243 ಮಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

ಬೆಂಗಳೂರು: 2015ರಿಂದ 2020ರ ಅವಧಿಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ, ಪೌರ ರಕ್ಷಣೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ 243 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಯವರ ಚಿನ್ನದ ಪದಕವನ್ನು ಮಂಗಳವಾರ ಪ್ರದಾನ ಮಾಡಲಾಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲ ಪುರಸ್ಕೃತರಿಗೂ ಪದಕ ಪ್ರದಾನ ಮಾಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ರಿಜ್ವಾನ್ ಅರ್ಷದ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಅಮರ್ ಕುಮಾರ್ ಪಾಂಡೆ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಪದಕ ಪ್ರದಾನ ಮಾಡಿ ಮಾತನಾಡಿದ ಯಡಿಯೂರಪ್ಪ, ‘ಪ್ರವಾಹ, ಭೂಕುಸಿತ ಸೇರಿದಂತೆ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈಗ ರಾಜ್ಯ ವಿಪತ್ತು ಸ್ಪಂದನಾ ಪಡೆಯನ್ನೂ ರಚಿಸಲಾಗಿದೆ. ಈ ಎಲ್ಲ ಘಟಕಗಳ ಸೇವೆ ಸ್ಮರಣೀಯವಾದುದು’ ಎಂದರು.
ಈ ಎಲ್ಲ ಇಲಾಖೆಗಳಿಗೂ ಅತ್ಯಾಧುನಿಕ ಸಾಧನಗಳನ್ನು ಒದಗಿಸಲಾಗುವುದು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ವಿಪತ್ತು ಸ್ಪಂದನಾ ಪಡೆಗಳ ಸಿಬ್ಬಂದಿಗೆ ವೈಜ್ಞಾನಿಕ ವಿಧಾನದಲ್ಲಿ ಕಾರ್ಯನಿರ್ವಹಿಸುವ ಕುರಿತು ತರಬೇತಿ ನೀಡಲಾಗುವುದು. ವಿಪತ್ತು, ಅಗ್ನಿ ಅವಘಡಗಳು ಸಂಭವಿಸಿದ ಸ್ಥಳದಲ್ಲಿ ವೈಜ್ಞಾನಿಕವಾಗಿ ತನಿಖೆ ನಡೆಸುವುದನ್ನೂ ಪರಿಚಯಿಸಲಾಗುವುದು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.