ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್: ಎಸಿಬಿ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Last Updated 19 ಜೂನ್ 2021, 10:57 IST
ಅಕ್ಷರ ಗಾತ್ರ

ಬೆಂಗಳೂರು: ‘ಭದ್ರಾ ಮೇಲ್ದಂಡೆ ಕಾಮಗಾರಿಯ ₹ 20 ಸಾವಿರ ಕೋಟಿ ಟೆಂಡರ್‌ನಲ್ಲಿ ಶೇ 10ರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ’ ಎಂಬ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಆರೋಪವನ್ನು ಭ್ರಷ್ಟಾಚಾರ ನಿರೋಧ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಈ ಆರೋಪ ಎರಡು ಕಾರಣಗಳಿಗಾಗಿ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಮುಖ್ಯಮಂತ್ರಿಯ ಮಗನ ಮೇಲೆ ಮಾಡಲಾಗಿದೆ. ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿರುವುದನ್ನು ನೋಡಿದರೆ ಹಗರಣ ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಗರದ ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್‌ ಹಾಸಿಗೆ ಮತ್ತು ಬೆಡ್‌ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್. ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು. ಆಡಳಿತ ಪಕ್ಷದ ಶಾಸಕರು ಮತ್ತು ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದಂತಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು’ ಎಂದೂ ಹೇಳಿದ್ದಾರೆ.

‘ಮುಖ್ಯಮಂತ್ರಿ ಮತ್ತು ಅವರ ಮಗನ ವಿರುದ್ಧದ ಆರೋಪ ಇದೇ ಮೊದಲಬಾರಿ ಕೇಳಿಬಂದದ್ದಲ್ಲ. ಇನ್ನೊಬ್ಬ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಒಂದು ವರ್ಷದಿಂದ ವಿಜಯೇಂದ್ರ ವಿರುದ್ದ ಆರೋಪಗಳ ಸುರಿಮಳೆಗೈಯ್ಯುತ್ತಿದ್ದಾರೆ. ಇತ್ತೀಚೆಗೆ ಸಚಿವ ಸಿ.ಪಿ. ಯೋಗೀಶ್ವರ್ ಅವರೂ ದನಿಗೂಡಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದಿದ್ದಾರೆ.

‘ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಾಸಕರ ವಿರುದ್ದ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ಅವರಿಗೆ ಇನ್ನಷ್ಟು ಅವಕಾಶ ನೀಡುತ್ತಿರುವುದನ್ನು ನೋಡಿದರೆ ಒಂದೊ ಬಿಜೆಪಿಯ ಹೈಕಮಾಂಡ್ ಈ ಆರೋಪಗಳನ್ನು ಒಪ್ಪಿಕೊಂಡಿದೆ. ಇಲ್ಲವೇ ಭ್ರಷ್ಟಾಚಾರದ ಹೇಸಿಗೆಯಲ್ಲಿ ಅದೂ ಕೂಡಾ ಪಾಲು ಪಡೆದಿದೆ ಎಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ. ರಾಜ್ಯದ ಆಡಳಿತ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತ ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ಅರುಣ್ ಸಿಂಗ್ ಎಂಬ ಬಡಪಾಯಿಯ ಕೆಲಸ ‘ಬಂದ ಪುಟ್ಟಾ..ಹೋದ ಪುಟ್ಟಾ’ ಎಂದಾಗಿದೆ. ಪ್ರಧಾನಿ ನರೇಂದ್ರಮೋದಿಯ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೆ. ಉಳಿದಂತೆ ಚೀನಾದ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಮರಿಗಳಿರಲಿ, ಮೋದಿಯವರು ಪೌರುಷವಿಲ್ಲದ ಉತ್ತರಕುಮಾರ’ ಎಂದೂ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT