ಸೈಕಲ್ ರಿಕ್ಷಾ ಸಾಥಿಯ ಕಥೆ

ಬಿಳಿ ಧೋತಿ, ಬಿಳಿ ಜುಬ್ಬ, ಬಿಳಿ ಗಡ್ಡದ ಜತೆಗೆ ತಲೆಗೊಂದು ಟೊಪ್ಪಿ. ಹಳೆಯ ಸೈಕಲ್ ಹಿಂಬದಿಯ ಆಸನದಲ್ಲಿ ಎರಡ್ಮೂರು ಪುಟಾಣಿಗಳು ಕೂತಿರುತ್ತಾರೆ. ಕಲಬುರ್ಗಿಯ ಬಿರು ಬಿಸಿಲಿನಲ್ಲಿ ನಗುಮೊಗದಿಂದಲೇ ಪೆಡಲ್ ತುಳಿಯುತ್ತಾ ಅವರನ್ನು ಬೆಳಿಗ್ಗೆ ಶಾಲೆಗೆ ತಲುಪಿಸುತ್ತಾರೆ. ಸಂಜೆ ವಾಪಸ್ ಅವರವರ ಮನೆಗೆ ಬಿಟ್ಟು ಬರುತ್ತಾರೆ. ಟ್ಯಾಕ್ಸಿ, ಆಟೊಗಳಿರುವ ಕಾಲದಲ್ಲಿ ಹೀಗೆ ಸೈಕಲ್ ಮೇಲೆ ಮಕ್ಕಳನ್ನು ಕರೆದೊಯುತ್ತಿದ್ದಾರೆ ನಾಗಪ್ಪ ಹುಸನಪ್ಪ. ಅವರ ಈ ಸೈಕಲ್ ರಿಕ್ಷಾ ಸೇವೆಗೆ ನಲ್ವತ್ತೈದು ವರ್ಷ. ಅವರಿಗೀಗ 75ರ ಆಸುಪಾಸು !
‘ಸೈಕಲ್ ರಿಕ್ಷಾದಲ್ಲಿ ಯಾರೇ ಕೂರಲಿ. ಅವರು ನಮ್ಮ ಕುಟುಂಬ ಸದಸ್ಯರಿದ್ದಂತೆ. ಅದರಲ್ಲೂ ಮಕ್ಕಳಿದ್ದರೆ, ಎಚ್ಚರಿಕೆ ಜತೆಗೆ, ಪ್ರೀತಿಯೂ ಸೇರಿರುತ್ತದೆ. ಅವರನ್ನು ಶಾಲೆಗೆ ಕರೆದೊಯ್ದು, ವಾಪಸ್ ಮನೆಗೆ ಬಿಡುವವರೆಗೂ ಮೈಯೆಲ್ಲ ಕಣ್ಣಾಗಿರುತ್ತದೆ. ಇದೇ ಕಾರಣಕ್ಕೆ 45 ವರ್ಷಗಳಿಂದ ಪೋಷಕರು ನಮ್ಮ ಮೇಲಿಟ್ಟ ನಂಬಿಕೆ ಉಳಿಸಿಕೊಂಡಿದ್ದೇವೆ’– ನಾಗಪ್ಪ ಅವರ ವಿಶ್ವಾಸದ ನುಡಿ.
ನಾಗಪ್ಪ ಅಷ್ಟೇ ಅಲ್ಲ. ಅವರಂತೆ ಕಲಬುರ್ಗಿಯಲ್ಲಿ ಇನ್ನೂ ಸೈಕಲ್ ರಿಕ್ಷಾ ಇಟ್ಟುಕೊಂಡಿರುವ ನಾಲ್ಕೈದು ಮಂದಿ ಮನದಾಳದ ಮಾತಿದು.
ಕಾರ್ಮಿಕರ ದಿನದ ಮೆಲುಕು
ಹೀಗೆ ನಾಲ್ಕೂವರೆ ದಶಕಗಳಿಂದ ಈ ಕಾಯಕ ಮುಂದುವರಿಸಿಕೊಂಡು ಬಂದಿರುವ ನಾಗಪ್ಪ ಅವರಲ್ಲಿ ಮೈಯೊಳಗಿನ ಕಸುವು ಕೊಂಚ ಕ್ಷೀಣಿಸಿದ್ದರೂ, ಉತ್ಸಾಹ ಮಾತ್ರ ಕುಗ್ಗಿಲ್ಲ.
ಸೈಕಲ್ ತುಳಿದು, ದಣಿವಾರಿಸಿಕೊಳ್ಳುತ್ತಿದ್ದ ನಾಗಪ್ಪ ಅವರನ್ನು ಸೈಕಲ್ ರಿಕ್ಷಾ ಓಡಿಸುವ ಕುರಿತು ಮಾತಿಗೆಳೆದಾಗ, ಮೇ 1 ರ ಕಾರ್ಮಿಕ ದಿನಾಚರಣೆ ಹಾಗೂ ನಾಲ್ಕೂವರೆ ದಶಕಗಳ ಹಿಂದಿದ್ದ ಸೈಕಲ್ ರಿಕ್ಷಾ ಯೂನಿಯನ್ನಿಂದ ಮಾತು ಆರಂಭಿಸಿದರು. ‘ಆಗ ನಾನು ಯೂನಿಯನ್ ಸದಸ್ಯನಾಗಿದ್ದೆ. ಕಮ್ಯುನಿಸ್ಟ್ ಪಾರ್ಟಿ ನಾಯಕರ ಜೊತೆ ಕೆಂಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದೆ. ಹೋರಾಟ, ಹಕ್ಕು ಮತ್ತು ಸೌಲಭ್ಯಗಳ ಕುರಿತು ನಾಯಕರು ಭಾಷಣ ಮಾಡುವುದನ್ನು ಆಲಿಸುತ್ತಿದ್ದೆ’ ಎನ್ನುತ್ತಾ, ಕಾರ್ಮಿಕರ ದಿನಾಚರಣೆಯನ್ನು ಹಬ್ಬದ ರೀತಿ ನೆನಪಿಸಿಕೊಳ್ಳುತ್ತಾರೆ. ದಶಕಗಳಿಂದ ಸೈಕಲ್ ರಿಕ್ಷಾ ಓಡಿಸುತ್ತಿರುವ ಅವರ ಪಾಲಿಗೆ ಸೈಕಲ್ ರಿಕ್ಷಾನೇ ಅನ್ನದಾತ. ಬದುಕಿನ ಜೀವಾಳ ಕೂಡ.
‘ಮೇ 1ರಂದು ಪ್ರತಿ ವರ್ಷ ಕಲಬುರ್ಗಿಯಲ್ಲಿ ಕಾರ್ಮಿಕರ ದೊಡ್ಡ ಕಾರ್ಯಕ್ರಮ ಇರುತ್ತಿತ್ತು. ಸಾವಿರಕ್ಕೂ ಹೆಚ್ಚಿದ್ದ ಸೈಕಲ್ ರಿಕ್ಷಾದವರು, ಕೂಲಿಕಾರ್ಮಿಕರು ಭಾಗವಹಿಸಿ, ಘೋಷಣೆ ಹಾಕುತ್ತಿದ್ದರು. ಈಗ ಯೂನಿಯನ್ ಇಲ್ಲ. ಸೈಕಲ್ ರಿಕ್ಷಾದವರು ಕಡಿಮೆ ಆಗಿದ್ದಾರೆ. ಆಟೊರಿಕ್ಷಾಗಳು ಬಂದ ಬಳಿಕ ಸೈಕಲ್ ರಿಕ್ಷಾ ಓಡಿಸುವವರು ಕಡಿಮೆಯಾದರು’ ಎನ್ನುವಾಗ ಅವರ ಧ್ವನಿ ಕೊನೆಯಲ್ಲಿ ತುಸು ತಗ್ಗಿದಂತಾಯಿತು.
ಆಗ (1970–80) ನಾಗಪ್ಪ 10, 20, 25 ಅಥವಾ 50 ಪೈಸೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ದಿನಕ್ಕೆ ₹ 10 ರಿಂದ ₹ 15 ದುಡಿಮೆ. ಎರಡು ದಿನ ಮಾತ್ರ ವಿಶ್ರಾಂತಿ. ₹ 5ರ ವೆಚ್ಚದಲ್ಲಿ ಸಂತೆ ಮಾಡಿಬಿಟ್ಟರೆ, ವಾರ ಪೂರ್ತಿ ಆಹಾರದ ಕೊರತೆ ಕಾಡುತ್ತಿರಲಿಲ್ಲವಂತೆ.
ಈಗಲೂ ಪ್ರತಿ ದಿನ ಮಕ್ಕಳನ್ನು ಶಾಲೆಗೆ ಕರೆದೊಯ್ದು ಮನೆಗೆ ಬಿಡುವ ನಾಗಪ್ಪಗೆ ಒಮ್ಮೆಯೂ ಆಟೊರಿಕ್ಷಾ ಕೊಳ್ಳುವ ಮನಸ್ಸಾಗಲಿಲ್ಲ. ಅದಕ್ಕೆ ಅವರು ನೀಡುವ ಕಾರಣ: ‘ರಿಕ್ಷಾ ಕೊಂಡರೆ, ನಾನು ನಂಬಿದ ಜನರನ್ನು ಮತ್ತು ಅವರ ಪ್ರೀತಿ–ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಹಳೆಯ ಸೈಕಲ್ ಇದ್ದರೂ ಪೋಷಕರು ನನ್ನ ಮೇಲೆ ನಂಬಿಕೆಯಿಟ್ಟು ಮಕ್ಕಳನ್ನು ಕಳುಹಿಸಿಕೊಡುತ್ತಾರೆ. ಹಣಕ್ಕಿಂತ ನನಗೆ ಜನ ಮತ್ತು ಅವರ ವಿಶ್ವಾಸ ಮುಖ್ಯ’.
‘ಇಬ್ಬರು ದೊಡ್ಡವರು ಮಾತ್ರ ಕೂರುವ ಸಾಮರ್ಥ್ಯವುಳ್ಳ ಸೈಕಲ್ ರಿಕ್ಷಾದಲ್ಲಿ 13 ಮಕ್ಕಳನ್ನು ಕೂರಿಸಿಕೊಂಡು ಒಯ್ದಿದ್ದೇನೆ. ಹೈದರಾಬಾದ್ನಲ್ಲಿ ₹ 2,500ಕ್ಕೆ ಸೈಕಲ್ ರಿಕ್ಷಾ ಖರೀದಿಸಿ, ಅಲ್ಲಿಂದಲೇ ಕಲಬುರ್ಗಿಯವರೆಗೆ ಓಡಿಸಿಕೊಂಡು ಬರಲು ಮೂರು ದಿನ ಬೇಕಾಯಿತು’ ಎಂದು ನಾಗಪ್ಪ ಸೈಕಲ್ ಜೊತೆಗಿನ ಒಡನಾಟ ವಿವರಿಸಿದರು.
ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸೈಕಲ್ ರಿಕ್ಷಾ ಒಮ್ಮೆಯೂ ದುರಸ್ತಿಗೆ ಬಿದ್ದಿಲ್ಲ. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಗಾಲಿಗೆ ಪಂಕ್ಚರ್ ಹಾಕಿಸಲು ಮತ್ತು ಗಾಲಿಯನ್ನು ಬದಲಿಸಲು ಅವರು ಒಂದಿಷ್ಟು ಹಣ ಖರ್ಚು ಮಾಡುತ್ತಾರೆ. ಇದು ಅಲ್ಲದೇ ಅವರಿಗೆ ಬೇರೆ ಬೇರೆ ಹೆಚ್ಚುವರಿ ಖರ್ಚು ಬಂದಿಲ್ಲವಂತೆ.
ವರ್ಷಗಳ ಹಿಂದೆ ಅವರು ಯಾರನ್ನು ಶಾಲೆಗೆ ಕರೆದೊಯ್ದು ಮನೆಗೆ ಬಿಡುತ್ತಿದ್ದೆನೋ, ಈಗ ಅವರ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾರೆ. ಅದರಲ್ಲಿ ವೀಣಾ ಎಂಬುವವರು ಅವರು ವಿದ್ಯಾರ್ಥಿನಿಯಾಗಿದ್ದ ವೇಳೆ ನಾಗಪ್ಪ ಅವರ ಸೈಕಲ್ನಲ್ಲೇ ಕಾಲೇಜಿಗೆ ಹೋಗುತ್ತಿದ್ದರು. ನಂತರ ವೀಣಾ ಅವರ ಮಕ್ಕಳು ಎಸ್ಸೆಸ್ಸೆಲ್ಸಿವರೆಗೆ ನಾಗಪ್ಪ ಅವರ ಸೈಕಲ್ನಲ್ಲೇ ಶಾಲೆಗೆ ಹೋಗುತ್ತಿದ್ದರು. ‘ಒಂದು ಮಗುವಿಗೆ ತಿಂಗಳಿಗೆ ₹ 500 ಕೂಲಿ ಹಣ ಸಿಗುತ್ತದೆ. ಅಲ್ಲದೇ ಅವರ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುತ್ತೇನೆ’ ಎಂದು ನಾಗಪ್ಪ ಹೇಳಿದರು.
‘ನನಗೆ ಮೂವರು ಮೊಮ್ಮಕ್ಕಳಿದ್ದಾರೆ. ಒಬ್ಬಾಕೆ ಎಂ.ಎ ಪೂರ್ಣಗೊಳಿಸಿದ್ದರೆ, ಇನ್ನೊಬ್ಬಾಕೆ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ. ಮೊಮ್ಮಗ ಡಿಪ್ಲೊಮ ಓದುತ್ತಿದ್ದಾನೆ. ಮೂವರಿಗೂ ಶಿಕ್ಷಣ ಕೊಡಿಸುವಲ್ಲಿ ವೀಣಾ ಮತ್ತು ಸರ್ವೋತ್ತಮ ಸತಾಳಕರ ಅವರು ನೆರವಾಗಿದ್ದಾರೆ’ ಎಂದು ಅವರು ನೆನಪಿಸಿಕೊಂಡರು.
ವರ್ಷಗಳು ಉರುಳಿದರೂ, ಕಲಬುರ್ಗಿಯ ಬಹುತೇಕ ಜನರೊಂದಿಗೆ ನಾಗಪ್ಪ ಅವರು ಇಂಥದ್ದೇ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಭಾವನೆಗಳ ಈ ಗಟ್ಟಿ ಕೊಂಡಿಗೆ ಸೈಕಲ್ ರಿಕ್ಷಾನೇ ಆಧಾರ.
‘ಸೈಕಲ್ ರಿಕ್ಷಾ ಮೇರಾ ಸಾಥಿ’
ಸೈಕಲ್ ರಿಕ್ಷಾ ಓಡಿಸುತ್ತಿದ್ದ ಬಹುತೇಕ ಮಂದಿ ಆಟೊರಿಕ್ಷಾ ಚಾಲನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲವರು ಸೈಕಲ್ ರಿಕ್ಷಾ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಕಲಬುರ್ಗಿಯ ಕೃಷಿ ಉತ್ಪನ್ನ ಮಾರುಕಟ್ಟೆ (ನೆಹರೂ ಗಂಜ್) ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತಾರೆ. ಅಬ್ದುಲ್ ಸತ್ತಾರ, ಶರಣಪ್ಪ, ರಾಠೋಡ್ ಮುಂತಾದವರು ಸೈಕಲ್ರಿಕ್ಷಾ ಈಗಲೂ ಓಡಿಸುತ್ತಿದ್ದಾರೆ. ಸರಕು ಸಾಗಣೆ ಮಾಡುತ್ತಾ ಕೆಲವೊಮ್ಮೆ ಬಸ್, ರೈಲು ನಿಲ್ದಾಣಗಳಲ್ಲಿ ಕಾಣಿಸುತ್ತಾರೆ.
ಸೈಕಲ್ ರಿಕ್ಷಾದಲ್ಲಿ ಭಾರವಾದ ವಸ್ತು, ಸರಕುಗಳನ್ನು ಹಾಕಿಕೊಂಡು ಪೆಡಲ್ ತುಳಿಯುವ ಅವರು ಸುಡು ಬಿಸಿಲನ್ನು ಕೂಡ ಲೆಕ್ಕಿಸುವುದಿಲ್ಲ. ಚಪ್ಪಲಿ ಧರಿಸದೇ, ಟೊಪ್ಪಿ ಹಾಕಿಕೊಳ್ಳದೇ, ಬೆವರು ಹರಿಸುತ್ತ, ‘ಸೈಕಲ್ ರಿಕ್ಷಾ ಮೇರಾ ಸಾಥಿ’ ಎಂದು ಗುಣಗುಣಿಸುತ್ತ ಸಾಗುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.