೀಯವಾಗಿ ಸಮುದಾಯದ ಪಕ್ಷನಿಷ್ಠೆಯೂ ಬದಲಾಗುತ್ತದೆ' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT