ಸೋಮವಾರ, ಅಕ್ಟೋಬರ್ 18, 2021
25 °C

ಜೊಜಿಲಾ: ಏಷ್ಯಾದ ಅತಿ ಎತ್ತರದ ಸುರಂಗ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಡಾಖ್‌ನ ಜೊಜಿಲಾ ಪ್ರಾಂತದಲ್ಲಿನ ಏಷ್ಯಾದಲ್ಲೇ ಅತಿ ಎತ್ತರದ ರಸ್ತೆ ಮಾರ್ಗದಲ್ಲಿ ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರ ವ್ಯವಸ್ಥೆಯ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. 2020ರಲ್ಲಿ ಆರಂಭವಾಗಿರುವ ಕಾಮಗಾರಿಯು 2026ರ ಆರಂಭದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ. ಈ ಸುರಂಗವನ್ನು ಆಧುನಿಕ ಎಂಜಿನಿಯರಿಂಗ್‌ನ ಅದ್ಭುತ ಎನ್ನಲಾಗಿದೆ.

ಅನುಕೂಲಗಳು

l ಶ್ರೀನಗರ-ದ್ರಾಸ್-ಲಡಾಖ್ ಮಧ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಜೊಜಿಲಾ ಪಾಸ್ ಬರುತ್ತದೆ. ಹಿಮಪಾತದ ಕಾರಣ ವರ್ಷದ ಆರು ತಿಂಗಳು ಈ ಪಾಸ್‌ ಅನ್ನು ಮುಚ್ಚಲಾಗುತ್ತದೆ. ಆ ಅವಧಿಯಲ್ಲಿ ಇಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಈ ಸುರಂಗ ಕಾರ್ಯಾರಂಭವಾದರೆ, ಈ ಮಾರ್ಗದಲ್ಲಿ ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರ ಸಾಧ್ಯವಾಗುತ್ತದೆ

l ಇದು ಕಾಶ್ಮೀರ-ಕಾರ್ಗಿಲ್-ಲಡಾಖ್ ಪ್ರಾಂತಗಳಿಗೆ ಮತ್ತು ಗಿಲ್ಗಿಟ್ ಬಲ್ತಿಸ್ತಾನದ ಗಡಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದೆ. ಚೀನಾದ ಜತೆಗಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಸಂಘರ್ಷ ಮತ್ತು ಸೇನಾ ಕಾರ್ಯಾಚರಣೆ ವೇಳೆ ಸೇನೆ ರವಾನೆ ಕಷ್ಟಕರವಾಗಿತ್ತು. ಈ ಸುರಂಗ ಮಾರ್ಗ ಕಾರ್ಯಾರಂಭ ಮಾಡಿದರೆ ತುರ್ತು ಸಂದರ್ಭದಲ್ಲಿ ಸೇನೆ ರವಾನೆ ಸುಲಭವಾಗುತ್ತದೆ

l ಲಡಾಖ್‌ ಮತ್ತು ಜಮ್ಮು-ಕಾಶ್ಮೀರದ ನಡುವೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧ ವೃದ್ಧಿಗೆ ಈ ಸುರಂಗ ನೆರವಾಗಲಿದೆ

l ಜೊಜಿಲಾ ಪಾಸ್‌ ಹಾದುಹೋಗಲು ಈಗ 3 ತಾಸು ಬೇಕು. ಸುರಂಗ ಮಾರ್ಗ ಕಾರ್ಯಾರಂಭ ಮಾಡಿದರೆ 15 ನಿಮಿಷದಲ್ಲಿ ಜೊಜಿಲಾ ಪಾಸ್ ದಾಟಿ ಹೋಗಬಹುದು

2013ರ ಯೋಜನೆ

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಕಂಪನಿಗಳು ಆಸಕ್ತಿ ತೋರಿಸದೇ ಇದ್ದ ಕಾರಣಕ್ಕೆ ಯೋಜನೆ ಕಾಮಗಾರಿ ಆರಂಭವಾಗಿರಲಿಲ್ಲ.

2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯೋಜನೆ ಅನುಷ್ಠಾನಕ್ಕೆ ಮತ್ತೆ ಚಾಲನೆ ನೀಡಿತು. ಆಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸುವ, ಖಾಸಗಿ ಕಂಪನಿ ನಿರ್ಮಾಣ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಐಎಫ್‌ಅಂಡ್ಐಎಸ್‌ ಎಂಬ ಕಂಪನಿ ಗುತ್ತಿಗೆ ಪಡೆದಿತ್ತು. 2018ರಲ್ಲಿ ಗುತ್ತಿಗೆ ರದ್ದುಪಡಿಸಲಾಗಿತ್ತು. 2019ರಲ್ಲಿ ಮೇಘ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್ ಕಂಪನಿ ಯೋಜನೆಯ ಗುತ್ತಿಗೆ ಪಡೆದಿದೆ. 2020ರಲ್ಲಿ ಕಾಮಗಾರಿ ಆರಂಭಿಸಲಾಗಿದೆ.

ಕಾಮಗಾರಿ ಪರಿಶೀಲನೆ

ಸೋನಾಮಾರ್ಗ್: ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಜೊಜಿಲಾ ಸುರಂಗ ಮಾರ್ಗ ಮತ್ತು ಝಡ್‌-ಮೋರ್ ಸುರಂಗ ಮಾರ್ಗಗಳ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಪರಿಶೀಲಿಸಿದರು.

‘2023ರ ಡಿಸೆಂಬರ್ ವೇಳೆಗೆ ಈ ಕಾಮಗಾರಿಗಳು ಪೂರ್ಣಗೊಳ್ಳಬೇಕು. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇವುಗಳನ್ನು ಉದ್ಘಾಟಿಸಬೇಕು. ಏಕೆಂದರೆ ನಾವು 2024ರಲ್ಲಿ ಚುನಾವಣೆ ಎದುರಿಸಬೇಕಿದೆ’ ಎಂದು ಗಡ್ಕರಿ ಹೇಳಿದ್ದಾರೆ. ಆದರೆ ಜೊಜಿಲಾ ಪಾಸ್ ಸುರಂಗಮಾರ್ಗದ ಕಾಮಗಾರಿ 2026ರ ಆರಂಭದ ವೇಳೆಗೆ ಮುಗಿಯುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಸೋಮವಾರವಷ್ಟೇ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು