ಗುರುವಾರ , ಫೆಬ್ರವರಿ 27, 2020
19 °C
ಘನತ್ಯಾಜ್ಯದ ವಿಲೇವಾರಿಗೆ ಸೂಕ್ತ ಮಾದರಿ

ಕಸದಿಂದ ಕುಸುಮ: ಸದ್ದಿಲ್ಲದೆ ಬದಲಾವಣೆ ತರುತ್ತಿರುವ ಧಾರವಾಡದ ಹಸಿರು ಮನುಷ್ಯ

ಹರ್ಷವರ್ಧನ ವಿ. ಶೀಲವಂತ Updated:

ಅಕ್ಷರ ಗಾತ್ರ : | |

‘ನಾ ಹೇಳಿದ್ಹಾಂಗ ಯಾರೂ ಮಾಡೋದಿಲ್ಲ; ನಾ ಮಾಡಿದ್ಹಾಂಗ ಮಾತ್ರ ಮಾಡ್ತಾರ.. ಅನ್ನೋ ಸತ್ಯ ಅನುಭವದಿಂದ ಕಲಿತುಕೊಂಡೆ. ಮಾತಾಡೋದು ವ್ಯರ್ಥ; ಮಾಡಿ ತೋರಿಸೋದೆ ಹೆಚ್ಚು ಸೂಕ್ತ ಅಂತ ಅನ್ನಿಸ್ತು’ ಪಂಡಿತ ಮುಂಜಿ ತಮ್ಮ ‘ಹಸಿರು ಆಲಯ’ದ ಬಾಗಿಲು ತೆರೆಯುತ್ತಲೇ ಹೇಳಿದ ಮಾತು.

ಅಪರೂಪದ ಪರಿಸರ ಕಾಳಜಿಯ ಕಲಿಕೆ ಮತ್ತು ಕಾಣ್ಕೆಯ ‘ಮುಂಜಿ ಮಾಮಾ’, ತ್ಯಾಜ್ಯದಿಂದ ವ್ಯಾಜ್ಯ ಹುಟ್ಟಿದಲ್ಲಿ ಮಧ್ಯಸ್ಥಗಾರ! ಕಸದಿಂದ ಕಲೆ ಅರಳಿಸುವ ಹಸಿರು ಜಾಣ್ಮೆ ಅವರಿಗೆ ಕರಗತ. ಕೊರಡನ್ನೂ ಕೊನರಿಸುವ ಪರಿಸರ ಶ್ರದ್ಧೆ. ಹಾಗಾಗಿ ಅವರ ಮನ ಮತ್ತು ಮನೆ ಸದಾ ಹಸಿರು. ಹೊಸ ಆಲೋಚನೆಗಳಿಗೆ ದಾರಿ ಧಾರವಾಡದ ಹಸಿರು ಮನುಷ್ಯ ಮುಂಜಿಯವರು.

ಜಮಖಂಡಿಮಠ ಲೇಔಟ್‍ನ ಮನೆಗೆ ನಾವು ಕಾಲಿಟ್ಟರೆ, ಮನೆ ತುಂಬ ಗಿಡಗಳೇ ಮಕ್ಕಳಾಗಿ ಆಡಿಕೊಂಡಿವೆ. ತಾಯಿಗೆ ಹೇಗೆ ಮಗುವಿನ ಮಾತು ಅನುವಾದಿಸುವ ಕಲೆ ಗೊತ್ತೋ, ಹಾಗೆ, ಮುಂಜಿ ಅವರಿಗೆ ಗಿಡಗಳ ಭಾವನೆ ಅರಿಯುವ ಕಲೆ ಸಿದ್ಧಿಸಿದೆ. ಪಕ್ಷಿಗಳ ಕೂಗಿನ ಅನುಕರಣೆ ಕೂಡ ಮಾಡಬಲ್ಲರು. ಮನೆ ತಾರಸಿಯ ಉದ್ಯಾನದಲ್ಲಿ ರೆಕ್ಕೆಯ ಮಿತ್ರರನ್ನೂ ಕೂಗಿ ಕರೆದು ನಿಮಗೆ ಭೇಟಿ ಮಾಡಿಸಬಲ್ಲ, ಮಕ್ಕಳ ಅಚ್ಚುಮೆಚ್ಚಿನ ಮಾಮಾ ಅವರು.

ಮನೆ ಬಳಕೆಗಾಗಿ ಖರೀದಿಸಿ ತಂದ ಯಾವುದೇ ವಸ್ತುವಿನ ‘ಕಂಟೇನರ್’ ಈ ಮನೆಯಿಂದಾಚೆ ಹೊರ ಹೋಗುವುದೇ ಇಲ್ಲ. ಬಳಸಿ ಬಿಸಾಕುವ ನಮ್ಮ ಸಾಮಾನ್ಯ ನಡೆ ಇಲ್ಲಿ ಸಂಪೂರ್ಣ ವರ್ಜ್ಯ. ಪುನರ್ಬಳಕೆಯ ಹತ್ತು ಹಲವು ದಾರಿಗಳ ನಿತ್ಯ ಹೊಸ ಹುಡುಕಾಟದಲ್ಲಿರುವ ಸಂಶೋಧಕನ ಪ್ರಯೋಗಾಲದಂತಿದೆ ಇವರ ಮನೆ.

ಯಾವುದೇ ಗಾತ್ರದ ಪ್ಲಾಸ್ಟಿಕ್ ಬಾಟಲಿ ಖಾಲಿಯಾದ ಬಳಿಕ ಅದು ಕ್ಯಾಕ್ಟಸ್ ಹೂವು ಕುಂಡವಾಗುತ್ತದೆ. ಮನೆಯ ಮೇಲಿನ ತೋಟಕ್ಕೆ ಅದನ್ನು ಸಾಗಿಸಿ, ಶಾಶ್ವತ ಪುನರ್ವಸತಿ ಕರುಣಿಸುತ್ತಾರೆ. ತಿಂಗಳಿಗೆ ಒಟ್ಟು ಮೂರು ಫಿನಾಯಿಲ್ ಮತ್ತು ಬಾತ್‍ರೂಂ, ಟಾಯ್ಲೆಟ್ ಕ್ಲೀನರ್‌ಗಳ ಬಾಟಲಿ ಖಾಲಿಯಾಗುತ್ತವೆ. ಅವುಗಳನ್ನು ಬಳಸಿ ‘ಮನಿ ಪ್ಲಾಂಟ್’ನಿಂದ ಒಡಲು ತುಂಬಿಸಿ, ‘ವರ್ಟಿಕಲ್ ಗಾರ್ಡನ್’ ಆಗಿಸುವ ಅವರ ಕೆಲಸ ಅನುಕರಣೀಯ.

ಮಕ್ಕಳು ತಿಂದೆಸೆದ ಐಸ್‌ಕ್ರೀಂ ಕುಡಿಕೆ, ಸಿಹಿ ತಿನಿಸಿನ ಪೊಟ್ಟಣ, ಪೇಂಟ್ ಡಬ್ಬಿ, ಮುಚ್ಚಳ, ಕೋಲ್ಡ್ ಕ್ರೀಂ ಖಾಲಿ ಡಬ್ಬಿ, ಥಿನ್ನರ್ ಬಾಟಲಿ, ಕ್ಯಾನ್ ಕಸಿ ಹರಿವಾಣಗಳಾದರೆ, ಹತ್ತಾರು ವರ್ಷ ಬಳಸಿ ನಿರುಪಯುಕ್ತವಾದ ಹೆಲ್ಮೆಟ್, ಮುಂಜಿ ಮಾಮಾ ಅವರ ಮನೆಯಲ್ಲಿ ಐನೂರಕ್ಕೂ ಹೆಚ್ಚು ಕ್ಯಾಕ್ಟಸ್‍ಗೆ ‘ಪಾಟ್’ಗಳಾಗಿವೆ. ಪಕ್ಷಿಗಳಿಗೆ ಹಸಿವು ನೀಗಿಸುವ ಅನ್ನದ ಬಟ್ಟಲೂ, ಬಾಯಾರಿಕೆ ತಣಿಸುವ ಜಲಪಾತ್ರೆಯೂ ಆಗಿವೆ. ಇವೆಲ್ಲವೂ ಘನತ್ಯಾಜ್ಯ ವಸ್ತುಗಳೇ.

ಮಡಕೆ ಹಾಗೂ ಕುಡಿಕೆಗಳಲ್ಲಿ ಜೇನು ಸಾಕಣೆ. ಕಾರಣ, ತಾರಸಿ ಉದ್ಯಾನದ ಹೂಗಳ ಪರಾಗಸ್ಪರ್ಶಕ್ಕೆ ಕೆಲಸಗಾರರು ಬೇಕಿಲ್ಲ. ತುಸು ಬೆಲ್ಲದ ಪಾಕ ಅಥವಾ ಗುಲಕಂದ (ಗುಲಕನ್‌) ಸವರಿಟ್ಟು ಜೇನುಗೂಡು ಕಟ್ಟುವಂತೆ ಪ್ರೇರೇಪಿಸುವ ಕೆಲಸ. ಜೇನುಹುಳುಗಳಿಗೆ ತಾರಸಿ ಉದ್ಯಾನದಲ್ಲಿ ಆಹಾರ ವ್ಯವಸ್ಥೆ. ಗಿಡಗಳಿಗೆ ಸಂಗೀತ ಕೇಳಿಸುವ ಮೂಲಕ ಉಚಿತ  ‘ಟ್ಯೂಷನ್’ ನೀಡುತ್ತಾರೆ ಮುಂಜಿ ಮಾಮಾ.

ಮನೆ ತುಂಬಾ 250ಕ್ಕೂ ಹೆಚ್ಚು ಪ್ರಜಾತಿಯ ಸಾವಿರದಷ್ಟು ಭಿನ್ನ ಆಕಾರದ ಕ್ಯಾಕ್ಟಸ್‌ಗಳಿವೆ. ಅಷ್ಟೇ ಸಂಖ್ಯೆಯ ಹೂಗಿಡಗಳು, ಹಬ್ಬಿ ನಿಂತ ಬಳ್ಳಿಗಳಿವೆ. ಕೈ ಚಳಕದಲ್ಲಿ ಅರಳಿದ ಬೋನ್ಸಾಯ್ ನಿಂಬೆ, ಕಂಚಿ, ದಾಳಿಂಬೆ, ಪ್ಯಾಷನ್ ಫ್ರುಟ್, ಮೋಸಂಬಿ, ಚಿಕ್ಕು, ಪೇರಲ, ಅತ್ತಿ, ಆಲ, ಬಸರಿ, ಕದಂಬ ಮರಗಳಿವೆ. ಸುಮಾರು 20 ರಿಂದ 40 ವರ್ಷಗಳಷ್ಟು ಹಳೆಯದಾದ ನೂರಾರು ಸಂಖ್ಯೆಯ ಪುಟ್ಟ ಮರಗಳಿವೆ. ಮೈತುಂಬ ಕಾಯಿ ಹೊದ್ದುಕೊಂಡಿವೆ.

ಕಾರ್ಯಾಗಾರಿಗಳಿಗೆ ಸಂಪನ್ಮೂಲ

ಮಹಿಳಾ ಮಂಡಳಿಗೆ ಮನೆ ಅಂಗಳದ ಉದ್ಯಾನ, ತಾರಸಿ ತೋಟ, ಔಷಧೀಯ ವನ, ಕಿಚನ್ ಗಾರ್ಡನ್ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರಗಳ ಆಯೋಜನೆ ಮುಂಜಿ ಅವರ ಇನ್ನೊಂದು ಮುಖ. ತಮ್ಮಂತೆ ಇತರರೂ ಕೂಡ ಬಳಸಿದ ವಸ್ತುಗಳನ್ನು ಮರುಬಳಕೆ ಮಾಡುವ ಹತ್ತು ಹಲವು ವಿಧಾನಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮೂಲಕ ವಿವರಿಸುವ ಪ್ರೀತಿ ಅನನ್ಯ. ಪ್ರತಿಯೊಬ್ಬರಿಗೂ ಒಂದು ಅಂತಹ ಮಾದರಿ ಕಲಾಕೃತಿ ಉಚಿತ ಉಡುಗೊರೆಯಾಗಿ ನೀಡಿಕೆ ಮುಂಜಿ ಮಾಮಾ ಅವರ ಹಸಿರು ಕಾಳಜಿ ಎಂಥದ್ದು ಎಂಬುದನ್ನು ದರ್ಶಿಸುತ್ತದೆ.

ಪೇಟೆ ಮನೆಯಲ್ಲಿ ಜಾಗ ಎಲ್ಲಿದೆ? ಗಿಡ ಬೆಳೆಸಿದರೆ ಅದೊಂದು ಹೆಚ್ಚಿನ ಹೊರೆ. ಮನೆ ಪಕ್ಕದವರೊಂದಿಗೆ ಕಸ, ಕಡ್ಡಿ, ಎಲೆಗಳಿಗಾಗಿ ನಿತ್ಯ ಜಗಳ ಬೇರೆ. ನೀರಿಲ್ಲ. ನಿರ್ವಹಿಸಲು ನುರಿತ ಮಾಲಿ ಸಿಗಲಾರ. ನಾವೇ ಮಾಡುವುದು ಕಷ್ಟ. ಇದು ದುಬಾರಿ ಹವ್ಯಾಸ. ಬಿಸಾಕಬಹುದಾದ ಕಸಕ್ಕೆ ಮತ್ತಷ್ಟು ಶ್ರಮ. ಜನ-ದನ-ಮಂಗಗಳ ಕಾಟ. ಹೂಗಳ್ಳರು ಅಪಾರ. ಇವೆಲ್ಲದಕ್ಕೂ ಸಮಾಧಾನ ಮತ್ತು ಪರಿಹಾರ ಮುಂಜಿ ಮಾಮಾ ಬಳಿ ಇದೆ ಅನ್ನೋದೆ ಸೋಜಿಗ!

‘ನಾನೊಂದು ಮಾದರಿ ಮಾಡಿ ತೋರಿಸುತ್ತೇನೆ. ನೀವು ಕಲಿಯಲು ಮಣ್ಣು, ಗೊಬ್ಬರ, ಉಸುಕು ಹಾಗೂ ಗಿಡವನ್ನೂ ನಾನೇ ಒದಗಿಸುತ್ತೇನೆ. ನಿಮ್ಮ ಮನೆಯಿಂದ ಕೇವಲ ಖಾಲಿ ‘ಕಂಟೇನರ್’ ಯಾವುದೇ ಗಾತ್ರದ್ದಾದರೂ ಸರಿ. ನಾಲ್ಕಾರು ಹಿಡಿದುಕೊಂಡು ಬನ್ನಿ. ತರದೇ ಇದ್ದವರಿಗೆ ಒಂದು ಕಂಟೇನರ್ ನಾವೇ ಕೊಡೋಣ. ಕಲಿತದ್ದನ್ನು ನಿಮ್ಮ ಅಕ್ಕಪಕ್ಕದವರಿಗೆ, ಮಕ್ಕಳಿಗೆ ಹೇಳಿ ಕೊಡಿ. ವರ್ಷಕ್ಕೊಮ್ಮೆ ಪ್ರದರ್ಶನ ಏರ್ಪಡಿಸೋಣ. ತನ್ಮೂಲಕ, ‘ಸ್ವಚ್ಛತೆಯೇ ಭಗವಂತ’ ಎಂದ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಈ ಶುಭ ಸಂದರ್ಭದಲ್ಲಿ ಸ್ವಚ್ಛ ಭಾರತ ಸಂಕಲ್ಪವನ್ನು ವಯಕ್ತಿಕ ಶಕ್ತ್ಯಾನುಸಾರ ಯಶಸ್ವಿಗೊಳಿಸೋಣ’ – ಮುಂಜಿ ಮಾಮಾ ಸದೈವ ತುಡಿತದಿಂದ ಮನೆ ಮನೆಗೆ ಭೇಟಿ ನೀಡಿ, ಪರಿಚಯಿಸಿಕೊಂಡು ಹೇಳುವ ಮಾತು.

ಇಂಥವರು ನಮ್ಮ ಲೋಕ ಸಂಸಾರದ ಮಿಣುಕು ದೀಪಗಳು. ಸದಾ ಅರಿವಿನ ಹಣತೆ ಮಂಜಾಗದಂತೆ ಬೆಳಗಿಸುತ್ತಿರಲಿ. ಇಂಥವರ ಸಂತತಿ ಸಾವಿರವಾಗಲಿ. ‘ಮುಂದಿನ ಪೀಳಿಗೆಗೆ ಬದುಕಲು ಸಹ್ಯವಾದ ಪರಿಸರ ಬಿಟ್ಟು ಹೋಗಬೇಕಲ್ಲ; ನಮಗೆ ನಮ್ಮ ಹಿರಿಯರು ಬಿಟ್ಟು ಹೋದಂತೆ’ ಎನ್ನುವ ಮುಂಜಿ ಮಾಮಾನ ಈ ಮಾತು ಸದಾ ನಮ್ಮನ್ನು ಎಚ್ಚರಿಸುತ್ತಿರಲಿ.

ಮುಂಜಿಯವರ ದಿನಚರಿ..

ಪಂಡಿತ ಮುಂಜಿಯವರಿಗೆ ಈಗ 70ರ ಹರೆಯ. ಅವರ ಪತ್ನಿಯೇ ಈ ಹವ್ಯಾಸದ ಜೀವದ್ರವ್ಯ. ಬೆಳಿಗ್ಗೆ 4 ಗಂಟೆಗೆ ಅವರ ಉತ್ಥಾನ. ಅರ್ಧ ಗಂಟೆ ಯೋಗ-ವ್ಯಾಯಾಮ. ನಂತರ ಮನೆ ಅಂಗಳ ಹಾಗೂ ತಾರಸಿಯ ಗಿಡಗಳ ನಿರ್ವಹಣೆಗೆ ಒಂದು ಗಂಟೆ ಮೀಸಲು. ಹತ್ತು ಲಕ್ಷದಷ್ಟು ಕೈಯಾರ ಖರ್ಚು ಮಾಡಿ ರೂಪಿಸಿದ, ಸಾಧನಕೇರಿ-ಜಮಖಂಡಿಮಠ ಲೇಔಟ್ ಸಮುದಾಯ ಉದ್ಯಾನದಲ್ಲಿ ಎರಡು ತಾಸು ಕಳೆ ಕೀಳುವ, ಗೊಬ್ಬರ ಉತ್ಪಾದಿಸುವ, ವಾಕರ್ಸ್-ಜಾಗರ್ಸ್ ಪಾಥ್ ಸ್ವಚ್ಛಗೊಳಿ ಸುವ ಸ್ವಯಂಸೇವಕ. ಉದ್ಯಾನದ ಗಿಡಗಳ ಒಪ್ಪ ಓರಣದ ಕೆಲಸ. ಪ್ರತಿ ಭಾನುವಾರ ಕಾಲೊನಿ ಮಕ್ಕಳೊಂದಿಗೆ ಗಿಡ ನೆಡುವ, ನೆಟ್ಟ ಗಿಡಗಳ ಪೋಷಣೆ, ಪಾತಿ ಮಾಡುವುದು, ನೀರುಣಿಸುವುದು ಹೀಗೆ .. ನಿತ್ಯ ಎರಡು ತಾಸು. 7.30 ರಿಂದ 8 ಗಂಟೆಯೊಳಗೆ ಮನೆ. ಉಪಾಹಾರ ಸೇವನೆ. ಕೆಲಗೇರಿ ಕೆರೆ ಆವರಣಕ್ಕೆ ಭೇಟಿ. ಕೆರೆ ತರಿಭೂಮಿ ಸ್ವಚ್ಛತೆ ಅರ್ಧಗಂಟೆ. ಬಳಿಕ ಅರ್ಧಗಂಟೆ ಈಜಲು ಮೀಸಲು. 9.30ಕ್ಕೆ ಮರಳಿ ಮನೆಗೆ. ಮತ್ತೆ ಮಧ್ಯಾಹ್ನದವರೆಗೆ ಘನತ್ಯಾಜ್ಯದಿಂದ ಹಸಿರು ಕಲಾಕೃತಿ ಅರಳಿಸುವ ಕಾಯಕ. ಇದು ದಿನಚರಿ.

ಇದನ್ನೂ ಓದಿ: ಕಸದಿಂದ ಹೊಲವೆಲ್ಲಾ ರಸ

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು