ಶನಿವಾರ, ಮೇ 8, 2021
18 °C

ದಾದಾಸಾಹೇಬ್ ಕಾನ್ಶಿರಾಮ್ ನೆನಪಿನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ರಾಜಕಾರಣ ನಿಜಕ್ಕೂ ಆಧುನಿಕೋತ್ತರ ಘಟ್ಟ ವನ್ನು ಪ್ರವೇಶಿಸಿದಂತಿದೆ. ಯಾವುದೇ ಅಲೆ ಬೇಗ ಕಣ್ಮರೆ ಯಾಗಿ ಮತ್ತೊಂದು ಅಲೆ ಸೃಷ್ಟಿಯಾಗುವುದು ಆಧುನಿ ಕೋತ್ತರ ಮಾರ್ಕೆಟ್ ಯುಗದ ಮುಖ್ಯ ಲಕ್ಷಣ. ಈ ದೃಷ್ಟಿ ಯಿಂದ ನೋಡಿದರೆ ಭಾರತದ ರಾಜಕಾರಣದ ಚಿತ್ರಗಳು ವೇಗವಾಗಿ ಬದಲಾಗುತ್ತಿರುವುದು ಹೊಳೆಯುತ್ತದೆ. ಹೊಸ ಮತದಾರರ ಎದುರು ಹೊಸ ಅಲೆಗಳು ಸೃಷ್ಟಿಯಾಗಿ ಪಕ್ಷಗಳು ದೂಳೀಪಟವಾಗತೊಡಗಿವೆ.ಎಂಬತ್ತು-ತೊಂಬತ್ತರ ದಶಕದಲ್ಲಿ ಇಂಥ ಅಲೆ ಯೊಂದನ್ನು ಸೃಷ್ಟಿಸಿದ ತಮ್ಮ ನಾಯಕ ಕಾನ್ಶಿರಾಮ್  ಅವರ ಹುಟ್ಟುಹಬ್ಬವನ್ನು (ಮಾರ್ಚ್ 15) ಮೊನ್ನೆ ಆಚರಿಸಿದ ಬಹುಜನಸಮಾಜ ಪಕ್ಷ ಈ ಹೊಸ ಅಲೆಯನ್ನೂ ಗಮನಿಸುತ್ತಿರಬಹುದು. ಈಚೆಗೆ ಬದ್ರಿನಾರಾಯಣ್ ಬರೆದ  ‘ಕಾನ್ಶಿರಾಮ್: ಲೀಡರ್ ಆಫ್ ದಿ ದಲಿತ್ಸ್’ ಪುಸ್ತಕ ಓದುತ್ತಿರುವಂತೆ ಸಾಮಾಜಿಕ ನ್ಯಾಯದ ರಾಜಕಾರಣದ ಬಗ್ಗೆ ಕಾಳಜಿಯಿರುವವರೆಲ್ಲ ಕಾನ್ಶಿರಾಮ್ ಎಂಬ ವಿಶಿಷ್ಟ ವಿದ್ಯಮಾನವನ್ನು ಆಳವಾಗಿ ಅರಿಯಬೇಕು ಎನಿಸ ತೊಡಗಿತು. ಈ ಅಂಕಣದಲ್ಲಿ ಬಳಸಿರುವ ಕಾನ್ಶಿರಾಮ್  ಕುರಿತ ಅನೇಕ ವಿವರಗಳಿಗೆ ಬದ್ರಿಯವರ ಪುಸ್ತಕಕ್ಕೆ ಋಣಿಯಾಗಿದ್ದೇನೆ.ಪಂಜಾಬಿನಲ್ಲಿದ್ದ ಕಾನ್ಶಿರಾಮರ ಪೂರ್ವಿಕರು ಚಮ್ಮಾರ ಜಾತಿಯಿಂದ ಸಿಖ್ ಧರ್ಮಕ್ಕೆ ಸೇರಿದ್ದರಿಂದ ಎಳವೆಯಲ್ಲಿ ಕಾನ್ಶಿರಾಮ್‌ಗೆ ಅಸ್ಪೃಶ್ಯತೆಯ ಭೀಕರ ಅನುಭವವಾಗಲಿಲ್ಲ. ಆದರೂ ಜಾತಿಯ ನೆರಳು ಆಗಾಗ್ಗೆ ಹಾಯುತ್ತಲೇ ಇತ್ತು. ಒಮ್ಮೆ ಬಾಲಕ ಕಾನ್ಶಿರಾಮ್  ಹೋಟೆಲೊಂದರಲ್ಲಿ ಕೂತಿ ದ್ದಾಗ ಇಬ್ಬರು ಜಮೀನ್ದಾರರು ತಮ್ಮ ಚಮ್ಮಾರ ಆಳುಗಳಿಗೆ ಹೇಗೆ ಹೊಡೆದೆವೆಂದು ಕೊಚ್ಚಿಕೊಳ್ಳುತ್ತಿದ್ದರು.  ಸಿಟ್ಟಾದ ಕಾನ್ಶಿರಾಮ್ ಅಲ್ಲಿದ್ದ ಕುರ್ಚಿಗಳನ್ನು ಎತ್ತಿ ಅವರ ಮೆಲೆ ಬೀಸಿದ. ಒಳ್ಳೆಯ ಆಟಗಾರನಾಗಿದ್ದ ಹುಡುಗ ಚೆನ್ನಾಗಿ ಓದು ತ್ತಿದ್ದ. ಸುಂದರ ತರುಣನಾಗಿ ಬೆಳೆದ ಅವನನ್ನು ಯಾರೋ ಸಿನಿಮಾದಲ್ಲಿ ನಟಿಸಲು ಕೂಡ ಕೇಳಿದ್ದರು! ಒಲ್ಲೆನೆಂದ ಕಾನ್ಶಿರಾಮ್ ಸಂಶೋಧಕರಾಗಿ ಕೆಲಸಕ್ಕೆ ಸೇರಿಕೊಂಡರು.ಅಂಬೇಡ್ಕರ್ ತೀರಿಕೊಂಡ ಮೇಲೆ ಅವರ ಬಗ್ಗೆ ತಿಳಿದುಕೊಂಡ ಕಾನ್ಶಿರಾಮ್, ಅಂಬೇಡ್ಕರ್ ಪುಸ್ತಕಗಳನ್ನು ಓದತೊಡಗಿದರು. ಮುಂದೊಮ್ಮೆ ಅವರು ಕೆಲಸ ಮಾಡು ತ್ತಿದ್ದ ಆಫೀಸಿನವರು ಬುದ್ಧ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿಗೆ ರಜೆ ರದ್ದು ಮಾಡಿ ತಿಲಕ್ ಮತ್ತು ಗೋಖಲೆ ಜಯಂತಿಗಳಿಗೆ ರಜೆ ಘೋಷಿಸಿದರು. ಇದನ್ನು ಪ್ರತಿಭಟಿಸಿದ ಆಫೀಸಿನ ನಾಲ್ಕನೇ ದರ್ಜೆಯ ನೌಕರ ಭಂಗಿ ಸಮು ದಾಯದ ದಿನಭಾನ್ ಕೆಲಸ ಕಳೆದುಕೊಂಡ. ದಿನಭಾನ್ ದುಗುಡದಿಂದ ಕಚೇರಿಯಿಂದ ಹೊರಹೋಗುತ್ತಿದ್ದುದನ್ನು ಕಂಡ ಕಾನ್ಶಿರಾಮ್  ‘ಮುಂದೇನು ಮಾಡುತ್ತೀಯ?’ ಎಂದು ಕೇಳಿದರು. ಅವನು ‘ಕೋರ್ಟಿಗೆ ಹೋಗುತ್ತೇನೆ’ ಎಂದ. ಕಾನ್ಶಿರಾಮ್ ಅವನ ಕೋರ್ಟಿನ ವೆಚ್ಚವನ್ನು ನೋಡಿ ಕೊಂಡರು; ಅಧಿಕಾರಿಗಳಿಗೆ, ಮಂತ್ರಿಗಳಿಗೆ ಪ್ರಕರಣವನ್ನು ವಿವರಿಸಿದರು. ನಾಲ್ಕನೇ ದರ್ಜೆಯ ನೌಕರರನ್ನು ಸಂಘಟಿಸಿ ದರು. ದೂರನ್ನು ರಕ್ಷಣಾ ಮಂತ್ರಿ ಚವಾಣರವರೆಗೂ ಒಯ್ದರು. ದಿನಭಾನ್ ಮತ್ತೆ ನೌಕರಿ ಪಡೆದ. ಬುದ್ಧಜಯಂತಿ, ಅಂಬೇಡ್ಕರ್ ಜಯಂತಿಗಳ ರಜೆಗಳು ಮರಳಿ ಬಂದವು!ಈ ಘಟನೆ ಕಾನ್ಶಿರಾಮರಿಗೆ ಸಂಘಟನೆಯ ಅನಿವಾರ್ಯವನ್ನು ಕಲಿಸಿಕೊಟ್ಟಿತು. ಆಗ ‘ಬಾಮ್ಸೆಫ್’ (ಬ್ಯಾಕ್ವರ್ಡ್ ಅಂಡ್ ಮೈನಾರಿಟಿ ಕಮ್ಯುನಿಟೀಸ್ ಎಂಪ್ಲಾಯೀಸ್ ಫೆಡರೇಷನ್) ರೂಪಿಸಿದ ಕಾನ್ಶಿರಾಮ್  ಮುಂದೆ ‘ಡಿಎಸ್4’ (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ) ಸಂಘಟನೆಯನ್ನೂ ಹುಟ್ಟು ಹಾಕಿದರು. ಕುಟುಂಬದ ಜೊತೆ ಸಂಪರ್ಕ ಕಡಿದು ಕೊಂಡ ಕಾನ್ಶಿರಾಮ್  ಮದುವೆಯಾಗದೇ ಉಳಿದರು. ಅಂಬೇಡ್ಕರ್ ಪುಸ್ತಕಗಳನ್ನು ಆಳವಾಗಿ ಗ್ರಹಿಸಿ, ಸುತ್ತಣ ಸಮಾಜವನ್ನು ನೋಡಿ ಜಾತಿಮೂಲದ ದಮನಗಳನ್ನು ಅರಿಯತೊಡಗಿದರು. ಮಗನನ್ನು ಮತ್ತೆ ಮನೆಗೆ ಕರೆದೊ ಯ್ಯಲು ಪುಣೆಗೆ ಬಂದ ತಾಯಿ, ರಾತ್ರಿಯಿಡೀ ಅಂಬೇಡ್ಕರ್ ಪುಸ್ತಕಗಳನ್ನು ಓದುತ್ತಿದ್ದ ಮಗನನ್ನು ಕೇಳಿದರು: ‘ಕಾಷಿಯಾ, ಅದೇನು ಓದುತ್ತಿದ್ದೀಯ? ಅದರಲ್ಲಿ ಅಂಥಾದ್ದೇನಿದೆ?’ ಮಗ ಮಮತೆಯಿಂದ ಹೇಳಿದ: ‘ಇದರಲ್ಲಿದೆ- ರಾಜ್ಯಾಧಿಕಾರ ಹಿಡಿಯುವ ಮಾಸ್ಟರ್ ಕೀ!’ಕಾನ್ಶಿರಾಮ್ ತಮ್ಮ ಅಧಿಕಾರಿ ಹುದ್ದೆ ಕೈಬಿಟ್ಟು, ಅಂಬೇಡ್ಕರ್ ರೂಪಿಸಿದ ಕ್ರಾಂತಿಕಾರಿ ಚಿಂತನೆಯನ್ನು ಮೂರು ದಶಕಗಳಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅಧಿಕಾರ ಪಡೆವ ರಾಜಕೀಯ ಸಾಧನವ ನ್ನಾಗಿ ವಿಸ್ತರಿಸಿದ ರೀತಿ ಅದ್ಭುತವಾದುದು. ವಿಜ್ಞಾನಿಯಾ ಗಿದ್ದ ಕಾನ್ಶಿರಾಮ್ ವ್ಯವಸ್ಥಿತವಾಗಿ ಚಿಂತಿಸಿ, ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಬಹುಜನಸಮಾಜ ಪಕ್ಷವನ್ನು ಕಟ್ಟಿ ಬೆಳೆಸಿದರು; ಬಾಮ್ಸೆಫ್ ಮೂಲಕ ಪಕ್ಷದ ತಾತ್ವಿಕತೆ, ಯೋಜನೆ ಹಾಗೂ ಹಣಕಾಸಿನ ನಿರ್ವಹಣೆ ಮಾಡಿದರು. ಪಕ್ಷದ ಸಭೆಯನ್ನು ಏರ್ಪಡಿಸಲು ಬರುವವರಿಗೆ ಅವರ ಷರತ್ತುಗಳು: ‘ಸಭೆಗೆ ಹನ್ನೆರಡು ಸಾವಿರ ಜನ; ಪಕ್ಷಕ್ಕೆ ಹನ್ನೆರಡು ಸಾವಿರ ರೂಪಾಯಿ. ಸಭೆಗೆ ಮೂರು ಮೈಲಿ  ದೂರದಲ್ಲಿ ಸೈಕಲ್ ಬಿಟ್ಟು ಯಾವ ವಾಹನವೂ ಇರಬಾರದು’. ಕೆಲವು ದಿನ ಅವರು ಮೂರು ಸಭೆಗಳಲ್ಲಿ ಮಾತಾಡಿ ಮೂವತ್ತೆರಡು ಸಾವಿರ ರೂಪಾಯಿಗಳನ್ನು ಪಕ್ಷಕ್ಕಾಗಿ ಸಂಗ್ರಹಿಸುತ್ತಿದ್ದರು.ಆಗ ಸೈಕಲ್ ಮೇಲೆ ಊರೂರು ಸುತ್ತುತ್ತಿದ್ದ ಕಾನ್ಶಿರಾಮ್, ಕಾರ್ಯಕರ್ತರ ಮನೆಯಲ್ಲಿ ಉಂಡು ಅಲ್ಲೇ ಮಲಗುತ್ತಿದ್ದರು. ಸಾಹಿತಿ, ಕಲಾವಿದರ ಜೊತೆ ಕೂತು ಚರಿತ್ರೆಯಲ್ಲಿ ಹೂತುಹೋದ ಕೆಳಜಾತಿಗಳ ಸಾಂಸ್ಕೃತಿಕ ನಾಯಕ, ನಾಯಕಿಯರನ್ನು ಕುರಿತ ಹಾಡು, ಕತೆ ಬರೆಸುತ್ತಿದ್ದರು. ದಲಿತರ ಮೇಲೆ ನಡೆದ ದೌರ್ಜನ್ಯಗಳ ಪತ್ರಿಕಾ ವರದಿಗಳನ್ನು ಟ್ರಂಕಿನಲ್ಲಿ ತುಂಬಿಕೊಂಡು ಹೋಗಿ ಸಭೆಯ ಸುತ್ತ ಪ್ರದರ್ಶಿಸುತ್ತಿದ್ದರು. ‘ಜೈರಾಮ್‌ಗೆ ಪ್ರತಿಯಾಗಿ ‘ಜೈ ಭೀಮ್’ ನಮಸ್ಕಾರವನ್ನು ಜನಪ್ರಿಯಗೊಳಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಜಾತಿಗಳು ತಮ್ಮ ಪಾಲು ಪಡೆಯಬೇಕು ಎಂದ ಅವರು, ಅಧಿಕಾರ ಪಡೆಯದ ಸಣ್ಣಪುಟ್ಟ ಜಾತಿಗಳಿಗೆ ಅಧಿಕಾರದ ಸಾಧ್ಯತೆ ತೋರಿಸಿದರು. ಇತರ ರಾಜಕೀಯ ಪಕ್ಷಗಳ ಚಮಚಾಗಿರಿ ಮಾಡುವುದನ್ನು ಬಿಡಬೇಕೆಂಬುದನ್ನು ಬಹುಜನರಿಗೆ ಕಲಿಸಿದರು.ಮುಂದೆ ಉತ್ತರಪ್ರದೇಶದಲ್ಲಿ ಬಿಜೆಪಿ ಬೆಂಬಲದಿಂದ ಬಿಎಸ್‌ಪಿ ಅಧಿಕಾರ ಹಿಡಿಯುವ ಘಟ್ಟದಲ್ಲಿ ಕಾನ್ಶಿರಾಮರ ಆರೋಗ್ಯ ಕುಸಿಯತೊಡಗಿತ್ತು. ತಾವು ಭವಿಷ್ಯದ ನಾಯಕಿ ಯಾಗಿ ಬೆಳೆಸಿದ್ದ ಮಾಯಾವತಿಯವರನ್ನೇ ಕಾನ್ಶಿರಾಮ್  ಮುಖ್ಯಮಂತ್ರಿಯಾಗಿಸಿದರು. ಆಮೇಲೆ ವಾಜಪೇಯಿಯ ವರು ರಾಷ್ಟ್ರಪತಿಯಾಗಲು ಕಾನ್ಶಿರಾಮರನ್ನು ಆಹ್ವಾನಿಸಿ ದಾಗ ‘ಒಲ್ಲೆ, ನಾನು ಪ್ರಧಾನಮಂತ್ರಿಯಾಗುವೆ’ ಎನ್ನುವಷ್ಟು ಎತ್ತರಕ್ಕೆ ಬೆಳೆದಿದ್ದರು.ಅಂಬೇಡ್ಕರ್ ಚಿಂತನೆಗಳನ್ನು ಅಧಿ ಕಾರ ರಾಜಕಾರಣದ ನೆಲೆಯಲ್ಲಿ ವಿಸ್ತರಿಸಿದ ಕಾನ್ಶಿರಾಮ ರನ್ನು ಅಭಿಮಾನಿಗಳು ಪ್ರೀತಿಯಿಂದ ದಾದಾಸಾಹೇಬ್ ಎನ್ನುತ್ತಿದ್ದರು. 3 ವರ್ಷಗಳು ಮಿದುಳಿನ ಸ್ಟ್ರೋಕಿನಿಂದ ನವೆದ ಮಾನ್ಯವರ್ ಕಾನ್ಶಿರಾಮ್ 2006ರ ಅ. 9ರಂದು ತೀರಿಕೊಂಡರು. ಅಷ್ಟು ಹೊತ್ತಿಗೆ ಭಾರತದ ರಾಜಕಾರಣ ದಲ್ಲಿ ಕಾನ್ಶಿರಾಮ್ ಯುಗ ಸ್ಪಷ್ಟವಾಗಿ ವಿಕಾಸಗೊಂಡಿತ್ತು.ಈ ನಡುವೆ, ಬಿಎಸ್‌ಪಿ ಹಲವು ಪಕ್ಷಗಳ ಜೊತೆ ಸೇರಿ ಹಾಗೂ ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ದು, ತನ್ನ ಕಾರ್ಯಯೋಜನೆ ಸಾಧಿಸಿದ್ದು, ದಲಿತರ ಹಿತ ಕಾಯ್ದದ್ದು, ಅದರ ರಾಜಿ ರಾಜಕಾರಣ, ಏಳುಬೀಳುಗಳು ಇವೆಲ್ಲ ಈಗ ಇತಿಹಾಸ. ಇನ್ನೆರಡು ವರ್ಷಗಳಲ್ಲಿ ಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ರಣತಂತ್ರದ ಜೊತೆಗೇ ಅಂಬೇ ಡ್ಕರ್ ಹಾಗೂ ಕಾನ್ಶಿರಾಮ್ ಮಾರ್ಗಗಳನ್ನು ಅದು ಹೇಗೆ ಬೆಳೆಸಬಹುದು ಎಂಬ ಕುತೂಹಲವೂ ನನ್ನಂಥವರಲ್ಲಿದೆ.ಕರ್ನಾಟಕದಲ್ಲಿ ಎಂಬತ್ತರ ದಶಕದ ಕೊನೆಯಲ್ಲಿ ಕಾನ್ಶಿರಾಮ್ ಭೇಟಿಯ ನಂತರ ಬಿಎಸ್‌ಪಿ ಉತ್ಸಾಹದಿಂ ದಲೇ ಬೆಳೆಯತೊಡಗಿತು. ಸಾಮಾಜಿಕ ಚಳವಳಿಗಳ ಗುರಿ ರಾಜ್ಯಾಧಿಕಾರ ಹಿಡಿಯುವುದು ಎಂಬುದು ದಲಿತ ಚಳವಳಿಗೆ ಮನವರಿಕೆಯಾಗತೊಡಗಿತ್ತು; ಅದನ್ನು ಒಪ್ಪದವರೂ ಇದ್ದರು. ದಲಿತ ಚಳವಳಿಯ ಕೆಲವರಾದರೂ ಬಿಎಸ್‌ಪಿಯ ಚಿಂತನಚಿಲುಮೆಯಾಗಿ ಕೆಲಸ ಮಾಡಬಯಸಿ ದ್ದರು. ಅದು ಆಗಲಿಲ್ಲ. ಚುನಾವಣೆಯಲ್ಲಿ ಬಿಎಸ್‌ಪಿ ಗಳಿಸಿದ ಮತಗಳು ಕಾಂಗ್ರೆಸ್ಸನ್ನು ಸೋಲಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತಿದ್ದವು.ಆದರೂ ಅದರ ತೀವ್ರ ನುಡಿಗಟ್ಟು ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಲಿಲ್ಲ. ಪಕ್ಷದ ಭಾಷಣಕಾರರ ಗಾಂಧೀವಿರೋಧವೂ ಕರ್ನಾಟಕದಲ್ಲಿ ಅದರ ಹಿನ್ನಡೆಗೆ ಕಾರಣವಾಗಿರಬಹುದು. ಬಿಎಸ್‌ಪಿ, ಮಹಾರಾಷ್ಟ್ರದ ಶಾಹು ಮಹಾರಾಜರನ್ನು ಮುನ್ನೆಲೆಗೆ ತಂದಂತೆ ಕರ್ನಾಟಕದಲ್ಲಿ ಮೀಸಲಾತಿಯನ್ನು ಜಾರಿಗೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರನ್ನು ಸಾಂಸ್ಕೃತಿಕ ನಾಯಕರ ನ್ನಾಗಿ ಪ್ರತಿಷ್ಠಾಪಿಸಲೆತ್ನಿಸಿತು. ಅದು ಪಕ್ಷಕ್ಕೆ ಸ್ಥಳೀಯ ಭಾವ ನಾತ್ಮಕ ನೆಲೆಯನ್ನೇನೂ ಸೃಷ್ಟಿಸಲಿಲ್ಲ. ಲೇಖಕ ಸಿ.ಕೆ. ಮಹೇಶ್ ಹೇಳಿದಂತೆ ‘ಕಾನ್ಶಿರಾಮ್  ಬಿಎಸ್‌ಪಿಯನ್ನು ‘ಬಹುಜನ ಸಮಾಜ ಚಳವಳಿ’ ಎನ್ನುತ್ತಿದ್ದರು’. ಕರ್ನಾಟಕದಲ್ಲಿ ಮಿಲಿ ಟೆಂಟ್ ದಲಿತ ಚಳವಳಿಯ ಮಟ್ಟದಲ್ಲೇ ನಿಂತಿರುವ ಬಿಎಸ್‌ಪಿ ಹಿಂದುಳಿದ ಜಾತಿಗಳನ್ನು ಒಳಗೊಂಡು, ‘ಬಹು ಜನ ಚಳವಳಿ’ಯಾಗುವ ನಿಟ್ಟಿನಲ್ಲಿ ಇನ್ನೂ ನಡೆದಂತಿಲ್ಲ.ಬಹುಕಾಲ ಕರ್ನಾಟಕದಲ್ಲಿ ದಲಿತ ಚಳವಳಿಯನ್ನು ಕಟ್ಟಿದ್ದ ನಾಯಕರನ್ನೇ ಅತಿಯಾಗಿ ಆಕ್ಷೇಪಿಸತೊಡಗಿದ್ದು ಕೂಡ ಕರ್ನಾಟಕದಲ್ಲಿ ಬಿಎಸ್‌ಪಿಯ ಸ್ಥಗಿತತೆಗೆ ಒಂದು ಕಾರಣವಾಗಿರಬಹುದು. ಕಳೆದ ಚುನಾವಣೆಯಲ್ಲಿ ಅಧಿಕಾರ ರಾಜಕಾರಣದ ಒತ್ತಾಯಗಳಿಂದಾಗಿ ಮೂಲ ‘ಬಹುಜನ’ ತತ್ವವನ್ನು ‘ಸರ್ವಜನ್’ ಘೋಷಣೆಯನ್ನಾಗಿಸಿ ತೆಳುಗೊಳಿಸಿದ ಬಿಎಸ್‌ಪಿಗೆ ತನ್ನ ಪೂರ್ವಿಕನಾದ ದಲಿತ ಚಳವಳಿಯನ್ನು ಸೋದರನಂತೆ ಕಾಣುವುದು, ಅದರ ಜೊತೆ ಮಾತುಕತೆ ನಡೆಸುವುದು, ಸಲಹೆ, ಮಾರ್ಗದರ್ಶನಗಳನ್ನು ಕೊಡು ವುದು ಹಾಗೂ ಪಡೆಯುವುದರ ಬಗ್ಗೆ ಮುಜುಗರಗಳಿರ ಬಾರದು.ಹಾಗೆಯೇ, ಅನಗತ್ಯವಾದ ಗಾಂಧೀನಿಂದನೆ ಯನ್ನು ಕೈ ಬಿಡುವುದು ಕೂಡ ಅದಕ್ಕೆ ಕಷ್ಟವಾಗಬಾರದು. ಈ ಕಾಲದ ರಾಜಕಾರಣಕ್ಕೆ ಬೇಕಾದ, ಎಲ್ಲರನ್ನೂ ಒಳ ಗೊಳ್ಳುವ ‘ಇನ್ಕ್ಲೂಸಿವ್’ ಭಾಷೆಯನ್ನು ಬಳಸುವುದು ಆ ಪಕ್ಷಕ್ಕೀಗ ಅಗತ್ಯವಾಗಿದೆ. ಸ್ವತಃ ಮಾಯಾವತಿಯವರೇ ತಮ್ಮ ನುಡಿಗಟ್ಟನ್ನು ಬದಲಾಯಿಸಿಕೊಂಡು ಅನೇಕ ಹೊಂದಾಣಿಕೆ ಗಳನ್ನು ಮಾಡಿಕೊಂಡ ಮೇಲಂತೂ ಆ ಪಕ್ಷದ ಇತರ ನಾಯಕರಿಗೆ ಇಂದಿನ ರಾಜಕಾರಣಕ್ಕೆ ಅಗತ್ಯವಾದ ಭಾಷೆ ಯನ್ನು ರೂಢಿಸಿಕೊಳ್ಳುವುದು ಇನ್ನಷ್ಟು ಜರೂರಾಗುತ್ತದೆ.ಕೊನೆ ಟಿಪ್ಪಣಿ: ಸೈಕಲ್ ಮತ್ತು ಆನೆ

ಶ್ರೀಮಂತ ಪಕ್ಷಗಳ ಕಾರು, ಜೀಪುಗಳ ಭರಾಟೆಯೆದುರು ಬಿಎಸ್‌ಪಿಯ ಕಾರ್ಯಕರ್ತರು ಸೈಕಲ್ ಬಳಸಬೇಕೆಂದು ಕಾನ್ಶಿರಾಮರಿಗೆ ಸೈಕಲ್ ಜೊತೆಗೆ ಭಾವನಾತ್ಮಕ ನಂಟೊಂ ದಿತ್ತು. ಅವರು ಪುಣೆಯಿಂದ ಮುಂಬೈಗೆ ಬಂದು ಸಂಘಟನೆ ಮಾಡುತ್ತಿದ್ದ ಕಾಲದಲ್ಲಿ ಪ್ರತಿದಿನ ಗೆಳೆಯ ಮನೋಹರ್ ಅತೆಯವರ ಜೊತೆ ಸೈಕಲ್ ತುಳಿದು ಪುಣೆ ರೈಲ್ವೆ ಸ್ಟೇಷನ್ನಿ ನಲ್ಲಿ ಸೈಕಲ್ ಬಿಟ್ಟು, ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ಹತ್ತಿ ಮುಂಬೈ ತಲುಪುತ್ತಿದ್ದರು.ಮತ್ತೆ ಸಂಜೆ ಮುಂಬೈನಿಂದ ಪುಣೆ ತಲುಪಿ ಸೈಕಲ್ ತುಳಿದು ಹದಿನೈದು ಮೈಲು ದೂರದಲ್ಲಿದ್ದ ಸಂಘಟನೆಯ ಆಫೀಸ್ ತಲುಪುತ್ತಿದ್ದರು. ಒಂದು ಸಂಜೆ ಗೆಳೆಯರಿಬ್ಬರ ಬಳಿಯೂ ಹಣವಿರಲಿಲ್ಲ. ಊಟವಿಲ್ಲದೆ  ಹಾಗೇ ಮಲಗಿದರು. ಬೆಳಗ್ಗೆ ಎದ್ದು ಮುಂಬೈಗೆ ಹೊರಟ  ಕಾನ್ಶಿರಾಮ್,  ಅತೆಯವರನ್ನು ‘ದುಡ್ಡಿದೆಯಾ?’ ಎಂದರು. ಅವರ ಬಳಿ ದುಡ್ಡಿರಲಿಲ್ಲ. ಕಾನ್ಶಿರಾಮ್ ಅಸಹಾಯಕರಾಗಿ ‘ಸೈಕಲ್ಲಿಗೆ ಬ್ಲೋ ಹೊಡೆಸಲು ಐದು ಪೈಸೆಯಾದರೂ ಇದ್ದರೆ ನೋಡು’ ಎಂದರು. ಅದೂ ಇರಲಿಲ್ಲ. ಗೆಳೆಯನ ಚಕ್ರದಲ್ಲೂ ಗಾಳಿಯಿರಲಿಲ್ಲ. ಟ್ರೈನ್ ತಪ್ಪೀತೆಂದು ಕಾನ್ಶಿರಾಮ್ ರೈಲ್ವೆ ಸ್ಟೇಷನ್ನಿನತ್ತ ಓಡತೊಡಗಿದರು.ಮುಂದೆ ಕಾನ್ಶಿರಾಮ್ ಆನೆಯನ್ನು ತಮ್ಮ ಪಕ್ಷದ ಸಂಕೇತವಾಗಿರಿಸಿಕೊಂಡರು. ಸಮಾಜವಾದಿ ಪಕ್ಷ ಸೈಕಲ್ಲನ್ನು ಆರಿಸಿಕೊಂಡಿತು.  ಉತ್ತರಪ್ರದೇಶದ ಕಳೆದ ಚುನಾವಣೆಯ ಕಾಲದಲ್ಲಿ ಚಾನೆಲ್ಲೊಂದರ ಆ್ಯಂಕರ್ ಮತ್ತು ಎಸ್‌ಪಿಯ ಅಖಿಲೇಶ್ ಯಾದವ್ ಕ್ಯಾಮೆರಾದ ಎದುರು ಸೈಕಲ್ಲಿನಲ್ಲಿ ಜಾಲಿಯಾಗಿ ಅಡ್ಡಾಡುತ್ತಾ ಸಂದರ್ಶನದ ಆಟ ನಡೆಸುತ್ತಿ ದ್ದರು! ಒಂದು ಕಾಲಕ್ಕೆ ಕಾನ್ಶಿರಾಮ್ ಹಾಗೂ ಮಾಯಾವತಿ ಹಳ್ಳಿಹಳ್ಳಿಗಳಿಗೆ ಸೈಕಲ್ ತುಳಿದು ಆನೆಯನ್ನು ಗೆಲ್ಲಿಸಿದ್ದು ನೆನಪಾಗಿ, ಅಖಿಲೇಶರ ಸೈಕಲ್ ಸ್ಟಂಟ್ ಎದ್ದು ಕಾಣತೊಡ ಗಿತ್ತು. ಈಗ ಬಿಎಸ್‌ಪಿಯ ಸೈಕಲ್ ಕಳೆದುಹೋದ ಕತೆಯೂ ಕಾಡತೊಡಗಿದೆ. editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.