ಬುಧವಾರ, ಜನವರಿ 27, 2021
24 °C

ಹಳ್ಳಿಮಕ್ಕಳ ‘ರಂಗಪ್ರವೇಶ’

ಹರೀಶ್ ಕುಮಾರ್ Updated:

ಅಕ್ಷರ ಗಾತ್ರ : | |

ಅದೊಂದು ದೇವಸ್ಥಾನ. ಅದರ ಎದುರಿಗೆ ಹೆಡ್ಡ ಮಲಗಿದ್ದಾನೆ. ಏನೇನೋ ಪೆದ್ದು ಪೆದ್ದಾಗಿ ಮಾತಾಡುತ್ತಿದ್ದಾನೆ.

‘ಅಜ್ಜಿ, ಏ ಅಜ್ಜಿ...’ – ಮಲಗಿದ್ದಲ್ಲಿಂದಲೇ ಹೆಡ್ಡ ಕೂಗಿದ.

‘ಏನ್‌ ಮಗಾ’ – ಅಜ್ಜಿ ಕೇಳಿದಳು.

‘ಮೂಗಿನ ಮೇಲೆ ನೊಣ ಕೂತಿದೆ. ಓಡಿಸು ಬಾ’ – ಹೆಡ್ಡ ಕರೆದ.

‘ಅಯ್ಯೋ ಸೋಮಾರಿ ತಾನು ಕೆಲಸ ಮಾಡಲ್ಲ, ಕೆಲಸ ಮಾಡೋರಿಗೂ ಬಿಡಲ್ಲ ಏನೊ ನಿಂದು’ – ಅಜ್ಜಿ ಸಿಟ್ಟಿನಿಂದ ಗದರಿದಳು.

‘ಅಜ್ಜಿ ನೊಣ ಓಡೋಯ್ತು, ಬಿಡು’ ಎಂದ ಹೆಡ್ಡ. ‘ಸಾಯಿ ಸಾಯಿ ಹಾಳಾಗೋಗು ..’ ಎನ್ನುತ್ತಾ ನಟಿಕೆ ಮುರಿದಳು ಅಜ್ಜಿ.

ಇದು ಬಿ. ವಿ. ಕಾರಂತರ ‘ಹೆಡ್ಡಾಯಣ’ ನಾಟಕದ ಆರಂಭದ ದೃಶ್ಯ. ಇದನ್ನು ಅಭಿನಯಿಸಿದವರು ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಸೈದರಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು. ತಮ್ಮ ಶಾಲೆಯ ಅಂಗಳದಲ್ಲೇ ಅಭಿನಯಿಸಿದ ನಾಟಕ. ಹೆಡ್ಡನಾಗಿ 4ನೇ ತರಗತಿ ರಘು ಅಜ್ಜಿಯಾಗಿ ಅದೇ ಶಾಲೆಯ 5ನೇ ತರಗತಿಯ ಮೋನಿಕಾ ನಟಿಸಿದ್ದರು. ಪಾತ್ರಧಾರಿ ಮಕ್ಕಳು, ತಮ್ಮ ತಮ್ಮ ಪಾತ್ರಗಳಲ್ಲೇ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದರು. 

ಅಂದು ನಾಟಕ ನೋಡಲು ಊರಿಗೆ ಊರೇ ಜಮಾಯಿಸಿತ್ತು. ಆ ಊರಿನ ಹಿರಿಜೀವಗಳು, ಮಧ್ಯವಯಸ್ಕ ಪೋಷಕರು, ಕಿರಿತಲೆಮಾರಿನ ಹೈದರೆಲ್ಲಾ ಬೆರಗಾಗಿ ಕಣ್ಣು ಮಿಟುಕಿಸದಂತೆ ನಿಂತು, ಕುಂತು, ಮಧ್ಯೆ ಮಧ್ಯೆ ‘ಶಹಬ್ಬಾಸ್‌’ ಎನ್ನುತ್ತಾ ನೋಟ ಕದಲಿಸದಂತೆ ನೋಡುತ್ತಿದ್ದರು. ತಮ್ಮ ಮಕ್ಕಳ ಪಾತ್ರಗಳು ಬಂದಾಗ ವಿಚಿತ್ರವಾಗಿ ಸದ್ದು ಮಾಡುತ್ತಾ, ತಮ್ಮ ಪಕ್ಕದವರನ್ನೊಮ್ಮೆ ತಿವಿದು ಸಂಭ್ರಮಿಸುತ್ತಿದ್ದರು. ಈ ಬೆರಗಿನ ನೋಟದಿಂದ ಶಿಕ್ಷಕರೂ ಹೊರತಾಗಿರಲಿಲ್ಲ.

ನಾಟಕದ ಕನಸು ಚಿಗುರಿದ್ದು..

ಸೈದರಹಳ್ಳಿ ಎಂಬ ಪುಟ್ಟ ಹಟ್ಟಿಯಂತಹ ಈ ಊರಲ್ಲಿ ಕೆಲವು ವರ್ಷಗಳ ಹಿಂದೆ ಶಾಲೆ ಇರಲಿ, ವಾಸಿಸಲು ಸ್ವಂತ ಮನೆಯೂ ಇರಲಿಲ್ಲವಂತೆ. ಕೂಲಿ ಮಾಡುತ್ತಿದ್ದವರೇ ಹೋರಾಟ ಮಾಡಿ ಊರಿಗೆ ಶಾಲೆ ತಂದರು. ಈ ಊರಿಗೆ ಬಂದ ಶಿಕ್ಷಕರೆಲ್ಲ ಮಕ್ಕಳಲ್ಲಿ ಸರ್ವತೋಮುಖ ಬದಲಾವಣೆ ತರಲು ಹೋರಾಡಿದ್ದರು.

ರಂಗಜಗತ್ತಿನ ನಂಟಿದ್ದ ಶಿಕ್ಷಕಿ ಮಮತಾ ಅರಸಿಕೆರೆ ಅವರು ಈ ಶಾಲೆಗೆ ಇತ್ತೀಚೆಗಷ್ಟೇ ವರ್ಗವಾಗಿ ಬಂದಿದ್ದರು. ಆರಂಭದಲ್ಲೇ ಮಕ್ಕಳ ಚಟುವಟಿಕೆಗೆ ಗಮನಿಸಿದ್ದರು. ಅವರಲ್ಲಿದ್ದ ಉತ್ಸಾಹ, ಊರಿನ ವಾತಾವರಣ ಕಂಡು, ‘ಈ ಮಕ್ಕಳಿಗೆ ಶಿಕ್ಷಣದ ಜತೆಗೆ ರಂಗತರಬೇತಿ ಕೊಡಿಸಿದರೆ ಹೇಗೆ’ ಎಂದು ಯೋಚಿಸಿದರು. ಇದಕ್ಕಾಗಿ ಸಹ ಶಿಕ್ಷಕರ ಸಹಾಯ ಕೇಳಿದರು. ಶಿಕ್ಷಕಿ ಮಂಜುಳ ಹಾಗೂ ಮುಖ್ಯ ಶಿಕ್ಷಕ ಮಹೇಶ್ ಒಪ್ಪಿದರು. ಪೋಷಕರು ಹಾಗೂ ಇತರ ಮಂದಿಯ ಸಹಕಾರವೂ ಸಿಕ್ಕಿತು. ಮೊದಲ ಹೆಜ್ಜೆಯಾಗಿ ಮಕ್ಕಳಿಂದ ನಾಟಕ ಮಾಡಿಸಲು ತೀರ್ಮಾನವಾಯಿತು. ರಂಗ ತರಬೇತಿಗೆ ದಿನ ನಿಗದಿಪಡಿಸಿದರು. ಬಿ.ವಿ. ಕಾರಂತರ ‘ಹೆಡ್ಡಾಯಣ’ ನಾಟಕವನ್ನು ಆಯ್ಕೆ ಮಾಡಿದರು.

‘ಹೆಡ್ಡಾಯಣ’ದ ತಾಲೀಮು

ನಾಟಕ ಆಡಲು ನಿರ್ಧಾರವೇನೋ ಆಯಿತು. ಆದರೆ, ಮಕ್ಕಳನ್ನು ಪಾತ್ರಗಳಿಗೆ ಅಣಿಗೊಳಿಸುವುದು ಹೇಗೆ? ಏಕೆಂದರೆ, ಮಕ್ಕಳದ್ದು ಮಾತೃಭಾಷೆ ತೆಲುಗು. ಅವರೆಲ್ಲ ಅಕ್ಷರಲೋಕಕ್ಕೆ ತೆರೆದುಕೊಂಡದ್ದೇ ತಡವಾಗಿ. ಅವರು ಶಾಲೆಗೆ ಬರುವುದೇ ಕಷ್ಟವಾಗಿತ್ತು. ನಾಟಕದ ಪರಿಚಯವೇ ಇರಲಿಲ್ಲ. ಇಂಥವರಿಗೆ ನಾಟಕ ಕಲಿಸಲು ಶಿಕ್ಷಕಿ ಮಮತಾ ಅವರು ಹಾವೇರಿಯ ರಂಗನಿರ್ದೇಶಕ ಜಗದೀಶ್ ಅವರನ್ನು ಆಹ್ವಾನಿಸಿದರು. ಹಳ್ಳಿಗೆ ಬಂದ ಜಗದೀಶ್, ಪರಿಸರವನ್ನೊಮ್ಮೆ ಅವಲೋಕಿಸಿದರು. ‘ದಡ್ಡನೆಂದು ಪರಿಗಣಿಸಿ ಅಜ್ಜಿಯ ಮುದ್ದಿನಲ್ಲಿ ಬೆಳೆದ ಬಾಲಕನೊಬ್ಬ ತನ್ನ ಪೆದ್ದುತನದ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು, ವೈರುಧ್ಯಗಳನ್ನು ಹೊರಗೆಳೆಯುತ್ತ ಮುಖವಾಡಗಳನ್ನು ಕಳಚುತ್ತಾ ಸಾಗುವ ಕಥಾಹಂದರದ ‘ಹೆಡ್ಡಾಯಣ’ ನಾಟಕ್ಕೆ ಮಕ್ಕಳು ಹೊಂದುತ್ತಾರೆ ಎನ್ನಿಸಿತು ಅವರಿಗೆ. ಆದರೆ, ಮಕ್ಕಳಿಗೆ ನಾಟಕದ ಸಾರವನ್ನು ಅರ್ಥೈಸಿ, ರಂಗದ ಮೇಲೆ ಪ್ರದರ್ಶಿಸುವಂತೆ ಮಾಡುವುದೇ ಸವಾಲಾಗಿತ್ತು.

ಆದರೂ ಎಲ್ಲವನ್ನೂ ಹೊಂದಿಸಿಕೊಂಡು ನಿರ್ದೇಶಕರು ಶಾಲಾ ಅವಧಿ ಮುಗಿದ ಮೇಲೆ ಸಂಜೆ ಹೊತ್ತು ಮಕ್ಕಳಿಗೆ ನಾಟಕ ಕಲಿಸಲು ಆರಂಭಿಸಿದರು. ಹೊಸ ವಿಷಯ ಕಲಿಕೆಯತ್ತ ಹುರುಪು ತೋರಿದರು ಮಕ್ಕಳು. ‘ಪಾತ್ರಗಳಿಗೆ ಆಯ್ಕೆಯಾದವರು ಪಾತ್ರಕ್ಕೆ ಒಗ್ಗದಿದ್ದಾಗ ಮಕ್ಕಳನ್ನು ಬದಲಿಸಲಾಯಿತು. ಕೊನೆಗೆ ನಾಟಕದ ಪ್ರಮುಖ ಪಾತ್ರಧಾರಿ ಹೆಡ್ಡನಾಗಿ ರಘು, ಅಜ್ಜಿಯಾಗಿ ಮೋನಿಕ, ಅತ್ತೆಯಾಗಿ ಶ್ವೇತ, ಸೊಸೆಯಾಗಿ ಸೇವಂತಿ, ಸರದಾರನಾಗಿ ಲೋಕೇಶ್, ಗಮ್ಮತ್‍ ಲಾಲನಾಗಿ ಕಿರಣ್, ಊರ ಯಜಮಾನನಾಗಿ ಸೂರ್ಯ ಅಭಿನಯಿಸಿದರು. ಸಂಗೀತ ನಿರ್ದೇಶಕ ಮಂಜುನಾಥ್ ಪ್ರದರ್ಶನಕ್ಕೆ ಮಾಧುರ್ಯ ಹೆಚ್ಚಿಸಿದರು’ ಎನ್ನುತ್ತಾ ಕಲಿಕೆಯ ಸವಾಲನ್ನು ಶಿಕ್ಷಕಿ ಮಮತಾ ವಿವರಿಸಿದರು.

ಊರ ತುಂಬಾ ‘ಸಂಭಾಷಣೆ’

ನಾಟಕ ಕಲಿಕೆಯಲ್ಲಿ ಪಾತ್ರಧಾರಿಗಳಷ್ಟೇ ಅಲ್ಲ, ಉಳಿದ ಮಕ್ಕಳು ಸಂಭಾಷಣೆ ಹೇಳುವಷ್ಟು ನಾಟಕದ ಮಾತುಗಳು ಜನಪ್ರಿಯವಾದವು. ಆ ಪುಟ್ಟ ಊರ ತುಂಬೆಲ್ಲಾ ಮಕ್ಕಳ ಸಂಭಾಷಣೆ, ನಾಟಕದ ಹಾಡಿನದ್ದೇ ಗುಂಗು. ‘ಇಡೀ ಊರಿನಲ್ಲಿ ರಂಗವಾತಾವರಣ ನಿರ್ಮಾಣವಾಯಿತು’ ಎಂದು ಊರಿನ ಹಿರಿಯರು ಖುಷಿಯಿಂದ ಹೇಳುತ್ತಾರೆ.

ಎಲ್ಲ ಸಿದ್ಧವಾಯಿತು. ನಾಟಕದ ಪ್ರದರ್ಶನ ದಿನವೂ ಬಂತು. ಊರಿನಲ್ಲಿ ಸಾಂಸ್ಕೃತಿಕ ಕಳೆ ಕಟ್ಟಿತು. ಇರುವ ಜಾಗದಲ್ಲೇ ರಂಗಸಜ್ಜಿಕೆ, ಧ್ವನಿ-ಬೆಳಕಿನ ವ್ಯವಸ್ಥೆಯಾಯಿತು. ಮಕ್ಕಳು ವೇದಿಕೆ ಏರಿಯೇಬಿಟ್ಟರು. ಕಲಿಸಿದವರಿಗೆ ಕುತೂಹಲ, ಕಲಿತ ಮಕ್ಕಳಿಗೆ ಅಭಿನಯಿಸುವ ಕಾತುರ. ಸಂದರ್ಭಕ್ಕೆ ತಕ್ಕಂತೆ ಮಕ್ಕಳು ವೇಷಭೂಷಣ ಬದಲಿಸುತ್ತಾ, ರಂಗಪರಿಕರಗಳನ್ನು ಜೋಡಿಸಿಕೊಂಡು, ಸಂಗೀತಕ್ಕೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಂಡರು. ಡೈಲಾಗ್‌ ಮೇಲೆ ಡೈಲಾಗ್‌ ಮಾತಾಡಿದರು, ಹಾಡಿದರು, ಕುಣಿದರು, ನಲಿದರು.  ಪ್ರೇಕ್ಷಕರನ್ನೂ ಕುಣಿಸಿದರು!

ಮಕ್ಕಳ ಅಭಿನಯದ ಶೈಲಿ ಕಂಡಾಗ, ‘ಎಷ್ಟು ಅನುಭವಿ ಕಲಾವಿದರಪ್ಪ’ ಎಂದು ಅಚ್ಚರಿಪಡುವಂತಿತ್ತು. ಮೊದಲ ಬಾರಿಗೆ ವೇದಿಕೆ ಏರಿದ್ದರೂ, ‘ವೇದಿಕೆ ಭಯ’ ಇಲ್ಲದಂತೆ ನಟಿಸಿದರು. ನಿರ್ದೇಶಕ ಜಗದೀಶ್‍ರ ಶ್ರಮ ಹಾಗೂ ಹಳ್ಳಿ ಮಕ್ಕಳ ರಂಗ ಪ್ರವೇಶ ಯಶಸ್ವಿಯಾಯಿತು.

ಯಾವುದರಲ್ಲೂ ಕಮ್ಮಿ ಇಲ್ಲ..

‘ಸರ್ಕಾರಿ ಶಾಲೆಯ ಮಕ್ಕಳು ಯಾವ ವಿಧದಲ್ಲೂ ಕಡಿಮೆಯಿಲ್ಲ ಎನ್ನುವುದನ್ನು ನಮ್ಮ ಮಕ್ಕಳು ಮತ್ತೆ ಸಾಬೀತು ಮಾಡಿದ್ದಾರೆ. ನಾನೂ ಹಲವಾರು ಕಡೆ ನಾಟಕ ಆಡಿಸಿದ್ದೇನೆ. ಇಲ್ಲಿನ ಮಕ್ಕಳ ಚಟುವಟಿಕೆ, ನೆನಪಿನ ಶಕ್ತಿ, ಏಕಾಗ್ರತೆ ಮೆಚ್ಚುವಂಥದ್ದು’ ಎಂದು ಹೆಮ್ಮೆಯಿಂದ ಹೇಳಿದರು ರಂಗನಿರ್ದೇಶಕ ಜಗದೀಶ್. ‘ಇದೆಲ್ಲ ಸಾಧ್ಯವಾಗಿದ್ದು ಶಿಕ್ಷಕರು, ಗ್ರಾಮಸ್ಥರ ಸಹಕಾರದಿಂದ’ ಎಂದು ನೆನೆಯುತ್ತಾರೆ ಶಿಕ್ಷಕಿ ಮಮತ.

ಇಂಥ ಸಮಾಧಾನದ ನಡುವೆ, ಮಕ್ಕಳೂ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ತಮ್ಮ ಅನುಭವದ ಖಜಾನೆಗೆ ಈ ವಿಭಿನ್ನ ಅನುಭವ ದಕ್ಕಿದ್ದು ಅವರಿಗೂ ವಿಶೇಷ ಎನಿಸಿದೆ. ‘ನಡೀರಿ, ಬೇರೆ ಕಡೆ ಹೋಗಿ ನಾಟಕ ಮಾಡೋಣ’ ಎನ್ನುತ್ತಿದ್ದಾರೆ ಅವರು. ಈ ಪ್ರದರ್ಶನದ ನಂತರ, ಇದೇ ಶಾಲೆ ಮಕ್ಕಳು ಕನ್ನಡ ಸಂಸ್ಕೃತಿ ಇಲಾಖೆಯ ‘ಚಿಗುರು’ ಕಾರ್ಯಕ್ರಮದಲ್ಲಿ, ಹಾಸನದ ಆಕಾಶವಾಣಿಯಲ್ಲಿ ಧ್ವನಿಮುದ್ರಿತ ನಾಟಕ ಪ್ರದರ್ಶಿಸಿದ್ದಾರೆ. ಅರಸಿಕೆರೆಯಲ್ಲಿ ನೇಯೋಟ್ ಸಂಸ್ಥೆಯಿಂದ ನಾಟಕ ಪ್ರದರ್ಶನವಾಗಿದೆ. ಬೇರೆ ಬೇರೆ ಕಡೆಗಳಿಂದ ಆಹ್ವಾನ ಬಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಿಕ್ಷಕರು.

ಸಖತ್ ಖುಷಿಯಿಂದ...

ಈ ನಾಟಕದಲ್ಲಿ ಪಾತ್ರ ಮಾಡೋದು ಹೊಸ ಅನುಭವ. ಆದರೆ ಸಖತ್ ಖುಷಿಯಿಂದ ಪಾರ್ಟ್ ಮಾಡಿದ್ದೇನೆ. ಮೊದಲು ಹೆದರಿದ್ದೆ, ಆಮೇಲೆ ನಮ್ ಟೀಚರ್ ಧೈರ್ಯ ಕೊಟ್ಟರು. ಪಾಠಕ್ಕಿಂತ ನಾಟಕದ ತರಬೇತಿ ಬಗ್ಗೆ ಕುತೂಹಲ ಇತ್ತು. ನಮ್ ಶಿಕ್ಷಕರಿಗೆ, ಡೈರೆಕ್ಟರಿಗೂ ಧನ್ಯವಾದಗಳು.

- ನಂದನ್, 5 ನೇ ತರಗತಿ.

‘ನಾಟಕ ಹೆಂಗ್ ಆಡ್ತಾರೆ ಅಂತಾನೆ ಗೊತ್ತಿರಲಿಲ್ಲ. ಟಿವಿಯಲ್ಲಿ ನೋಡಿದ್ದೆ ಅಷ್ಟೆ. ಮೊದಲಿಗೆ ಆಸಕ್ತಿ ಇರಲಿಲ್ಲ. ಕುತೂಹಲ ಇತ್ತು. ನಮ್ಮನೇಲಿ ನಮ್ ಅಪ್ಪ ಅಮ್ಮಂಗೆ ನನ್ ಪಾತ್ರ ಇಷ್ಟವಾಯಿತು. ಹೊಸದಾಗಿ ತುಂಬಾ ಕಲಿತೆವು. ದಿನಾಲೂ, ಎಷ್ಟು ಹೊತ್ತಿಗೆ ಸಂಜೆ ಆಗತ್ತಪ್ಪಾ ಅಂತ ಕಾಯ್ತಿದ್ದೆವು.

- ಮೋನಿಕಾ, 5 ನೇ ತರಗತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು