ಚನ್ನಪಟ್ಟಣ (ರಾಮನಗರ): ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬಿಜೆಪಿ ನಾಯಕರು ಹಾಗೂ ರಾಜ್ಯ ರಾಜಕಾರಣದ ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಆಡಿಯೊದಲ್ಲಿ ಇರುವ ಧ್ವನಿ ನನ್ನದ್ದಲ್ಲ ಎಂದು ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಏನಿದೆ ಆಡಿಯೊದಲ್ಲಿ: ಯೋಗೇಶ್ವರ್‌ರ ಧ್ವನಿಯಲ್ಲಿ ವ್ಯಕ್ತಿಯೊಬ್ಬರು ಹಲವು ನಿಮಿಷಗಳ ಕಾಲ ಆಸಕ್ತರ ಗುಂಪಿನ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ಕುರಿತು ಪ್ರಸ್ತಾಪಿಸುವ ಆ ವ್ಯಕ್ತಿ ‘ ಹೊಂದಾಣಿಕೆ ರಾಜಕಾರಣ ಬೇಡ, ಅದು ತಾಯಿಗೆ ದ್ರೋಹ ಮಾಡಿದ ಹಾಗೇ ಎಂದು ಅಮಿತ್ ಶಾ ಈಗಾಗಲೇ ನಮ್ಮನ್ನು ಎಚ್ಚರಿಸಿದ್ದಾರೆ. ಅವರದ್ದು ಒಂಥರ ರೌಡಿಸಂ. ಆ ವ್ಯಕ್ತಿ ಮೇಲ್ನೋಟಕ್ಕೆ ಇರುವುದೇ ಬೇರೆ. ಮಾತನಾಡುವುದೇ ಬೇರೆ. ಬೇರೆ ಯಾವ ಪಕ್ಷದವರ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕಂಡುಬಂದರೆ ಅವರು ಬಿಡುವುದಿಲ್ಲ’ ಎಂದು ಹೇಳುತ್ತಾರೆ.
‘ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನಾಭಿಪ್ರಾಯದಿಂದ ಬಿಜೆಪಿ ಸರ್ಕಾರ ಬರುವುದಿಲ್ಲ. ಆದರೆ ನಾವು ಸರ್ಕಾರ ಮಾಡುತ್ತೇವೆ. ಮಾವಿನ ಹಣ್ಣು ಮರದಲ್ಲಿ ಹಣ್ಣಾಗುವುದಕ್ಕೂ, ರಾಸಾಯನಿಕ ಹಾಕಿ ಹಣ್ಣು ಮಾಡುವುದಕ್ಕೂ ವ್ಯತ್ಯಾಸ ಇದೆ ಎನ್ನುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಆಪರೇಷನ್ ಕಮಲ ಮಾಡಿದರೆ ನಮಗೆ ಕೆಟ್ಟ ಹೆಸರು. ಹೀಗಾಗಿ ಈ ಬಾರಿ ಮುಂಚಿತವಾಗಿಯೇ ಮಾಡುತ್ತೇವೆ’ ಎನ್ನುತ್ತಾರೆ.
‘ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ 12ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಹೊಂದಾಣಿಕೆ ರಾಜಕಾರಣದ ಕಾರಣ ಸಾ.ರಾ.ಮಹೇಶ್ ಗೆದ್ದಿದ್ದರು. ಈ ಬಾರಿ ಸೋಲುತ್ತಾರೆ. ಹಾಗೆಯೇ ಉತ್ತರ ಕರ್ನಾಟಕ ಭಾಗದಲ್ಲಿ 3 ಸ್ಥಾನ ಸಹ ಹೋಗಲಿದೆ’ ಎಂದು ಆ ವ್ಯಕ್ತಿ ಹೇಳಿದ್ದಾರೆ.
‘ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ ಅವರಿಗೆ ಮತ್ತೆ ಪಟ್ಟ ಕಟ್ಟಲು ಅಲ್ಲಿನ ಕೆಲ ನಾಯಕರಿಗೆ ಇಷ್ಟವಿಲ್ಲ. ಶಿವಕುಮಾರ್ ಅವರಿಗೆ ನೇರ ಸ್ಪರ್ಧಿ. ಅಷ್ಟು ಸುಲಭವಾಗಿ ಅವರು ಬಿಟ್ಟುಕೊಡುವುದಿಲ್ಲ. ಈ ಸಂಕ್ರಾಂತಿ ಆದ ಬಳಿಕ ಮೈಸೂರು ಭಾಗದ ದೊಡ್ಡ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಗೆ ಬರುತ್ತಾರೆ. ಕೋಲಾರ ಭಾಗದಲ್ಲಿ ಹಲವು ಬಾರಿ ಕೇಂದ್ರ ಸಚಿವರಾಗಿದ್ದ ದೊಡ್ಡ ನಾಯಕರೊಬ್ಬರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಆದರೆ ನಮ್ಮವರೇ ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲಬಹುದು. ಗೆದ್ದರೆ ಅವರೇ ಮುಖ್ಯಮಂತ್ರಿ ಆಗಬೇಕು. ಏಕೆಂದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರೇ ಪ್ರಬಲರು’ ಎನ್ನುತ್ತಾರೆ.
‘ ರಾಮನಗರ ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಜೆಡಿಎಸ್ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದರೂ ಗೆಲ್ಲಬಹುದು. ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಲು ಒಪ್ಪಿಕೊಂಡಿದ್ದೇನೆ. ಅದೇ ರೀತಿ ಅಶೋಕ್ ಕನಕಪುರದಲ್ಲಿ ಶಿವಕುಮಾರ್ ವಿರುದ್ಧ ಮತ್ತು ರಾಮನಗರದಲ್ಲಿ ಅಶ್ವತ್ಥನಾರಾಯಣ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಲಿ. ಆಗ ಪಕ್ಷ ನಮ್ಮ ರಕ್ಷಣೆಗೆ ಬಂದೇ ಬರುತ್ತದೆ. ನಾನು ಹಿಂದಿನ ಚುನಾವಣೆಯಲ್ಲಿ ಸೋತಿದ್ದರೂ ಪಕ್ಷ ನನ್ನ ರಕ್ಷಣೆಗೆ ಬಂದಿಲ್ಲವ?. ಅದನ್ನೇ ನಮ್ಮ ಹೈಕಮಾಂಡ್ ಮುಂದೆ ಹೇಳುತ್ತೇನೆ’ ಎಂದು ಆ ವ್ಯಕ್ತಿ ಹೇಳುತ್ತಾರೆ.
ಆಡಿಯೊ ನನ್ನದಲ್ಲ: ಯೋಗೇಶ್ವರ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊನಲ್ಲಿ ಇರುವ ಧ್ವನಿ ನನ್ನದ್ದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ ನನ್ನ ವಿರುದ್ಧ ಸಾಕಷ್ಟು ಮಂದಿ ಷಡ್ಯಂತ್ರ ನಡೆಸಿದ್ದು, ನಕಲಿ ಆಡಿಯೊ ಬಿಟ್ಟಿದ್ದಾರೆ. ನನಗೆ ಈ ವಿಷಯಗಳೇ ಗೊತ್ತಿಲ್ಲ. ನಾನು ಸ್ವಂತ ಬಲದ ಮೇಲೆ ಪ್ರಬಲರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನನಗೆ ಆ ವಿಶ್ವಾಸ ಇದೆ. ಇದರಿಂದ ನನ್ನ ರಾಜಕೀಯ ಜೀವನಕ್ಕೆ ಯಾವುದೇ ತೊಂದರೆ ಆಗದು’ ಎಂದು ಹೇಳಿದ್ದಾರೆ.
‘ ಯಾರು ಏನೇ ಹೇಳಿದರೂ ಅಂತಿಮವಾಗಿ ನಮ್ಮ ಮತದಾರರು ತೀರ್ಮಾನಿಸುತ್ತಾರೆ. ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗೆ ಸಿದ್ದನಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.