ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಚ್ಚುವರಿ ಶುಲ್ಕಕ್ಕೆ ಒತ್ತಡ ಹೇರಿದರೆ ಕಠಿಣ ಕ್ರಮ’-ಎಸ್.ಸುರೇಶ್ ಕುಮಾರ್

Last Updated 19 ಮಾರ್ಚ್ 2021, 18:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ರಾಯಲ್ ಕಾನ್ಕಾರ್ಡ್‌ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಶುಲ್ಕ ವಿಚಾರದಲ್ಲಿ ನಡೆದಂಥ ಪ್ರಕರಣಗಳು ಮರುಕಳಿಸಿದರೆ ಶಿಕ್ಷಣ ಇಲಾಖೆ ತನ್ನ ಪರಮಾಧಿಕಾರ ಚಲಾಯಿಸಬೇಕಾದೀತು’ ಎಂದು ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

‘ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಇಂಥ ಪ್ರಕರಣಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಂದಿಸಲಿವೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಲೂ ಇಂಥ ಪ್ರಕರಣಗಳಿಗೆ ದಾರಿ ಮಾಡಿಕೊಡದಂತೆ ವರ್ತಿಸಬೇಕಾದ ಅಗತ್ಯವನ್ನು ಪದೇ ಪದೇ ಹೇಳಿದ್ದೇನೆ. ಮತ್ತೆ ಮರುಕಳಿಸದಂತೆ ಖಾಸಗಿ ಶಾಲೆಗಳು ಅಗತ್ಯ ಕ್ರಮ ವಹಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

‘ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಈ ಹಿಂದೆ ಬೆಂಗಳೂರಿನ ಕೋರಮಂಗಲದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಇದೇ ರೀತಿ ನಡೆಸಿಕೊಂಡಿದ್ದರಿಂದ, ಆತ ಆತ್ಮಹತ್ಯಗೆ ಯತ್ನಿಸಿದ್ದನ್ನು ನಾವೆಲ್ಲ ಯೋಚಿಸಬೇಕಾಗಿದೆ. ಹೀಗಾಗಿ, ಇಂಥ ಪ್ರಕರಣಗಳು ಅದೆಷ್ಟು ಆಘಾತಕಾರಿ ಎಂಬುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

‘ಅತಿಸೂಕ್ಷ್ಮವಾದ ವಿಷಯವನ್ನು ನಾಜೂಕಿನಿಂದ ನಿರ್ವಹಿಸಬೇಕಾದ ಅಂಶವನ್ನು ಹೈಕೋರ್ಟ್‌ ಕೂಡಾ ಒತ್ತಿ ಹೇಳಿದೆ. ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ತೀವ್ರ ಸಂವೇದನೆಯಿಂದ ವರ್ತಿಸಬೇಕು. ಕೊರೊನಾ ವಿಷಮ ಕಾಲಘಟ್ಟದ ಸಂದರ್ಭದಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಸಾಮಾಜಿಕ ಜವಾಬ್ದಾರಿ ಅರಿತು ವರ್ತಿಸಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT