ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಸ್ವಚ್ಛ ಭಾರತ

Last Updated 13 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕಳೆದ ಏಳೆಂಟು ವರ್ಷದಿಂದ ಕೊಟ್ಟೂರಿನಲ್ಲಿ ಸ್ವಯಂ ಆಸಕ್ತಿಯಿಂದ ಪ್ರತಿನಿತ್ಯ ಪೌರ ಕಾರ್ಮಿಕರ ಜತೆ ಕಸ ಎತ್ತುವ ಶಿಕ್ಷಕ ನಾಗರಾಜ ಬಗ್ಗೆ ಮಿತ್ರ ಸತೀಶ್ ಪಾಟೀಲ್ ಗಮನಸೆಳೆದಾಗ ನನಗೆ ಅಚ್ಚರಿಯಾಗಿತ್ತು. ಈಚೆಗೆ ಕೊಟ್ಟೂರಲ್ಲಿ ನಾಗರಾಜರನ್ನು ಭೇಟಿ ಮಾಡಿದ್ದೆ. ರಸ್ತೆ ಬದಿ ಮಾತನಾಡುತ್ತಾ ನಿಂತಾಗ, ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಪೌರ ಕಾರ್ಮಿಕರು ನಾಗರಾಜರನ್ನು ನೋಡಿ ಮುಖ ಅರಳಿಸಿ ‘ಮೇಷ್ಟ್ರೇ’ ಎಂದು ಮಾತನಾಡಿಸಿದರು. ನಾಗರಾಜ ಕೂಡ ಅವರಲ್ಲೊಬ್ಬರಂತೆ ಆತ್ಮೀಯವಾಗಿ ಮಾತಿಗಿಳಿದರು. ನಾಗರಾಜರು ನನ್ನನ್ನು ಅವರಿಗೆ ಪರಿಚಯಿಸಿದಾಗ ‘ಈ ಮೇಷ್ಟ್ರು ನಮಗೆ ಶಕ್ತಿ ಇದ್ದಂಗೆ ಸರ್, ನಮ್ಮ ಕಷ್ಟಕ್ಕೆ ಅಕ್ಕಾರೆ, ನಾವ್ ಬ್ಯಾಡ ಅಂದ್ರೂ ನಮ್ ಜತೆ ಕೆಲಸ ಮಾಡ್ತಾರೆ, ನಮ್ಮನ್ನ ಮನ್ಷಾರು ಅಂತಾನೂ ನೋಡದೆ ಇರೋವಾಗ ಈ ಮೇಷ್ಟ್ರು ನಮ್ಮನ್ನು ಗೌರವಿಸ್ತಾರೆ’ ಎಂದು ನಾಗರಾಜರ ಬಗ್ಗೆ ಅಭಿಮಾನದ ಮಾತನಾಡಿದ್ದರು. ಇದನ್ನು ನೋಡುತ್ತಿದ್ದಂತೆ ಈ ವ್ಯಕ್ತಿ ಹೇಗೆ ಪೌರಕಾರ್ಮಿಕರ ಮನದಲ್ಲಿ ಬೇರೂರಿದ್ದಾರೆ ಅನ್ನಿಸಿತು.

ಕೊಟ್ಟೂರು ಸಮೀಪದ ಬಯಲು ತುಂಬರಗುದ್ದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ನಾಗರಾಜ ಬಂಜಾರ ಮೂಲತಃ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಅಡವಿ ಮಲ್ಲನಕೇರಿ ತಾಂಡದವರು. ಮೇಘನಾಯಕ ಮತ್ತು ಲಕ್ಷ್ಮೀಬಾಯಿ ಅವರ ಪುತ್ರ. ಇವರ ತಂದೆ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಜವಾನರಾಗಿ ಕೆಲಸ ಮಾಡುತ್ತಾ ಕಾಲೇಜನ್ನು ಸ್ವಚ್ಛವಾಗಿಟ್ಟಿದ್ದರು, ಕಾಲೇಜಿನ ಪರಿಸರವನ್ನೂ ಹಸಿರಾಗಿಸಿದ್ದರು. ಮನೆಯಲ್ಲಿ ಸ್ವಚ್ಛತೆಯ ಪಾಠವೂ ನಡೆಯುತ್ತಿತ್ತು. ಅಪ್ಪನ ಮಾತುಗಳಿಗೆ ಅಷ್ಟಾಗಿ ಕಿವಿಗೊಡದ ನಾಗರಾಜ ತನ್ನ ವೃತ್ತಿ ಮುಂದುವರಿಸಿದ್ದರು. ತಂದೆ ಅನಾರೋಗ್ಯದಿಂದ ತೀರಿದ ಬಳಿಕ, ಅಪ್ಪನ ಸ್ವಚ್ಛತೆಯ ಅರಿವು ಅವರಿಗೆ ಕಾಡತೊಡಗಿತು. ಅಪ್ಪನ ಆಸೆಯನ್ನು ಆಚರಣೆಗೆ ತರುವ ಮೂಲಕ ಆತನನ್ನು ಗೌರವಿಸಬೇಕು ಎನ್ನುವ ಸಣ್ಣ ಆಲೋಚನೆ ಹೊಳೆಯಿತು.

ಈ ಆಲೋಚನೆ ಮನದೊಳಗೇ ಬೆಳೆದು ಬೆಟ್ಟವಾಯಿತು. ‘ನಾವು ಗಲೀಜು ಮಾಡುವುದನ್ನು ಪೌರಕಾರ್ಮಿಕರು ಎತ್ತುತ್ತಾರೆ. ಅವರ ಜತೆ ನಾನ್ಯಾಕೆ ಕೈಜೋಡಿಸಬಾರದು’ ಎನ್ನುವ ಆಲೋಚನೆ ಬಂತು. ಆದರೆ, ಮಡದಿ, ತಾಯಿ, ಸ್ನೇಹಿತರು ಹೇಗೆ ನೋಡುತ್ತಾರೋ ಎಂಬ ಆತಂಕವೂ ಕಾಡಿತು. 2012ರ ಒಂದು ದಿನ ‘ಇವೆಲ್ಲವನ್ನೂ ಸರಿಸಿಟ್ಟು’ ಪೌರ ಕಾರ್ಮಿಕರ ಜತೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡರು. ಮೊದ ಮೊದಲು ಪೌರಕಾರ್ಮಿಕರಿಗೆ ಭಯವಾಯಿತು, ‘ಸ್ವಾಮಿ ನೀವು ಮೇಷ್ಟ್ರು ನಿಮಗೆ ಸಮಾಜದಲ್ಲಿ ಗೌರವವಿದೆ, ನೀವ್ಯಾಕೆ ನಮ್ಮ ಕೀಳು ಕೆಲಸ ಮಾಡಿ ಮರ್ಯಾದೆ ಕಳಕೊಳ್ತೀರಿ’ ಎಂದರು. ಇವರನ್ನು ನೋಡಿದವರು ‘ಯಾಕೆ ಮೇಷ್ಟ್ರೇ ಸ್ಕೂಲ್ ಬಿಟ್ಟು ಮುನ್ಸಿಪಾಲ್ಟಿಗೆ ಸೇರಿಕೊಂಡ್ರಾ’ ಎಂದು ಗೇಲಿ ಮಾಡಿದರು. ‘ನೌಕರಿ ಸಿಕ್ಕಾತಿ ಆರಾಮಾಗಿ ಇದ್ಕಂಡೋಗು ಯಾಕ ಹಿಂಗ್ ಮಾಡ್ತೀ’ ಅಂತ ಎಂದು ತಾಯಿ, ಪ್ರೀತಿಯಿಂದಲೇ ಗದರಿದ್ದರು. ಎದುರು ಹೇಳಲಾರದೆ ಹೆಂಡತಿ ಮುಸಿಮುಸಿ ಕೋಪಗೊಂಡಿದ್ದರು. ಇದೆಲ್ಲಕ್ಕೂ ನಾಗರಾಜ ಕಿವುಡಾದರು. ತನ್ನ ಕಾರ್ಯ ಮುಂದುವರಿಸಿದರು. ವರ್ಷದಿಂದ ವರ್ಷಕ್ಕೆ ಪೌರಕಾರ್ಮಿಕರೂ ಆಪ್ತರಾದರು. ನಾಗರಾಜರ ಚಟುವಟಿಕೆ ಮುಂದುವರಿದಾಗ ಟೀಕೆಗಳೆಲ್ಲಾ ಪ್ರಶಂಸೆಗಳಾಗುವತ್ತ ಸಾಗಿದವು. ಇದೀಗ ಒಂದಿನ ಮನೇಲಿದ್ರೆ ಮಗಳು ‘ಅಪ್ಪಾ ಯಾಕೆ ಸ್ವಚ್ಛ ಭಾರತಕ್ಕೆ ಹೋಗಿಲ್ಲ’ ಎಂದು ಕೇಳುತ್ತಾಳೆ.

ನಾಗರಾಜ ಪೌರಕಾರ್ಮಿಕರ ಜತೆ ಕಸ ಎತ್ತುವುದಷ್ಟಕ್ಕೆ ಸೀಮಿತವಾಗಲಿಲ್ಲ, ನಿಧಾನಕ್ಕೆ ಪೌರ ಕಾರ್ಮಿಕರ ಸಮಸ್ಯೆಗಳಿಗೆ ನೆರವಾಗತೊಡಗಿದರು. ಸಂಘ ಸಂಸ್ಥೆಗಳಿಂದಲೂ ಅವರಿಗೆ ನೆರವು ಸಿಗುವಂತೆಯೂ, ಅವರ ಕಾರ್ಯಕ್ರಮಗಳಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವಂತೆಯೂ ಮಾಡಿದರು. ಹೀಗೆ ನಿರಂತರ ಒಡನಾಟದ ಮೂಲಕ ಪೌರ ಕಾರ್ಮಿಕರಲ್ಲಿ ಕೆಲವು ಬದಲಾವಣೆ ತರುವಲ್ಲಿಯೂ ಯಶಸ್ವಿಯಾದರು.

ಮೊದ ಮೊದಲು ಆರೋಗ್ಯದ ಬಗ್ಗೆ ಅಷ್ಟೇನು ಕಾಳಜಿ ಇಲ್ಲದ ಪೌರಕಾರ್ಮಿಕರು ಈಗೀಗ ಕಾಳಜಿ ವಹಿಸತೊಡಗಿದ್ದಾರೆ. ಜನರು ಮೊದಲು ಪೌರ ಕಾರ್ಮಿಕರನ್ನು ಹೆಸರಿಡಿದು ಕರೆಯುತ್ತಿರಲಿಲ್ಲ. ಈಗ ಅವರನ್ನು ಹೆಸರಿಡಿದು ಮಾತಾಡಿಸುವ ಮಟ್ಟಿಗೆ, ಅವರು ಮಾಡಿದ ಕೆಲಸ ನೋಡಿ ಥ್ಯಾಂಕ್ಸ್ ಹೇಳುವ ಮಟ್ಟಿಗೆ ಜನರಲ್ಲಿ ಬದಲಾವಣೆ ಬಂದಿದೆ. ಮುಖ್ಯವಾಗಿ ಪೌರಕಾರ್ಮಿಕರನ್ನು ಸಂಘಟಿಸುವ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವ, ಅವರಿಗಾಗುವ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವ ಬಗ್ಗೆ ನಾಗರಾಜ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.

‘ಒಂದು ತಂಡ ಮಾಡ್ಕೊಂಡು ಪ್ರತಿ ಗ್ರಾಮಪಂಚಾಯ್ತಿಯಲ್ಲಿ ಬೀದಿ ನಾಟಕ ಮಾಡ್ತಿದ್ವಿ. ಮುಂದೆ ಪೌರ ಕಾರ್ಮಿಕರ ಕಲ್ಯಾಣ ನಿಧಿ ಅಂತ ಮಾಡಿ, ಹೊರಗಿನವರಿಗಿಂತ ಪೌರ ಕಾರ್ಮಿಕರನ್ನೇ ತರಬೇತಿಗೊಳಿಸಿ ಬೀದಿ ನಾಟಕ ಮಾಡಿಸಬೇಕು ಅಂತ ಪ್ಲಾನ್ ಇದೆ ಸರ್’ ಎಂದು ಮುಂದಿನ ಚಟುವಟಿಕೆ ಬಗ್ಗೆ ನಾಗರಾಜ ಹೇಳುತ್ತಾರೆ. ದೇಹದ ಆರೋಗ್ಯ ಕಾಪಾಡುವ ಡಾಕ್ಟರ್ ಹತ್ರ ಹೋದಾಗ ನಮಗೆ ಎಷ್ಟೇ ಸುಸ್ತಾಗಿರಲಿ ಎದ್ದು ಅವರಿಗೆ ಗೌರವಿಸುತ್ತೇವೆ. ಹಾಗೆ ನಮ್ಮ ಸುತ್ತಮುತ್ತ ಪರಿಸರದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ಬಂದಾಗಲೂ ಎದ್ದು ಅವರಿಗೆ ಗೌರವ ತೋರಿಸಬೇಕು. ಡಾಕ್ಟರ್ ರೋಗ ಬಂದಾಗ ವಾಸಿ ಮಾಡ್ತಾರೆ, ಪೌರ ಕಾರ್ಮಿಕರು ರೋಗ ಬರದಂತೆ ಪರಿಸರವನ್ನು ಸ್ವಚ್ಛ ಮಾಡ್ತಾರೆ ಎನ್ನುವುದು ನಾಗರಾಜರ ತಿಳಿವು.

‘ಸಮಾಜದಲ್ಲಿ ತನಗಿರುವ ಶಿಕ್ಷಕ ಎನ್ನುವ ಗೌರವವನ್ನು ಬಳಸಿಕೊಂಡು ಪೌರಕಾರ್ಮಿಕರ ಬಗ್ಗೆ ಇರುವ ಕೀಳು ಭಾವನೆಯನ್ನು ಹೋಗಲಾಡಿಸಲು ಅವರ ಜೊತೆಯೇ ಕೆಲಸ ಮಾಡುವ ನಾಗರಾಜನ ಧೈರ್ಯ ಮೆಚ್ಚಬೇಕು. ಈ ಮಾದರಿಯನ್ನು ಬೇರೆಯವರು ಅನುಸರಿಸುವುದು ತುಂಬಾ ಕಷ್ಟ’ ಎನ್ನುತ್ತಾರೆ ಉಪನ್ಯಾಸಕ ಡಾ.ಸತೀಶ್ ಪಾಟೀಲ್.

‘ಆ ಮೇಷ್ಟ್ರು ದಿನಾಲು ಒಂದು ತಾಸು ಆದ್ರೂ ನಮ್ಜೊತೆ ಕೆಲಸ ಮಾಡೇ ಸ್ಕೂಲಿಗೆ ಹೋಗ್ತಾರೆ. ಒಂದೊಂದ್ಸಲ ನಮಗಿಂತ ಹೆಚ್ಚಿನ ಕೆಲಸ ಮಾಡ್ತಾರೆ, ಅವರು ನಮ್ಮ ಜತೆ ಇದ್ರೆ ನಮಗೇನೋ ಒಂಥರ ಖುಷಿ ಸರ್, ಪ್ರತಿವರ್ಷ ಪೌರಕಾರ್ಮಿಕರ ದಿನದಂದು ನಮಗೆಲ್ಲರಿಗೂ ಶಾಲು ಹೊದಿಸಿ ಸನ್ಮಾನ ಮಾಡ್ತಾರೆ ಸರ್. ನಮ್ಮಂತವರ ಬಗ್ಗೆ ಇಷ್ಟು ಹಚ್ಚಿಕೊಳ್ಳಾರು ಯಾರಿದಾರೆ ಹೇಳಿ ಸರ್’ ಎಂದು ಕೊಟ್ಟೂರಿನ ಪೌರಕಾರ್ಮಿಕರಾದ ಕೃಷ್ಣಪ್ಪ ಮತ್ತು ಹುಲಿಗೇಶ್ ಅವರು ಅಭಿಮಾನದಿಂದ ಮಾತನಾಡುತ್ತಾರೆ.

ಪರಿಸರ ಜಾಗೃತಿ ಸೈಕಲ್

ಹಿಂದೆ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ಅವರು ನಾಗರಾಜ ಅವರ ಕೆಲಸಗಳನ್ನು ಗಮನಿಸಿ ಜಾಗೃತಿ ಮೂಡಿಸಲು ಒಂದು ಸೈಕಲ್ ಕೊಡಿಸಿದ್ದರು. ಅದನ್ನು‘ಜಾಗೃತಿ ವಾಹನ’ದ ಹಾಗೆ ಬಳಸುತ್ತಿದ್ದಾರೆ. ಶಾಲಾ ಮಕ್ಕಳಿಂದ ಹಳ್ಳಿಗಳಲ್ಲಿ ಪರಿಸರ ಜಾಗೃತಿಯ ಬೀದಿ ನಾಟಕ ಮಾಡಿಸಿದ್ದಾರೆ. ಬಿಡುವಿದ್ದಾಗ ಶನಿವಾರ ಭಾನುವಾರ ಹಳ್ಳಿಗಳಿಗೆ ಹೋಗಿ ಹಾಡು ಕತೆ ನಾಟಕಗಳ ಮೂಲಕ ಪರಿಸರದ ಜಾಗೃತಿ ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT