ಮಂಗಳವಾರ, ಮಾರ್ಚ್ 28, 2023
33 °C

ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕು ಎಂಬುದೇ ನಿಮ್ಮ ಪ್ರಶ್ನೆ: ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ‘ಯಾವುದೇ ಮಾದರಿಯಲ್ಲಾದರೂ ಸರಿ, ‘ಜಲ್ಲಿಕಟ್ಟು’ ಕ್ರೀಡೆಯನ್ನು (ಎತ್ತು ಬೆದರಿಸುವ ಕ್ರೀಡೆ) ಆಡಲು ಅನುಮತಿ ನೀಡಬೇಕೇ ಎಂಬುದೇ ಅಂತಿಮ ಪ್ರಶ್ನೆಯಂತೆ ತೋರುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. 

ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ‘ಜಲ್ಲಿಕಟ್ಟು’ ಕ್ರೀಡೆ ನಡೆಸಲು ಅನುಮತಿ ನೀಡಿ ಕಾನೂನು ತಿದ್ದುಪಡಿ ಮಾಡಿರುವ ತಮಿಳುನಾಡಿನ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಆಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಂ ಜೋಸೆಫ್‌ ನೇತೃತ್ವದ ಐವರು ಸದಸ್ಯರ ಪೀಠವು ಹೀಗೆ ಹೇಳಿದೆ. 

ಅರ್ಜಿಗಳ ಸಂಬಂಧಿಸಿ ದೀರ್ಘ ಅವಧಿಯ ವಿಚಾರಣೆ ನಡೆಸಿದ ಪೀಠ, ‘ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಲವಾರು ಮುನ್ನೆಚ್ಚರಿಕಾ ಕ್ರಮಗಳು ಮತ್ತು ನಿಯಮಗಳನ್ನು ವಿಧಿಸುವ ಮೂಲಕ ಈ ಕ್ರೀಡೆ ಆಯೋಜಿಸಲು ಅನುವು ಮಾಡಿದೆ. ಸಮಸ್ಯೆ ಏನೆಂದರೆ, ನಿಯಮಗಳು ಏನಾದರೂ ಆಗಿರಬಹುದು ಆದರೆ ಅವು ವಾಸ್ತವದ ಜೊತೆ ಹೊಂದಿಕೆ ಆಗುವುದಿಲ್ಲ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಹಲವಾರು ಸುರಕ್ಷತಾ ಕ್ರಮಗಳ ನಡುವೆಯೂ ಈ ಕ್ರೀಡೆಯು ಪ್ರಾಣಿಗಳನ್ನು ಹಿಂಸಿಸುವ ಕ್ರೀಡೆಯೇ ಎಂದು ಅರ್ಜಿದಾರರ ಪರ ಹಾಜರಾಗಿದ್ದ ಹಲವು ವಕೀಲರು ಈ ವೇಳೆ ಪೀಠಕ್ಕೆ ಹೇಳಿದರು. 

ಈ ಅರ್ಜಿಗಳ ವಿಚಾರಣೆಯನ್ನು ಗುರುವಾರ ಮುಂದುವರಿಸುವುದಾಗಿ ಪೀಠ ಹೇಳಿದೆ. 

ಎತ್ತುಗಳನ್ನು ಹಿಂಸಿಸುವ ಜಲ್ಲಿಕಟ್ಟು, ಎತ್ತಿನ ಗಾಡಿ ಓಟದಂಥ ಕ್ರೀಡೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ 2014ರಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಪರಿಶೀಲಿಸುವಂತೆ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನೂ ಕೋರ್ಟ್‌ ತಳ್ಳಿಹಾಕಿತ್ತು. ಬಳಿಕ, ಕೇಂದ್ರ ಸರ್ಕಾರದ ‘ಪ್ರಾಣಿಗಳ ಹಿಂಸೆ ತಡೆ ಕಾಯ್ದೆ– 1960’ಕ್ಕೆ ತಿದ್ದುಪಡಿ ತಂದಿದ್ದ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿತ್ತು. ‘ಜಲ್ಲಿಕಟ್ಟು ಕ್ರೀಡೆಗೆ ಬಳಸುವ ಎತ್ತುಗಳನ್ನು ಪ್ರೀತಿಯಿಂದ ಸಾಕಲಾಗಿರುತ್ತದೆ. ಅವುಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಲಾಗಿರುತ್ತದೆ. ಹೀಗಾಗಿ ಜಲ್ಲಿಕಟ್ಟು ಕ್ರೀಡೆ ಪ್ರಾಣಿ ಹಿಂಸೆ ಆಗುವುದಿಲ್ಲ’ ಎಂದು ಅದು ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು