ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಜಾತಿಗಳಿಗೆ 2 ಎ ಮೀಸಲಾತಿ– ಹಿಂದುಳಿದ ಜಾತಿಗಳ ಒಕ್ಕೂಟ ವಿರೋಧ

Last Updated 12 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮೇಲ್ವರ್ಗದ ಪ್ರಬಲ ಜಾತಿಗಳನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಆಶ್ವಾಸನೆಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಒಂದು ವೇಳೆ, ಸರ್ಕಾರ ಈ ಬೇಡಿಕೆ ಪೂರೈಸಿದರೆ ಸದ್ಯ ಪ್ರವರ್ಗ-2ಎನಲ್ಲಿರುವ ಎಲ್ಲ ಜಾತಿ, ಜನಾಂಗಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದೂ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಒಕ್ಕೂಟದಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಎಂ. ಲಾಥೂರ್, ಮಾಜಿ ಮೇಯರ್ ವೆಂಕಟೇಶಮೂರ್ತಿ, ‘ಸರ್ಕಾರದ ಈ ಭರವಸೆಯಿಂದ ಪ್ರವರ್ಗ-1 ಮತ್ತು 2ಎ ಪಟ್ಟಿಯಲ್ಲಿರುವ ಜಾತಿಗಳ ಜನರಲ್ಲಿ ಭೀತಿ ಉಂಟಾಗಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಪ್ರಬಲ ಸಮಾಜಗಳು ಹಿಂದುಳಿದ ವರ್ಗಗಳ ಮೀಸಲಾತಿಗೆ ಒತ್ತಾಯಿಸುತ್ತಿವೆ. ಸರ್ಕಾರ ಕೂಡ ಮೀಸಲಾತಿಗೆ ಒಳಪಡಿಸುವ ಭರವಸೆ ನೀಡುತ್ತಿದೆ. ಯಾವುದೇ ಜಾತಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈ ಎರಡು ಪ್ರವರ್ಗಗಳಿಗೆ ಬೇರೆ ಬಲಾಢ್ಯ ಸಮಾಜಗಳನ್ನು ಸೇರಿಸುವುದಕ್ಕೆ ವಿರೋಧವಿದೆ’ ಎಂದರು.

‘ಪ್ರವರ್ಗ-1ರಲ್ಲಿ ಬರುವ ಗೊಲ್ಲ, ಕಾಡುಗೊಲ್ಲ, ಬೆಸ್ತ, ಉಪ್ಪಾರ, ಹೂವಾಡಿಗ, ಎಳವ, ದೊಂಬಿದಾಸ, ಬುಡಬುಡಿಕೆ ಸೇರಿದಂತೆ 95 ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಬೇಕು. 2ಎನಲ್ಲಿ ಬರುವ ಹಾಗೂ ಅಲೆಮಾರಿ, ಅರೆ ಅಲೆಮಾರಿ ಜಾತಿಗಳಿಗೆ ಸೇರಿದ 46 ಜಾತಿಗಳನ್ನ ಒಳಗೊಂಡಂತೆ 246 ಉಪಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು’ ಎಂದೂ ಒತ್ತಾಯಿಸಿದರು.

‘ಅತ್ಯಂತ ಹಿಂದುಳಿದ ವರ್ಗಗಳ ಜನರನ್ನು ಅವರ ಅಗತ್ಯತೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿಸಿ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ 32ಕ್ಕೆ ಏರಿಸಬೇಕು. ಈಗಾಗಲೇ ಸಿದ್ಧವಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಿ ಅದರ ಆಧಾರದಲ್ಲಿ ಮೀಸಲಾತಿ ಪರಿಷ್ಕರಿಸಬೇಕು’ ಎಂದೂ ಆಗ್ರಹಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ಕಾರ್ಯದರ್ಶಿ ಜಿ.ಡಿ.ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT