ಬೆಂಗಳೂರು: ಪರಿಶಿಷ್ಠ ಜಾತಿ, ಹಿಂದುಳಿದ ವರ್ಗಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹಕ ಜಾಹೀರಾತು ಬೆಂಬಲವನ್ನು ಬ್ರಾಹ್ಮಣ ಸಮುದಾಯದ ಮಾಲೀಕತ್ವದ ಪತ್ರಿಕೆಗಳಿಗೂ ವಿಸ್ತರಿಸಿದ ರಾಜ್ಯ ಸರ್ಕಾರದ ಆದೇಶವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ‘ಕಳೆದ ಸಾಲಿನ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಒಡೆತನದ ಪತ್ರಿಕೆಗಳ ಮಾಲೀಕರ ಪತ್ರಿಕೆಗಳಿಗೆ ಪ್ರೋತ್ಸಾಹಕ ಜಾಹೀರಾತು ನೀಡುವ ಮೂಲಕ ಸರ್ಕಾರ ಕನ್ನಡ ಭಾಷಾ ಪತ್ರಿಕೆಗಳ ಉಳಿವಿಗೆ ದಿಟ್ಟ ಕ್ರಮ ಕೈಗೊಂಡಿತ್ತು. ಇದರಿಂದ 450ಕ್ಕೂ ಅಧಿಕ ಪತ್ರಿಕೆಗಳ ಉಳಿವಿಕೆ ದಾರಿಯಾಗಿತ್ತು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಲಿಂಗಾಯತ, ಒಕ್ಕಲಿಗ ಮತ್ತು ಅಲ್ಪ ಸಂಖ್ಯಾತ ಸಮುದಾಯದ ಒಡೆತನದ ಪತ್ರಿಕೆಗಳೂ ಸವಲತ್ತನ್ನು ಪಡೆದಿವೆ. ಈ ಸವಲತ್ತಿನಿಂದ ಬ್ರಾಹ್ಮಣ ಸಮುದಾಯದ ಮಾಲೀಕತ್ವದ ಸುಮಾರು 25ರಷ್ಟು ಪತ್ರಿಕೆಗಳು ವಂಚಿತವಾಗಿದ್ದವು’ ಎಂದು ಮಾಹಿತಿ ನೀಡಿದ್ದಾರೆ.
‘ಯಾವುದೇ ಸಮುದಾಯದ ಮಾಲೀಕತ್ವದ ಪತ್ರಿಕೆಗಳಿಗೆ ಮುದ್ರಣ ಕಾಗದ ದರ, ಮುದ್ರಣ ವೆಚ್ಚ, ಸರಬರಾಜು, ನೌಕರರ ಭತ್ಯೆ ವೆಚ್ಚಗಳು ಒಂದೇ ಆಗಿರುತ್ತವೆ. ಹಾಗಾಗಿ, ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೂ ಈ ಸವಲತ್ತು ವಿಸ್ತರಿಸಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮನವಿ ಮಾಡಿತ್ತು. ನಮ್ಮ ಈ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಇದೆ ಮೊದಲ ಬಾರಿ ಇಂತಹ ಅವಕಾಶ ದೊರೆತಿದೆ. ಆದರೆ, ಕೆಲವರು ಈ ಸವಲತ್ತು ಕೇವಲ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗಷ್ಟೇ ಸೀಮಿತ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.