ಶನಿವಾರ, ಸೆಪ್ಟೆಂಬರ್ 18, 2021
30 °C

ಫ್ರಿಜ್‌ನಲ್ಲಿ ಏನಿರಬೇಕು?

ಸುಕೃತ ಎಸ್. Updated:

ಅಕ್ಷರ ಗಾತ್ರ : | |

Prajavani

ಇವತ್ತು ವಾರದ ಸಂತೆ; ಮನೆಗೆ ಅಗತ್ಯವಿರುವಷ್ಟು ತರಕಾರಿ, ಸೊಪ್ಪು ಎಲ್ಲವನ್ನೂ ತಂದಾಯಿತು. ಇವತ್ತು ಮನೆಗೆ ತಿಂಗಳ ಸಾಮಾನು ತರುವ ದಿನ; ಮನೆಗೆ ಕಾಳು–ಕಡಿ, ಅಕ್ಕಿ–ಬೇಳೆ ಮುಂತಾದವುಗಳು ಬಂದವು. ಹೀಗೆ ಮನೆಗೆ ರಾಶಿ ಸಾಮಾನು, ತರಕಾರಿಗಳು ಬಂದು ಬಿದ್ದ ‌ದಿನ, ಅದನ್ನು ಸೇರಿಸಿ ಇಡುವುದೇ ಒಂದು ಒಪ್ಪತ್ತಿನ ಕೆಲಸ.

ಬಂದ ತರಕಾರಿ, ಮನೆ ಸಾಮಾನುಗಳನ್ನು ಸೇರಿಸಿ ಇಡುವ ಹೊತ್ತಿಗೆ ಸದಾ ನಮ್ಮನ್ನು ಒಂದು ವಿಷಯ ಕಾಡಬಹುದು– ಇದನ್ನು ಫ್ರಿಜ್‌ನಲ್ಲಿ ಇಡುವುದಾ ಅಥವಾ ಹೊರಗೆ ಇಡುವುದಾ ಎಂಬುದಾಗಿ. ಫ್ರಿಜ್‌ನಲ್ಲೇ ಇಡುವುದಾದರೆ ಫ್ರಿಜ್‌ ಒಳಗೆ ಇಟ್ಟರೆ ಸಾಕೇ ಅಥವಾ ಫ್ರೀಜರ್‌ನಲ್ಲಿ ಇಡಬೇಕೇ? ಇಲ್ಲಿಗೆ ಮುಗಿಯುವುದಿಲ್ಲ ಸಮಸ್ಯೆ. ಅವುಗಳನ್ನು ಹೇಗೆ ಇಡಬೇಕು ಎಂಬ ತಲೆನೋವು ಶುರುವಾಗುತ್ತದೆ.

ತರಕಾರಿ–ಹಣ್ಣುಗಳಂತೂ ಒಂದೆರಡು ದಿನಕ್ಕೆ ಬಾಡಲಿಕ್ಕೆ ಶುರುವಾಗುತ್ತವೆ. ಈಗಂತೂ ಸಣ್ಣ ಸಣ್ಣ ಕುಟುಂಬಗಳಾದ್ದರಿಂದ ತರಕಾರಿ–ಹಣ್ಣುಗಳು ಮತ್ತು ಮನೆಯ ಇತರ ಕೆಲವು ಅಡುಗೆ ಸಾಮಾನುಗಳು ಬೇಗನೇ ಖಾಲಿ ಆಗುವುದಿಲ್ಲ. ಕೆಲವು ದಿನ ಇಟ್ಟು ತಿನ್ನಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವನ್ನು ಹೇಗೆ ಹಲವು ದಿನ ಫ್ರಿಜ್‌ನಲ್ಲಿ ಇಟ್ಟು ತಿನ್ನಬಹುದು?

ಡ್ರೈ ಫ್ರೂಟ್ಸ್‌ಗಳು ಮತ್ತು ಹಣ್ಣುಗಳು

ಬಾದಾಮಿ, ಗೋಡಂಬಿ, ಪಿಸ್ತಾ, ಒಣದ್ರಾಕ್ಷಿ ಮತ್ತು ಕರ್ಜೂರದಂಥ ಕೆಲವು ಡ್ರೈ ಫ್ರೂಟ್ಸ್‌ಗಳ ತಾಜಾತನವನ್ನು ಹಾಗೆ ಉಳಿಸಿಕೊಳ್ಳಲು ಇವುಗಳನ್ನು ಫ್ರಿಜ್‌ನಲ್ಲಿ ಇಡುವುದೇ ಒಳಿತು. ಗಾಳಿ– ಬೆಳಕಿಗೆ ಬಿಟ್ಟರೆ ಅವುಗಳಿಗೆ ಫಂಗಸ್‌ ಬರುವ ಸಾಧ್ಯತೆ ಹೆಚ್ಚು. ಇವುಗಳನ್ನು ಕಟ್‌ ಮಾಡಿ, ಗ್ರೈಂಡ್‌ ಮಾಡಿದ್ದರೂ ಸರಿ ಗಾಳಿ ಒಳಗೆ ಹೋಗದಂಥ ಮುಚ್ಚಳ ಇರುವ ಡಬ್ಬಿಯಲ್ಲಿ ಹಾಕಿ ಫ್ರೀಜರ್‌ನಲ್ಲಿ ಇಟ್ಟರೆ ಅದರ ತಾಜಾತನವು ಹಾಳಾಗದೆ ಹಾಗೇ ಇರುತ್ತದೆ. ಹೀಗೆ ಮಾಡಿದರೆ, ಆರು ತಿಂಗಳವರೆಗೆ ತಾಜಾತನವನ್ನು ಕಾಪಾಡಿಕೊಳ್ಳಬಹುದಾಗಿದೆ.

ಚಪಾತಿ

ರೆಡಿಮೇಡ್‌ ಚಪಾತಿಗಳು ಈಗ ಅಂಗಡಿ ಮಳಿಗೆಯಲ್ಲಿ ಲಭ್ಯ. ಒಮ್ಮೆ ಪ್ಯಾಕೆಟ್‌ ತೆರೆದರೆ ಒಂದೋ ಎರಡೋ ಚಪಾತಿ ತಿನ್ನಬಹುದು. ಉಳಿದದ್ದನ್ನು ಕೆಡದಂತೆ ಇಡಲು ಹೀಗೆ ಮಾಡಿ– ಸ್ವಲ್ಪವೂ ಗಾಳಿ ಒಳಗೆ ಹೋಗದ ಹಾಗೆ ಒಂದು ಬ್ಯಾಗ್‌ನಲ್ಲಿ ಉಳಿದ ಚಪಾತಿಗಳನ್ನು ಹಾಕಿ ಫ್ರಿಜ್‌ನಲ್ಲಿ ಇಡಿ. ಸುಮಾರು ಏಳು ದಿನಗಳವರೆಗೆ ತಾಜಾ ಆಗಿರುತ್ತವೆ. ಇನ್ನೂ ಹೆಚ್ಚಿನ ದಿನಗಳವರೆಗೆ ತಾಜಾ ಆಗಿಯೇ ಚಪಾತಿಗಳನ್ನು ಇಡಬೇಕು ಎಂದಿದ್ದರೆ, ಚಪಾತಿಗಳ ಮಧ್ಯೆ ವ್ಯಾಕ್ಸ್‌ ಪೇಪರ್‌ ಹಾಕಿ ಗಾಳಿ ಒಳಗೆ ಹೋಗದಂತೆ ಕವರ್‌ ಮಾಡಿ ಫ್ರೀಜರ್‌ನಲ್ಲಿ ಇಡಿ.

ಸೊಪ್ಪುಗಳು

ಹೆಚ್ಚಿನ ಸಂದರ್ಭಗಳಲ್ಲಿ ತಂದ ಸೊಪ್ಪುಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಅಡುಗೆಗೆ ಬಳಸುವುದಕ್ಕಿಂತ ಎಸೆಯುವ ಪ್ರಮಾಣವೇ ಕೆಲವೊಮ್ಮೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಇವುಗಳನ್ನು ಫ್ರಿಜ್‌ನಲ್ಲಿ ಇಡಬಹುದು.

ತೆಳ್ಳಗೆ ಇರುವ ಎಲೆಗಳಿರುವ ಸೊಪ್ಪಿನ ಕೆಳಭಾಗವನ್ನು ಕತ್ತರಿಸಿ, ಒಂದು ಜಾರ್‌ನಲ್ಲಿ ಕಾಂಡ ಮಾತ್ರ ಮುಳುಗುವಂತೆ ತಣ್ಣಗಿನ ನೀರು ಹಾಕಿಡಿ. ಸೊಪ್ಪನ್ನು ಒಂದು ಬ್ಯಾಗ್‌ನಿಂದ ಕವರ್‌ ಮಾಡಿ. ನೀರನ್ನು ಬದಲಾಯಿಸುತ್ತಾ ಇರಿ. ಗಟ್ಟಿ ಕಾಂಡ ಇರುವ ದಪ್ಪ ಎಲೆಯ ಸೊಪ್ಪುಗಳನ್ನು ಪೇಪರ್‌ ಟವಲ್‌ನಲ್ಲಿ ಕಟ್ಟಿ ಇಟ್ಟರೆ ಹೆಚ್ಚು ದಿನಗಳವರೆಗೆ ಬಾಳಿಕೆ ಬರುತ್ತದೆ. ಮೂರು– ನಾಲ್ಕು ವಾರಗಳವರೆಗೆ ಸೊಪ್ಪುಗಳನ್ನು ತಾಜಾ ಆಗಿ ಇಡಬಹುದು.

ಸಿಟ್ರಸ್‌ ಹಣ್ಣುಗಳು

ನಿಂಬೆ ಹಣ್ಣು, ಕಿತ್ತಲೆ ಹಣ್ಣು, ಮೋಸಂಬಿ ಅಂಥ ಸಿಟ್ರಸ್‌ ಹಣ್ಣುಗಳನ್ನು ಫ್ರಿಜ್‌ನಲ್ಲಿ ಇಟ್ಟರೆ ಒಳ್ಳೆಯದು. ಬಿಸಿಲಿಗೆ ಇವುಗಳು ಒಣಗಿ ಬೇಗ ಬಾಡಿಹೋಗುತ್ತವೆ. ಗಾಳಿ ಹೋಗದಂಥ ಬ್ಯಾಗ್‌ನಲ್ಲಿ ಇಟ್ಟರೆ ಒಂದು ತಿಂಗಳವರೆಗೆ ತಾಜಾ ಆಗಿಯೇ ಇರುತ್ತದೆ; ಫ್ರೀಜರ್‌ನಲ್ಲಿ ಇಟ್ಟರೆ ಮೂರು ನಾಲ್ಕು ತಿಂಗಳುಗಳೇ ಉಪಯೋಗಕ್ಕೆ ಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.