ಶುಕ್ರವಾರ, ಆಗಸ್ಟ್ 12, 2022
23 °C
ಹಣ ಜಪ್ತಿ l ಆರೋಪಿಗಳ ಜಾಮೀನಿಗೆ ಸಿಐಡಿ ಆಕ್ಷೇಪಣೆ

ವಂಚಕ ಕಂಪನಿ ಖಾತೆಗಳಲ್ಲಿ ₹ 130 ಕೋಟಿ: ಸಿಸಿಬಿಯಿಂದ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪವರ್‌ ಬ್ಯಾಂಕ್’ ಆ್ಯಪ್ ಮೂಲಕ ಜನರಿಂದ ಹಣ ಸಂಗ್ರಹಿಸಿ ವಂಚಿಸಿರುವ ಕಂಪನಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದ್ದ ₹ 130 ಕೋಟಿಯನ್ನು ಸಿಐಡಿ ಸೈಬರ್ ಕ್ರೈಂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೇರಳದ ಅನಸ್ ಅಹ್ಮದ್ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ನಗರದ ಸಿಸಿಎಚ್ –64ನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಗೆ ಮಂಗಳವಾರ ಆಕ್ಷೇಪಣೆ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಆರೋಪಿಗೆ ಜಾಮೀನು ನೀಡದಂತೆ ಕೋರಿದರು.

ಸಿಐಡಿ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ಪಾಟೀಲ, ‘ಉದ್ಯೋಗಿಗಳನ್ನೇ ನಿರ್ದೇಶಕರನ್ನಾಗಿ ಮಾಡಿಕೊಂಡು ಅಕ್ರಮವಾಗಿ ಕಂಪನಿಗಳನ್ನು ಸೃಷ್ಟಿಸಿಕೊಂಡಿರುವ 13 ಆರೋಪಿಗಳು, ಲಾಭದ ಆಮಿಷವೊಡ್ಡಿ ಜನರನ್ನು ವಂಚಿಸಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿರುವ ಆರೋಪಿ ಸುಳ್ಳು ವಿಳಾಸ ನೀಡಿದ್ದು, ತನಿಖೆಯಿಂದ ತಪ್ಪಿಸಿಕೊಳ್ಳುವ ಉದ್ದೇಶ ಅವರದ್ದಾಗಿದೆ’ ಎಂದು ಹೇಳಿದರು.

‘ಭಾರತದಲ್ಲಿ ಆ್ಯಪ್‌ಗಳು ಚಾಲ್ತಿಯಲ್ಲಿದ್ದರೂ, ನಿರ್ವಹಣೆಯನ್ನು ಚೀನಾದಿಂದ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಚೀನಾ ಪ್ರಜೆಗಳೇ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರನ್ನೂ ಪತ್ತೆ ಮಾಡಬೇಕಿದೆ. ಪ್ರಮುಖ ಆರೋಪಿ ಅನಸ್ ಅಹ್ಮದ್ ಹಾಗೂ ಇತರರು ಜನರನ್ನು ವಂಚಿಸಿ ಗಳಿಸಿದ ಹಣವನ್ನು ಜಮೆ ಮಾಡಲೆಂದು ಐಸಿಐಸಿಐ ಬ್ಯಾಂಕ್‌ ಸೇರಿ ಹಲವು ಬ್ಯಾಂಕ್‌ಗಳಲ್ಲಿ 600 ಖಾತೆಗಳನ್ನು ತೆರೆದಿದ್ದರು.ಅದೇ ಖಾತೆಗಳನ್ನು ಸಿಐಡಿ ಇದೀಗ ಜಪ್ತಿ ಮಾಡಿದೆ’ ಎಂದರು.

‘13 ಕಂಪನಿಗಳಲ್ಲಿ 90 ಸಾವಿರ ವ್ಯವಹಾರಗಳಿಂದ ₹ 290 ಕೋಟಿ ಸಂಗ್ರಹಿಸಲಾಗಿತ್ತು. ಅದಕ್ಕಾಗಿ ಜೆಕಾ ಬೈಟ್ಸ್ ಹಾಗೂ ರೇಜೋರ್‌ಪೇ ಹಣ ವರ್ಗಾವಣೆ ಕಂಪನಿಗಳನ್ನು ಮಧ್ಯವರ್ತಿಗಳಾಗಿ ಬಳಸಿಕೊಳ್ಳಲಾಗಿದೆ. ಜನರಿಂದ ಕಟ್ಟಿಸಿಕೊಂಡ ಹಣಕ್ಕೆ ಯಾವುದೇ ಬಡ್ಡಿ ನೀಡಿಲ್ಲ. ಹಣವನ್ನೂ ವಾಪಸು ಕೊಟ್ಟಿಲ್ಲ. ಈ ಸಂಬಂಧ 29 ಸಾವಿರ ಗ್ರಾಹಕರು, ರೇಜೋರ್‌ಪೇ ಕಂಪನಿ ಮೂಲಕ ಸಿಐಡಿಗೆ ದೂರು ನೀಡಿದ್ದಾರೆ’ ಎಂದೂ ಪಾಟೀಲ ವಾದಿಸಿದರು.

ಅಕ್ರಮವಾಗಿ ವಾಸವಿರುವ ಚೀನಾ ಪ್ರಜೆ: ‘ಆರೋಪಿ ಅನಸ್ ಅಹ್ಮದ್ ಪತ್ನಿ ಹು ಕಕ್ಸಿಯೋಲಿನ್ ಚೀನಾ ಪ್ರಜೆಯಾಗಿದ್ದು, ವೀಸಾ ಅವಧಿ ಮುಗಿದರೂ ನಗರದಲ್ಲಿ ವಾಸವಿದ್ದಾರೆ. ಈ ಬಗ್ಗೆ ವಿವಿಧ ಠಾಣೆಗಳಲ್ಲಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದೂ ಪಾಟೀಲ ಹೇಳಿದರು. ‘ಕೋವಿಡ್ ಬಿಕ್ಕಟ್ಟಿನ ಸಮಯದಲ್ಲೂ ಚೀನಾ ಪ್ರಜೆಗಳ ಜೊತೆ ಕೈಜೋಡಿಸಿ ಅನಸ್‌ ಅಹ್ಮದ್ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಈತನ ಹಾಗೂ ಇತರರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಬೇಕು’ ಎಂದೂ ಕೋರಿದರು.

ಆರೋಪಿಗಳ ಪರ ವಕೀಲರು, ‘ನಮ್ಮ ಕಕ್ಷಿದಾರರು ಕಾನೂನು ಅನ್ವಯವೇ ಕಂಪನಿಗಳನ್ನು ತೆರೆದಿದ್ದಾರೆ. ಸಿಐಡಿ ತನಿಖೆಗೆ ಸಹಕರಿಸಲಿದ್ದಾರೆ. ಹೀಗಾಗಿ, ಜಾಮೀನುಮಂಜೂರು ಮಾಡಬೇಕು’ ಎಂದು ಕೋರಿದರು.

ನ್ಯಾಯಾಲಯ, ಜಾಮೀನು ಅರ್ಜಿ ಕುರಿತಂತೆ  ತೀರ್ಪು ಕಾಯ್ದಿರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು