ಭಾನುವಾರ, ಜನವರಿ 26, 2020
28 °C

ಜಪಮಾಲೆ ರಾಣಿಯ ದೇವಾಲಯ: ಮುಳುಗೇಳುವ ಚರ್ಚ್

ಕೆ.ಪಿ.ಸತ್ಯನಾರಾಯಣ Updated:

ಅಕ್ಷರ ಗಾತ್ರ : | |

Prajavani

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಎಂಬಲ್ಲಿ ‘ಜಪಮಾಲೆ ರಾಣಿಯ ದೇವಾಲಯ’ ಎಂದು ಕರೆಯಲ್ಪಡುತ್ತಿದ್ದ ಚರ್ಚೊಂದು ಗೊರೂರಿನ ಹೇಮಾವತಿ ನದಿಗೆ ಕಟ್ಟಿದ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೂರೂವರೆ ದಶಕಗಳಿಂದ ಮುಳುಗೇಳುತ್ತಾ, ವರ್ಷವರ್ಷಕ್ಕೂ ಶಿಥಿಲಗೊಳ್ಳುತ್ತಾ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ.

ಗೋಥಿಕ್ (ಜರ್ಮನ್ ಹಾಗೂ ಫ್ರೆಂಚ್ ವಾಸ್ತುಶಿಲ್ಪದ ಅಂಶಗಳನ್ನು ಸೇರಿಸಿದ ಒಂದು ವಿಶಿಷ್ಟ ಶೈಲಿ) ಶೈಲಿಯಲ್ಲಿ ಕಟ್ಟಲಾದ ಈ ಚರ್ಚಿನಲ್ಲಿ ಹಿಂದೂ ಶೈಲಿಯ ಒಳಾಂಗಣವಿತ್ತು. ಹಲವು ಕಮಾನುಗಳು ಹಾಗೂ ದೈತ್ಯಾಕಾರದ ಕಂಬಗಳು ಈ ದೇವಾಲಯದ ವಿಶೇಷತೆಯಾಗಿದ್ದವು. ಮಣ್ಣು, ಸುಣ್ಣ ಮತ್ತು ಕೋಳಿಮೊಟ್ಟೆ ಬಳಸಿ ಮಾಡಿದ ಇಟ್ಟಿಗೆಗಳು, ಹಾಗೂ ಗಾರೆಯಿಂದಲೇ ಈ ಕಟ್ಟಡವನ್ನು ಸಂಪೂರ್ಣವಾಗಿ ಕಟ್ಟಲಾಗಿದೆ.

ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ದೇವಾಲಯ ಕ್ರೈಸ್ತರ ಆರಾಧನಾ ಕೇಂದ್ರವಾಗಿ ಬಳಕೆಯಲ್ಲಿತ್ತು.

1979ರಲ್ಲಿ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಾಣವಾಯಿತು. ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗುತ್ತಾ ಹೋದಂತೆ ವರ್ಷದಲ್ಲಿ ಏಳೆಂಟು ತಿಂಗಳ ಕಾಲ ಈ ಚರ್ಚಿನ ಬಹುಭಾಗ ನೀರಿನಲ್ಲಿ ಮುಳುಗಿರುತ್ತದೆ. ಡ್ಯಾಂ ಭರ್ತಿಯಾದಾಗ ಈ ಚರ್ಚು ಮುಕ್ಕಾಲು ಭಾಗ ನೀರಿನಲ್ಲಿರುತ್ತದೆ. ಘಂಟೆಗೋಪುರ ಹಾಗೂ ಕೆಲವು ಮೇಲ್ಮಟ್ಟದ ರಚನೆಗಳು ನೀರಿನಿಂದ ಮೇಲೆ ಗೋಚರಿಸುತ್ತವೆ.

ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಇದರ ಪೂರ್ಣ ನೋಟವನ್ನು ಕಾಣಬಹುದು. ನೀರಿನಲ್ಲಿ ಅರ್ಧಂಬರ್ಧ ಮುಳುಗಿದ್ದಾಗಲೂ ಇದರ ಆಕರ್ಷಣೆಯೇನು ಕಡಿಮೆಯಿಲ್ಲ. ಹಾಗಾಗಿ ವರ್ಷದ ಎಲ್ಲಾ ದಿನಗಳಲ್ಲೂ ಇದೊಂದು ಪ್ರೇಕ್ಷಣೀಯ ಸ್ಥಳವಾಗಿದೆ. ಛಾಯಾಗ್ರಾಹಕರ ಆಪ್ತ ತಾಣವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು