ಭಾನುವಾರ, ಮೇ 16, 2021
24 °C

ಎಸಿಬಿ ತನಿಖೆ ರದ್ದುಪಡಿಸಲು ಹೈಕೋರ್ಟ್ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊಪ್ಪಳದ ಗ್ರಾಮೀಣ ಕುಡಿಯುವ ನೀರು ಯೋಜನೆ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುತ್ತಿರುವ ತನಿಖೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಕೊಪ್ಪಳ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ಪ್ರಶ್ನಿಸಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘2013ರ ಸೆಪ್ಟೆಂಬರ್ 21ರಿಂದ 2014ರ ಫೆಬ್ರುವರಿ 6ರ ನಡುವೆ ಈ ಅಕ್ರಮ ನಡೆದಿದೆ. ಕಾಮಗಾರಿ ನಿರ್ವಹಿಸದೆ ಮತ್ತು ಪರಿಶೀಲನೆ ನಡೆಸದೆ ಬಿಲ್ ಪಾವತಿಸಲಾಗಿದೆ. ಅಳತೆ ಪುಸ್ತಕದಲ್ಲಿ ನಮೂದಾಗಿರುವುದಕ್ಕೂ ಕೆಲಸ ಆಗಿರುವುದಕ್ಕೂ ತಾಳೆ ಆಗುವುದಿಲ್ಲ. ಅಳತೆ ಪುಸ್ತಕದಲ್ಲಿ ಸುಳ್ಳು ನಮೂದಿಸಲಾಗಿದೆ. ಎಲ್ಲಾ ಪುಸ್ತಕದಲ್ಲೂ  ಒಂದೇ ದಿನ ಅಳತೆ ನಮೂದಿಸಲಾಗಿದೆ’ ಎಂಬುದು ಎಂಜಿನಿಯರ್‌ಗಳ ಮೇಲಿರುವ ಆರೋಪ.

‘ಭ್ರಷ್ಟಾಚಾರ ತಡೆ(ಪಿ.ಸಿ) ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಅರಿವಿನ ಅಪರಾಧ ಎಂದು ದೂರು ದಾಖಲಾಗಿರುವ ಕಾರಣ ತನಿಖೆ ರದ್ದುಗೊಳಿಸಲು ಆಗುವುದಿಲ್ಲ. ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ ಎಂಬ ಆರೋಪ ಇದ್ದು, ಸತ್ಯಾಂಶ ಹೊರಗೆ ಬರಬೇಕಾಗಿದೆ’ ಎಂದು ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಒಟ್ಟು ₹23.4 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು 2016ರ ಅಕ್ಟೋಬರ್ 3ರಂದು ಸರ್ಕಾರ ಎಸಿಬಿಗೆ ವಹಿಸಿತ್ತು. ಅದೇ ವರ್ಷದ ನವೆಂಬರ್‌ 7ರಂದು ಎಫ್‌ಐಆರ್ ದಾಖಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು