ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಖರೀದಿಯಲ್ಲಿ ₹3,400 ಕೋಟಿ ಹಗರಣ: ಆಮ್‌ ಆದ್ಮಿ ಪಕ್ಷ ಆರೋಪ

Last Updated 23 ನವೆಂಬರ್ 2020, 20:47 IST
ಅಕ್ಷರ ಗಾತ್ರ

ಬೆಂಗಳೂರು: ’ವಿದ್ಯುತ್‌ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ₹3400 ಕೋಟಿ ಹಗರಣ ನಡೆಸಿದೆ‘ ಎಂದು ‌ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಹಣ ಲೂಟಿ ಹೊಡೆಯುತ್ತಿರುವ ಸರ್ಕಾರವು ಅದಾನಿ ಕಂಪನಿಯ ಜೇಬು ತುಂಬಿಸಲು ಹೊರಟಿದೆ‌‘ ಎಂದರು.

’ಉಡುಪಿ ವಿದ್ಯುತ್ ಸ್ಥಾವರ 2010ರಲ್ಲಿ 600 ಮೆಗಾವಾಟ್ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದನ್ನು 2014ರಲ್ಲಿ ಅದಾನಿ ಪವರ್ ಖರೀದಿಸಿತು. ಪ್ರಸ್ತುತ 2000 ಮೆಗಾವಾಟ್ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 1800 ಮೆಗಾವಾಟ್ ಅನ್ನು ಸರ್ಕಾರ ಖರೀದಿಸುತ್ತಿದೆ. 2018 ರಲ್ಲಿ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್‌ಸಿ) ಪ್ರಕಾರ ರಾಷ್ಟ್ರೀಯ ಸರಾಸರಿ ವಿದ್ಯುತ್ ಖರೀದಿ ವೆಚ್ಚ (ಎನ್‌ಎಪಿಸಿ) ಯುನಿಟ್‌ಗೆ ₹3.53 ಮತ್ತು ಐದು ವರ್ಷಗಳಲ್ಲಿ ಸರಾಸರಿ ಹೆಚ್ಚಳವು ವರ್ಷಕ್ಕೆ ಶೇ 2ಕ್ಕಿಂತ ಕಡಿಮೆಯಿದೆ‘ ಎಂದರು.

’ಅದಾನಿ ಪವರ್ ಒಡೆತನದ ಯುಪಿಸಿಎಲ್‌ ಎರಡು ವರ್ಷಗಳಲ್ಲಿ ವಿದ್ಯುತ್ ಖರೀದಿ ಬೆಲೆಯಲ್ಲಿ ಶೇ 42 ಹೆಚ್ಚಳ ಮಾಡಿ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡಿದೆ. 2019ರಲ್ಲಿ ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ ₹1224 ಕೋಟಿ. ಎಪಿಪಿಸಿ ಬೆಲೆಗೆ ಹೋಲಿಸಿದರೆ ₹563 ಕೋಟಿಗಳಷ್ಟು ಹೆಚ್ಚು ಪಾವತಿ ಮಾಡಿದೆ‘ ಎಂದು ಅವರು ಆರೋಪಿಸಿದರು.

’ರಾಜ್ಯ ಸರ್ಕಾರ ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿಸಿದ ಈ ಎರಡು ವರ್ಷಗಳಲ್ಲಿ ಕಲ್ಲಿದ್ದಲಿನ ಬೆಲೆ ಶೇ 40ರಷ್ಟು ಕಡಿಮೆ ಆಗಿದೆ. ಇದರಿಂದ ಅದಾನಿ ಕಂಪನಿ ₹450 ಕೋಟಿ ‌ಹೆಚ್ಚುವರಿ ಲಾಭ ಮಾಡಿದೆ‘ ಎಂದರು.

‌’ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು‘ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT