ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ದುಬಾರಿ, ಆಟೊ ದರವೂ ತುಟ್ಟಿ

Last Updated 17 ಅಕ್ಟೋಬರ್ 2020, 19:48 IST
ಅಕ್ಷರ ಗಾತ್ರ

ಕಲಬುರ್ಗಿ: ಅಗತ್ಯ ಸೇವೆಗಳಲ್ಲಿ ಪ್ರಮುಖವಾಗಿರುವ ಆರೋಗ್ಯ ಸೇವೆಗಳ ಪೈಕಿ ಖಾಸಗಿ ವೈದ್ಯರ ಸಲಹಾ ಶುಲ್ಕವು ಲಾಕ್‌ಡೌನ್ ನಂತರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.

‘ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ಸೇವೆ ನೀಡಿದ್ದೇವೆ. ದುಬಾರಿ ಉಪಕರಣಗಳನ್ನು ಖರೀದಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಹೀಗಾಗಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ’ ಖಾಸಗಿ ವೈದ್ಯರು.

‘ಸಾಮಾನ್ಯ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋದರೆ ವೈದ್ಯರಿಗೆ ₹ 250–₹ 300 ಸಲಹಾ ಶುಲ್ಕ ನೀಡಬೇಕು. ಲಾಕ್‌ಡೌನ್‌ ತೆರವುಗೊಳಿಸಿದರೂ ನಮ್ಮ ವ್ಯಾಪಾರ ನಡೆಯುತ್ತಿಲ್ಲ. ನಾವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ’ ಎಂದು ಬೀದಿಬದಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಆಟೊ ಪ್ರಯಾಣ ದರವೂ ಹೆಚ್ಚಾಗಿದೆ. ಹೆಚ್ಚು ಪ್ರಯಾಣಿಕರನ್ನು ಒಮ್ಮೆಗೇ ಕರೆದೊಯ್ಯುವಂತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿದೆ, ಪಾಲಿಸುವುದು ಅನಿವಾರ್ಯವೂ ಆಗಿದೆ ಎಂದು ಆಟೊ ಚಾಲಕರು ಹೇಳುತ್ತಾರೆ.

‘ದಿನ ಪೂರ್ತಿ ಆಟೊ ಓಡಿಸಿದರೂ ಬಾಡಿಗೆ ಕಟ್ಟಲು ಆಗುವುದಿಲ್ಲ. ಕೊರೊನಾ ಭಯದಿಂದಾಗಿ ಪ್ರಯಾಣಿಕರು ಮೊದಲಿನಂತೆ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಿಸಿದ್ದೇವೆ’ ಎನ್ನುತ್ತಾರೆ ಆಟೊ ಚಾಲಕರು.

ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ ಎಂಬ ಚಿಂತೆ ಟ್ಯಾಕ್ಸಿ ಮಾಲೀಕರದ್ದು. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ಯಾಕ್ಸಿ ಮಾಲೀಕ ರುಕ್ಮಣ್ಣ ರೆಡ್ಡಿ, ‘ಲಾಕ್‌ಡೌನ್‌ಗೂ ಮುನ್ನ ಪ್ರತಿ ಕಿ.ಮೀಗೆ ₹ 14 ಪಡೆಯುತ್ತಿದ್ದೆವು. ನಷ್ಟವಾಗುತ್ತದೆ ಎಂದು ದರ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಡೀಸೆಲ್ ಬೆಲೆ ಹೆಚ್ಚಿರುವ ಇಂದಿನ ಸಂದರ್ಭದಲ್ಲಿ ಸರಿಯಾಗಿ ಬಾಡಿಗೆ ಸಿಗದಿದ್ದರೆ ಬ್ಯಾಂಕ್ ಕಂತು ಕಟ್ಟಲು ಸಹ ಸಾಧ್ಯವಾಗುವುದಿಲ್ಲ’ ಎಂದರು.

ಮೊದಲು ಒಬ್ಬರಿಗೆ ಕ್ಷೌರ ಮಾಡಲು ₹ 120 ಪಡೆಯುತ್ತಿದ್ದೆವು. ಈಗ ₹ 30ರಷ್ಟು ಹೆಚ್ಚಿಸಿದ್ದೇವೆ. ಕೊರೊನಾ ಸೋಂಕಿನ ಭೀತಿ ಇರುವುದರಿಂದ ಒಬ್ಬರಿಗೆ ಬಳಸಿದ ಹ್ಯಾಂಡ್‌ ಗ್ಲೌಸ್ಅನ್ನು ಮತ್ತೊಬ್ಬರಿಗೆ ಬಳಸುವುದಿಲ್ಲ. ಎಲ್ಲ ಸಲಕರಣೆಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಗ್ರಾಹಕರ ಸುರಕ್ಷತೆಗಾಗಿ ದರ ಹೆಚ್ಚಿಸಿದ್ದೇವೆ ಎನ್ನುತ್ತಾರೆ ಕ್ಷೌರದಂಗಡಿಯ ಮಾಲೀಕ ಸಂಜೀವ್.

ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಕೆಲವು ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ. ಆದರೆ, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಿಂದೆ ₹ 50 ಇದ್ದ ಶುಲ್ಕವನ್ನು ಈಗ ₹ 100ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ನಿರ್ವಹಣೆ: ವಿಜಯ್‌ ಜೋಷಿ, ಮಾಹಿತಿ: ಸತೀಶ್ ಬಿ. (ಕಲಬುರ್ಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT