ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ಮನೆಯಲ್ಲಿ 480 ಕಡತ, 80 ಸೀಲ್‌ ಪತ್ತೆ

ದುಬಾರಿ ಬೆಲೆಯ120 ಲೀಟರ್‌ ಮದ್ಯ ದಾಸ್ತಾನು ಇರಿಸಿದ್ದ ದೇವೇಂದ್ರಪ್ಪ
Last Updated 8 ಫೆಬ್ರುವರಿ 2021, 17:14 IST
ಅಕ್ಷರ ಗಾತ್ರ

ಬೆಂಗಳೂರು: ₹ 20 ಲಕ್ಷ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಂದ ಬಂಧಿತರಾಗಿದ್ದ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆಯಲ್ಲಿ ಪಾಲಿಕೆಯ 480 ಕಡತಗಳು, ವಿವಿಧ ಅಧಿಕಾರಿಗಳ 80 ಸೀಲ್‌ಗಳು ಹಾಗೂ 120 ಲೀಟರ್‌ ದುಬಾರಿ ಬೆಲೆಯ ಮದ್ಯದ ದಾಸ್ತಾನು ಪತ್ತೆಯಾಗಿದೆ.

ಕಟ್ಟಡವೊಂದರ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ₹ 20 ಲಕ್ಷ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಶುಕ್ರವಾರ ಸಂಜೆ ಬಂಧಿಸಲಾಗಿತ್ತು. ಆ ಬಳಿಕ ಎಸಿಬಿ ಅಧಿಕಾರಿಗಳು ಆರೋಪಿಯ ಮನೆಯ ಮೇಲೆ ದಾಳಿಮಾಡಿ, ಶೋಧ ನಡೆಸಿದ್ದರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿವಿಧ ವಲಯಗಳಿಗೆ ಸಂಬಂಧಿಸಿದ 480 ಕಡತಗಳನ್ನು ಈ ಅಧಿಕಾರಿ ತನ್ನ ಮನೆಯಲ್ಲಿ ಇರಿಸಿಕೊಂಡಿರು ವುದು ದಾಳಿ ವೇಳೆ ಬಯಲಿಗೆ ಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲೇ ಮೊಹರು

ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸೇರಿದ 80 ಮೊಹರು (ಸೀಲ್‌) ಪತ್ತೆಯಾಗಿವೆ. ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು ಅವರ ಕಚೇರಿಗಳ ಹೆಸರಿನ ಸೀಲ್‌ಗಳೂ ದೊರಕಿವೆ.

ದೇವೇಂದ್ರಪ್ಪ ಪಾಲಿಕೆಯ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಡಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೆ ಅಧಿಕಾರಿಗಳ ಹೆಸರಿನಲ್ಲಿ ತಾನೇ ಸಹಿಮಾಡಿ ನಕ್ಷೆ ಮಂಜೂರಾತಿ ಮತ್ತು ಒ.ಸಿ ವಿತರಣೆ ಮಾಡುತ್ತಿದ್ದ ಅನುಮಾನ ವ್ಯಕ್ತವಾಗಿದೆ. ಈ ಕಾರಣಕ್ಕಾಗಿಯೇ ಕಡತಗಳು ಮತ್ತು ಸೀಲ್‌ಗಳನ್ನು ಮನೆಯಲ್ಲಿ ಇರಿಸಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಎಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

‘ವಶಕ್ಕೆ ಪಡೆದಿರುವ ಕಡತಗಳು ಮತ್ತು ಸೀಲ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಪ‍ತ್ರ ಬರೆಯಲಾಗುವುದು. ವರದಿ ಬಂದ ಬಳಿಕ ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸುವ ಕುರಿತು ತೀರ್ಮಾನಿಸಲಾಗುವುದು’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್ ಕುಮಾರ್ ಆರ್‌. ಜೈನ್‌ ತಿಳಿಸಿದರು.

ನಾಲ್ಕು ಪ್ರಕರಣ ಸಾಧ್ಯತೆ

ದೇವೇಂದ್ರಪ್ಪ ವಿರುದ್ಧ ₹ 20 ಲಕ್ಷ ಲಂಚ ಪಡೆದ ಆರೋಪದಡಿ ಎಸಿಬಿ ಈಗಾಗಲೇ ಪ್ರಕರಣ ದಾಖಲಿಸಿದೆ. ಕಡತ ಮತ್ತು ಸೀಲ್‌ಗಳನ್ನು ಇರಿಸಿಕೊಂಡಿರುವುದು ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆ ಇದೆ. 120 ಲೀಟರ್‌ ಮದ್ಯ ದಾಸ್ತಾನು ಇರಿಸಿಕೊಂಡಿದ್ದ ಆರೋಪದಡಿ ಅಬಕಾರಿ ಅಧಿಕಾರಿಗಳ ಮೂಲಕ ಪ್ರತ್ಯೇಕ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.

ಮದ್ಯದ ಬಾಟಲಿಗಳ ರಾಶಿ

ದೇವೇಂದ್ರಪ್ಪ ಅವರ ಮನೆಯ ಕೊಠಡಿಯೊಂದರಲ್ಲಿ ದುಬಾರಿ ದರದ ಮದ್ಯದ ಬಾಟಲಿಗಳ ರಾಶಿಯೇ ಇತ್ತು. ಒಟ್ಟು 120 ಲೀಟರ್‌ನಷ್ಟು ಮದ್ಯದ ಬಾಟಲಿಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಸ್ತಿ ದಾಖಲೆಗಳು ವಶಕ್ಕೆ: ದುಬಾರಿ ಬೆಲೆಯ ಐಷಾರಾಮಿ ಕಾರುಗಳು, ಸ್ಥಿರಾಸ್ತಿ ದಾಖಲೆಗಳು, ಬ್ಯಾಂಕ್‌ ಠೇವಣಿ ಹಾಗೂ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳೂ ತನಿಖಾ ತಂಡಕ್ಕೆ ಲಭಿಸಿವೆ. ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT