ಗುರುವಾರ , ಅಕ್ಟೋಬರ್ 6, 2022
26 °C
ವಿಧಾನಸಭೆಯಲ್ಲಿ ದಾಖಲೆ ಬಿಡುಗಡೆ

ಬಿಎಂಎಸ್‌ ಸಂಸ್ಥೆಯ ಮೇಲಿನ ಆರೋಪ: ಎಚ್‌ಡಿಕೆ–ಅಶ್ವತ್ಥನಾರಾಯಣ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಎಸ್‌ ಸಂಸ್ಥೆಯ ಮೇಲಿನ ಆರೋಪ ಕುರಿತಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆವೇಶ ಭರಿತರಾಗಿ ವಿಧಾನಸಭೆಯಲ್ಲಿ ಪರಸ್ಪರ ವಾಕ್ಸಮರ ನಡೆಸಿದರು.

ಕುಮಾರಸ್ವಾಮಿ ಮಾತನಾಡುವಾಗ ಶಾಂತವಾಗಿಯೇ ಆಲಿಸುತ್ತಿದ್ದ ಅಶ್ವತ್ಥನಾರಾಯಣ ತಮ್ಮ ಬಗ್ಗೆ ಆರೋಪ ಮಾಡಿದಾಗ ತಿರುಗೇಟು ನೀಡಲು ಮುಂದಾದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಂತಗೊಳಿಸಿ ಕೂರಿಸಿದರು.

ಕುಮಾರಸ್ವಾಮಿ ತಮ್ಮ ಮಾತಿನ ಆರಂಭದಲ್ಲಿ, ‘ಸಚಿವರೊಬ್ಬರು ರಾಮನಗರಕ್ಕೆ ಬಂದು ದಮ್ಮಿದೆಯೇ, ತಾಕತ್ತಿದೆಯಾ? ಯಾವನವನು ಕುಮಾರ. ವಿಧಾನಸೌಧಕ್ಕೆ ಬರುವುದಿಲ್ಲ ಎಂದು ಟೀಕಿಸಿದ್ದರು. ಅದಕ್ಕಾಗಿಯೇ ದಾಖಲೆ ಸಮೇತ ಬಂದಿದ್ದೇನೆ’ ಎಂದು ಕುಟುಕಿದರು.

ಇದಕ್ಕೆ ಉತ್ತರ ನೀಡುವಾಗ ತಿರುಗೇಟು ನೀಡಿದ ಅಶ್ವತ್ಥನಾರಾಯಣ, ‘ನಾನು ಯಾವುದೇ ರಾಜಕೀಯ ವಂಶದಿಂದ ಬಂದವನಲ್ಲ. ರಾಜಕಾರಣ ಮಾಡಲೆಂದು ಬಂದವನು. ಆದರೆ, ವಾಮಮಾರ್ಗದಿಂದ ಬಂದವನಲ್ಲ. ಯಾರ ಮನೆ ಹಾಳು ಮಾಡಿಲ್ಲ.
ದ್ವೇಷ ರಾಜಕಾರಣ ಮಾಡಬೇಡಿ. ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಡಿ. ಕೆಲವು ದಿನಗಳಿಂದ ಟೀಸರ್‌, ಟ್ರೈಲರ್ ಬಿಡ್ತೇನೆ ಎಂದು ಈಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪದಲ್ಲಿ ಏನೂ ಇಲ್ಲ’ ಎಂದರು.

‘ಜನ ಪ್ರತಿನಿಧಿಯಾಗಿ ನಾವು ರಾಜಕೀಯವಾಗಿ ಎಲ್ಲ ಮಾತನಾಡಬಾರದಾ? ನಾವೇನು ಜನಪ್ರತಿನಿಧಿಗಳಲ್ವಾ? ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಬಂದಿದ್ದೇನೆ. ತನಿಖೆ ಮಾಡಿಸಿ, ಇಲಾಖೆಯಲ್ಲಿ ಒಂದೇ ಒಂದು ಕಡತ ಉಳಿಸಿಲ್ಲ’ ಎಂದು ಅವರು ಹೇಳಿದರು.

‘ನಾನು ದ್ವೇಷಕ್ಕಾಗಿ ವಿಷಯ ಪ್ರಸ್ತಾಪಿಸಿಲ್ಲ. ರಾಜ ವಂಶದಿಂದಲೂ ಬಂದಿಲ್ಲ. ಒಂದು ಉತ್ತಮ ಶಿಕ್ಷಣ ಸಂಸ್ಥೆ ರಿಯಲ್ ಎಸ್ಟೇಟ್‌ ಉದ್ಯಮಿಗಳ ಪಾಲಾಗಬಾರದು ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತಬೇಕು ಎಂಬುದಷ್ಟೇ ನನ್ನ ಕಳಕಳಿ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

‘ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇದೆಯಾ. ನಾನು ಯಾರ ಮನೆಯನ್ನು ಹಾಳು ಮಾಡಿದ್ದೇನೆ’ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಸಿಟ್ಟಿಗೆದ್ದ ಅಶ್ವತ್ಥನಾರಾಯಣ ಅವರು, ‘ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ’ ಎಂದು ಗುಡುಗಿದರು. ಆಗ ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಗದ್ದಲ ಸೃಷ್ಟಿಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು