ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ತಾಲಿಬಾನ್‌ ಇದ್ದಿದ್ದರೆ ಪಂಚೆ ಅಲ್ಲ, ದೇಹ ನೇತಾಡುತ್ತಿತ್ತು: ಸಿ.ಟಿ.ರವಿ

Last Updated 27 ಸೆಪ್ಟೆಂಬರ್ 2021, 14:57 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ವೇಳೆ ತಾಲಿಬಾನ್‌ ಭಾರತದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ? ಅಂತಹ (ಅಘ್ಗನ್) ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್‌ಎಸ್ಎಸ್‌ ಅನ್ನು ತಾಲಿಬಾನ್‌ಗೆ ಸಮೀಕರಿಸಿ ಹೇಳಿಕೆ ನೀಡಿರುವುದನ್ನು ತರಾಟೆಗೆ ತೆಗೆದುಕೊಂಡ ರವಿ, ‘ತಾಲಿಬಾನ್‌ ಏನು, ಬಿಜೆಪಿ ಏನು, ಆರ್‌ಎಸ್‌ಎಸ್‌ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಎಸ್‌ಡಿಪಿಐ, ಪಿಎಫ್‌ಐ, ಎಂಐಎಂ ಇವರೆಲ್ಲ ಯಾರಿಗೆ ನೆಂಟರು? ನಮಗಂತೂ ಅಲ್ಲ. ನಾವು ಯಾವತ್ತೂ ಮತಕ್ಕಾಗಿ ರಾಜಕಾರಣ ಮಾಡಿಲ್ಲ. ತುಕ್ಡೇ ಗ್ಯಾಂಗ್‌ ಜೊತೆ ಯಾರು ರಾಜಕಾರಣ ಮಾಡುತ್ತಿದ್ದಾರೆ?’ ಎಂದು ರವಿ ಕಿಡಿಕಾರಿದರು.

‘ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್‌ ಮತ್ತು ಆರ್‌ಎಸ್‌ಎಸ್‌ ಒಂದೇ ತರ ಕಾಣುತ್ತಿದೆ. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ. ತಾಲಿಬಾನ್‌ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ’ ಎಂದರು.

‘ಬಿಜೆಪಿ– ಆರ್‌ಎಸ್‌ಎಸ್‌ ಇರುವ ಕಾರಣಕ್ಕೆ ದೇಶ ಸ್ವತಂತ್ರವಾಗಿ ಉಳಿದಿದೆ. ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ.ಕೇಶವ ಬಲಿರಾಮ್‌ ಹೆಡಗೇವಾರ್‌ ಅವರು, ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಾಂಗ್ರೆಸ್ಸಿಗರು ಟೀಕಿಸುವ ಮೊದಲು ಅವರದೇ ಚರಿತ್ರೆಯನ್ನು ಅಭ್ಯಸಿಸಲಿ. ಜಂಗಲ್‌ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೊದಲು ಹೆಡಗೇವಾರ್‌ ಅವರು ತಮ್ಮ ಸರಸಂಘ ಚಾಲಕ ಸ್ಥಾನವನ್ನು ಬಿಟ್ಟು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು’ ಎಂದು ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT