ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಸಿಲುಕಿಕೊಂಡ ರಾಜ್ಯದ 180 ವೈದ್ಯಕೀಯ ವಿದ್ಯಾರ್ಥಿಗಳು

ಪೋಷಕರ ಆತಂಕ; ಸುರಕ್ಷಿತವಾಗಿ ಕರೆತರಲು ಸರ್ಕಾರಕ್ಕೆ ಮೊರೆ
Last Updated 24 ಫೆಬ್ರುವರಿ 2022, 12:46 IST
ಅಕ್ಷರ ಗಾತ್ರ

ವಿಜಯಪುರ: ಯುದ್ಧಪೀಡಿತ ಉಕ್ರೇನ್‌ನಲ್ಲಿ ವಿಜಯಪುರ ಜಿಲ್ಲೆಯ 10 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ 180 ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಉಕ್ರೇನ್‌ನ ಖಾರ್ಕ್ಯೂ(Kharkiv) ಇಂಟರ್‌ ನ್ಯಾಷನಲ್ ಮೆಡಿಕಲ್‌ ಕಾಲೇಜಿಗೆರಾಜ್ಯದ ವಿದ್ಯಾರ್ಥಿಗಳುಅಧ್ಯಯನಕ್ಕೆ ತೆರಳಿದ್ದಾರೆ. ಸುಮನ್‌ ರಾಣೆಬೆನ್ನೂರು ಎಂಬುವವರು ತಮ್ಮ ಏಜೆನ್ಸಿ ಮೂಲಕ ಪ್ರತಿ ವರ್ಷ ಈ ವಿಶ್ವವಿದ್ಯಾಲಯಕ್ಕೆ ರಾಜ್ಯದ ವಿದ್ಯಾರ್ಥಿಗಳನ್ನು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಡುತ್ತಾರೆ.

ಸದ್ಯ ತಾಯ್ನಾಡಿಗೆ ಮರಳಲು ರಾಜ್ಯದ ವಿದ್ಯಾರ್ಥಿಗಳು ಕೊನೆವರೆಗೂ ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಗುರುವಾರ ಮಧ್ಯಾಹ್ನದ ಬಳಿಕ ದೂರವಾಣಿ ಸಂಪರ್ಕಕ್ಕೂ ವಿದ್ಯಾರ್ಥಿಗಳು ಸಿಗುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಖಾರ್ಕ್ಯೂ ನಗರದಲ್ಲಿ ಸಿಲುಕಿಕೊಂಡಿರುವ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ತಮದಡ್ಡಿಯ ವೈದ್ಯಕೀಯ ವಿದ್ಯಾರ್ಥಿನಿ ಸುಚಿತ್ರಾ ಅವರ ತಂದೆ, ವಿಜಯಪುರ ಡಿಸಿಸಿ ಬ್ಯಾಂಕಿನ ಫೀಲ್ಡ್‌ ಆಫೀಸರ್‌ ಮಲ್ಲನಗೌಡ ಕವಡಿಮಟ್ಟಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ’ನಮ್ಮ ಮಗಳುಸುಚಿತ್ರಾ ಸೇರಿದಂತೆ ರಾಜ್ಯದ 180 ವಿದ್ಯಾರ್ಥಿನಿಯರು ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಅಧ್ಯಯನ ಮಾಡುತ್ತಿದ್ದಾರೆ’ ಎಂದರು.

‘ಉಕ್ರೇನ್‌ನಿಂದ ಭಾರತಕ್ಕೆ ಮರಳಲು ₹1.5 ಲಕ್ಷ ಹಣ ಸಂದಾಯ ಮಾಡಿ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ವಿಮಾನ ಪ್ರಯಾಣ ರದ್ದಾದ ಕಾರಣ ಅಲ್ಲಿಯೇ ಉಳಿಯುವಂತಾಗಿದೆ’ ಎಂದು ತಿಳಿಸಿದರು.

‘ನನ್ನ ಮಗಳು ಸೇರಿದಂತೆ 10 ವಿದ್ಯಾರ್ಥಿನಿಯರು ಖಾರ್ಕ್ಯೂ ನಗರದ ಮನೆಯೊಂದರಲ್ಲಿ ಸುರಕ್ಷಿತವಾಗಿ ತಂಗಿದ್ದಾರೆ. ಗುರುವಾರ ಮಧ್ಯಾಹ್ನದ ವರೆಗೂ ದೂರವಾಣಿ ಸಂಪರ್ಕದಲ್ಲಿದ್ದರು. ಅಲ್ಲಿಯ ಸರ್ಕಾರ ಯಾರೂ ಅಡ್ಡಾಡದಂತೆ ಕರ್ಫ್ಯೂ ವಿಧಿಸಿದೆ. ಜೊತೆಗೆ ಗುರುವಾರ ವಿಮಾನ ನಿಲ್ದಾಣದ ಬಳಿ ಸ್ಫೋಟದ ಶಬ್ಧ ಕೇಳಿ ಬಂದಿದ್ದು, ಭಯವಾಗುತ್ತಿದೆ. ಊಟ–ಉಪಹಾರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಮಗಳು ಆತಂಕ ವ್ಯಕ್ತಪಡಿಸಿದ್ದಾಳೆ‘ ಎಂದು ಹೇಳಿದರು.

‘ಇದುವರೆಗೂ ನಮ್ಮ ಮನವಿಗೆ ಯಾರಿಂದಲೂ ಸ್ಪಂದನೆ ಸಿಕ್ಕಲ್ಲ. ನನ್ನ ಮಗಳು ಸೇರಿದಂತೆ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಆದಷ್ಟು ಬೇಗ ದೇಶಕ್ಕೆ ಸುರಕ್ಷಿತವಾಗಿ ಮರಳಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT