ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾ – ರೋಹಿಣಿಗೆ ಸಲಹೆ ನೀಡುವಂತೆ ಮೋದಿ, ಅಮಿತ್‌ ಶಾಗೆ ಮನವಿ ಮಾಡಿದ ಜಗ್ಗೇಶ್‌

Last Updated 21 ಫೆಬ್ರುವರಿ 2023, 11:36 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕವಾಗಿ ಘನತೆಯನ್ನು ಕಾಪಾಡಿಕೊಳ್ಳುವಂತೆ ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.

ಇಬ್ಬರೂ ಅಧಿಕಾರಿಗಳ ನಡುವಿನ ಸಂಘರ್ಷ, ಆರೋಪ – ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಟ್ವೀಟ್‌ ಮಾಡಿರುವ ಜಗ್ಗೇಶ್‌, ಅಸಮಾಧಾನ ಹೊರಹಾಕಿದ್ದಾರೆ.

‘ಐಪಿಎಸ್‌ ಮತ್ತು ಐಎಎಸ್‌ ಹುದ್ದೆಗಳು ಜನರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಸ್ಥಾನಗಳಾಗಿವೆ. ಸರ್ಕಾರ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತವೆ. ವೈಯಕ್ತಿಕ ದ್ವೇಷವನ್ನು ಮಾಧ್ಯಮಗಳ ಮುಂದೆ ತರಬಾರದು. ಸಾರ್ವಜನಿಕವಾಗಿ ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ನಾನು ನರೇಂದ್ರ ಮೋದಿ ಅಮಿತ್ ಶಾ ಅವರನ್ನು ವಿನಂತಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ರೂಪಾ ಅವರಿಗೆ ಟ್ಯಾಗ್‌ ಮಾಡಲಾಗಿದೆ.

ಓದಿ...

ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬಹಿರಂಗ ಸಂಘರ್ಷ ಮುಂದುವರಿಯುತ್ತಲೇ ಸಾಗಿದ್ದು, ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಿದೆ. ಇಬ್ಬರೂ ಆರೋಪ- ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕರಣ ಜೋರು ಚರ್ಚೆಯಾಗುತ್ತಿದೆ. ಶಾಸಕ ಸಾ.ರಾ. ಮಹೇಶ್‌ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬ ಸುದ್ದಿಯನ್ನು ಪ್ರಸ್ತಾಪಿಸಿ ಡಿ. ರೂಪಾ ಮೊದಲಿಗೆ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಿಂಧೂರಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ನಂತರ ಅದು ನಗ್ನ ಚಿತ್ರ ಹಂಚಿಕೆಯಾಗಿರುವ ಹಂತಕ್ಕೆ ಬಂದು ನಿಂತಿದೆ.

ಈ ಮಧ್ಯೆ, ಅಧಿಕಾರಿಗಳ ಬೀದಿಜಗಳದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಶಿಸ್ತು ಉಲ್ಲಂಘನೆ, ದುರ್ನಡತೆ, ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಇಬ್ಬರಿಗೂ ನೋಟಿಸ್‌ ನೀಡಲಾಗಿದೆ.

‘ಮುಖ್ಯಕಾರ್ಯದರ್ಶಿ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ಅವರು ನೀಡಿರುವ ದೂರಿನ ಪತ್ರದ ಆಧಾರದಲ್ಲಿ ಕ್ರಮ ಕೈಗೊಳ್ಳಲು ಪರಿಶೀಲಿಸುತ್ತಿದ್ದಾರೆ. ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡು, ಶಿಸ್ತು ಕಾಪಾಡುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT