ಭಾನುವಾರ, ಜೂನ್ 26, 2022
21 °C
ಎಚ್‌.ಡಿ.ದೇವೇಗೌಡ– ಕೆಸಿಆರ್‌ ಸುದೀರ್ಘ ಮೂರು ಗಂಟೆ ಚರ್ಚೆ * ಬಿಜೆಪಿ–ಕಾಂಗ್ರೆಸ್‌ ಹೊರತಾದ ರಾಜಕೀಯ ವೇದಿಕೆಗೆ ಸಿದ್ಧತೆ

ದಸರಾ ವೇಳೆ ಪರ್ಯಾಯ ರಾಜಕೀಯ ವೇದಿಕೆ: ತೃತೀಯ ರಂಗಕ್ಕೆ ಗೌಡರ ಮಾರ್ಗದರ್ಶನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಂಬರುವ ದಸರಾ ಹಬ್ಬದ ವೇಳೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಹೊಸ ರಾಜಕೀಯ ವೇದಿಕೆ ಸ್ಥಾಪನೆ ಮಾಡುವ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಸೂಚನೆ ನೀಡಿದ್ದಾರೆ.

ಈ ಸಂಬಂಧ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಗುರುವಾರ ಭೇಟಿ ಮಾಡಿ  ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಹಾಜರಿದ್ದರು. ರಾಷ್ಟ್ರಪತಿ ಚುನಾವಣೆ, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆ.ಚಂದ್ರಶೇಖರ ರಾವ್‌, ‘ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವುದು ನಿಶ್ಚಿತ. ಇದನ್ನು ತಡೆಯಲು ಯಾವುದೇ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಇನ್ನು ಎರಡು– ಮೂರು ತಿಂಗಳಲ್ಲಿ ಈ ಸಂಬಂಧ ಮಹತ್ವದ ಸುದ್ದಿ ನಿಮಗೆ ಸಿಗುತ್ತದೆ’ ಎಂದು ಹೇಳಿದರು.

‘ನಾವು ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಸೇರಿ ಸರ್ಕಾರ ಮಾಡುತ್ತೇವೆಯೋ ಇಲ್ಲವೋ ಎಂಬ ಪ್ರಶ್ನೆ ಬೇರೆ. ನಾವು(ಪರ್ಯಾಯ ಶಕ್ತಿ) ಒಗ್ಗೂಡಿ ದೇಶದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುವುದು ನಿಶ್ಚಿತ’ ಎಂದು ಅವರು ಹೇಳಿದರು.

‘2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಗಳೂರಿಗೆ ಬಂದಿದ್ದೆ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ನಾನು ಹೇಳಿದ್ದು ನಿಜವಾಯಿತು, ಅವರು ಮುಖ್ಯಮಂತ್ರಿ ಆದರು. ಈಗಲೂ ಹೇಳುತ್ತೇನೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಬದಲಾವಣೆ ಆಗಲಿದೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಈ ಪಕ್ಷಗಳ ಮುಖಂಡರ ಜತೆ ಕೆಸಿಆರ್‌ ಚರ್ಚೆ ಮಾಡುತ್ತಿದ್ದಾರೆ. ಹಿಂದಿನ ಪ್ರಯತ್ನಕ್ಕಿಂತ ಹೊಸ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಸಂಪತ್ತು ಕಡು ಬಡವರಿಗೆ ತಲುಪಬೇಕಿದೆ. ಈ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದರು.

ತೃತೀಯ ರಂಗಕ್ಕೆ ಗೌಡರ ಮಾರ್ಗದರ್ಶನ?
ಬಿಜೆಪಿ– ಕಾಂಗ್ರೆಸ್‌ಗೆ ಪರ್ಯಾಯವಾಗಿ (ತೃತೀಯ ರಂಗ) ಹುಟ್ಟು ಹಾಕುವ ರಾಜಕೀಯ ವೇದಿಕೆಯಲ್ಲಿ ಎಎಪಿ, ಸಮಾಜವಾದಿ ಪಕ್ಷ ಮುಂತಾದ ಪ್ರಮುಖ ಪಕ್ಷಗಳು ಇರಲಿವೆ. ಎಚ್‌.ಡಿ.ದೇವೇಗೌಡ ಅವರು ಇದಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

‘ಪರ್ಯಾಯ ವೇದಿಕೆಯ ಬಗ್ಗೆ ಇವತ್ತು ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು, ಇನ್ನಷ್ಟೇ ಸ್ಪಷ್ಟ ರೂಪ ಪಡೆದುಕೊಳ್ಳಬೇಕಾಗಿದೆ. ಇನ್ನೊಮ್ಮೆ ದೇವೇಗೌಡರನ್ನು ಭೇಟಿ ಮಾಡುತ್ತೇನೆ’ ಎಂದು ಕೆಸಿಆರ್‌ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು