ಸೋಮವಾರ, ಸೆಪ್ಟೆಂಬರ್ 20, 2021
29 °C

ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರಿಗೆ ತಾಲಿಬಾನ್‌ ಹಿಗ್ಗಾಮುಗ್ಗ ಥಳಿತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ್ದ ಇಬ್ಬರು ಅಫ್ಗನ್‌ ಪತ್ರಕರ್ತರನ್ನು ತಾಲಿಬಾನಿಗಳು ಮೈಮೇಲೆ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗ ಥಳಿಸಿ, ಗಂಟೆಗಟ್ಟಲೆ ಬಂಧನದಲ್ಲಿಟ್ಟು ನಂತರ ಬಿಡುಗಡೆ ಮಾಡಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣದ ಹಕ್ಕಿಗಾಗಿ ಮಹಿಳೆಯರು ಕಾಬೂಲ್‌ ಪೊಲೀಸ್ ಠಾಣೆ ಎದುರು ಸಣ್ಣದಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪತ್ರಕರ್ತ ನಖ್ದಿ ಮತ್ತು ಸಹೋದ್ಯೋಗಿ ಟಾಕಿ ದಾರ್ಯಾಬಿ, ‘ಇತಿಲಾತ್ ರೋಜ್‌‘ ಪತ್ರಿಕೆಯಲ್ಲಿ ಕೆಲಸ ಮಾಡುವ ಇಬ್ಬರು ಪತ್ರಕರ್ತರು ಪ್ರತಿಭಟನೆಯ ವರದಿ ಮಾಡಲು ಅಲ್ಲಿಗೆ ತೆರಳಿದ್ದರು.

ತಾಲಿಬಾನಿಗಳು ಬುಧವಾರ ಪ್ರತಿಭಟನಾ ಸ್ಥಳದಿಂದ ಈ ಇಬ್ಬರು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ‘ಠಾಣೆಯಲ್ಲಿ ಲಾಠಿ ಮತ್ತು ವಿದ್ಯುತ್ ಕೇಬಲ್ ಹಾಗೂ ಚಾವಟಿಯಿಂದ ಹೊಡೆದರು‘ ಎಂದು ಪತ್ರಕರ್ತರು ಹೇಳಿದರು.

‘ ಒಬ್ಬರು ನನ್ನ ತಲೆಯ ಮೇಲೆ ಕಾಲಿಟ್ಟರು. ಸಿಮೆಂಟ್‌ ಕಾಂಕ್ರೀಟ್‌ನಿಂದ ನನ್ನ ಮುಖಕ್ಕೆ, ತಲೆಗೆ ಹೊಡೆದರು. ಕಾಂಕ್ರಿಟ್‌ ಪುಡಿ ಪುಡಿಯಾಯಿತು. ಅವರು ನನ್ನನ್ನು ಕೊಲ್ಲುತ್ತಾರೆ ಎಂದು ಭಾವಿಸಿದ್ದೆ‘ ಎಂದು ಹಲ್ಲೆಗೊಳಗಾದ ಛಾಯಾಗ್ರಾಹಕ ನೆಮತುಲ್ಲಾ ನಖ್ದಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಎಲ್ಲರನ್ನೂ ಒಳಗೊಳ್ಳುವ ಆಡಳಿತ ನೀಡುತ್ತೇವೆಂಬ ಭರವಸೆಗಳನ್ನು ನೀಡಿದ್ದರೂ, ತಾಲಿಬಾನ್‌ಗಳು ತಮ್ಮ ಆಡಳಿತದ ವಿರುದ್ಧ ಧ್ವನಿ ಎತ್ತುವವರನ್ನು, ವಿರೋಧಿಸುವವರನ್ನು ಹೊರಹಾಕಲು ಮುಂದಾಗಿದ್ದಾರೆ. ಕಾನೂನು ಸಚಿವಾಲಯದಿಂದ ಅನುಮತಿ ಪಡೆಯದೇ ಪ್ರತಿಭಟನೆಗಳನ್ನು ನಡೆಸುವುದು ಕಾನೂನು ಬಾಹಿರ ಎಂದು ಬುಧವಾರ ಘೋಷಿಸಿದ್ದಾರೆ.

ನಖ್ದಿ ಅವರು ಪ್ರತಿಭಟನೆಯ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ತಕ್ಷಣ ತಾಲಿಬಾನಿಗಳು, ಆತನನ್ನು ಬಂಧಿಸಿದರು. ‌‘ನೀವು ಫೋಟೊ ತೆಗೆಯಲು ಸಾಧ್ಯವಿಲ್ಲ‘ ಎಂದು ತಾಲಿಬಾನಿಗಳು ಧಮ್ಕಿ ಹಾಕಿದರು. ನನ್ನ ಹಾಗೆ ಫೋಟೊ ತೆಗೆಯುತ್ತಿದ್ದ ಪತ್ರಕರ್ತರನ್ನು ಬಂಧಿಸಿ, ಅವರಿಂದ ಫೋನ್‌ಗಳನ್ನು ಕಿತ್ತುಕೊಂಡರು‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

ತಾಲಿಬಾನಿಗಳು ನನ್ನ ಕ್ಯಾಮೆರಾ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆದರೆ, ಇವರು ಕೊಡದೇ ಹಾಗೇ ನಿರ್ವಹಣೆ ಮಾಡಿದರು.  ಆದರೂ, ಮೂವರು ತಾಲಿಬಾನ್ ಹೋರಾಟಗಾರರು ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಥಳಿಸಿದರು. ಈ ಸಂಬಂಧ ತಾಲಿಬಾನಿ ಅಧಿಕಾರಿಗಳನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು