ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಕೈ ಬಲಪಡಿಸಿ- ಬಿಜೆಪಿ ನಾಯಕರಿಗೆ ಅಮಿತ್ ಶಾ ಗಡುವು

Last Updated 11 ಫೆಬ್ರುವರಿ 2023, 20:36 IST
ಅಕ್ಷರ ಗಾತ್ರ

ಮಂಗಳೂರು: ‘ಮುಂದಿನ 30 ದಿನಗಳ ಒಳಗೆ ರಾಜ್ಯದ ಹಳ್ಳಿ ಹಳ್ಳಿಗಳನ್ನು ತಲುಪಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ, ಚುನಾವಣೆಗೆ ಅಗತ್ಯ ವೇದಿಕೆ ಸಿದ್ಧಪಡಿಸಬೇಕು’ ಎಂದು ಬಿಜೆಪಿ ರಾಜ್ಯ ಮುಖಂಡರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಚ್ಚರಿಕೆ ರೂಪದ ಸೂಚನೆ ನೀಡಿದರು.

‘ಮುಂದಿನ ತಿಂಗಳು ನಾನೇ ರಾಜ್ಯಕ್ಕೆ ಬಂದು ಪುನಃ ಪರಿಶೀಲನೆ ನಡೆಸುತ್ತೇನೆ’ ಎಂದೂ ಹೇಳಿದರು.

ಶನಿವಾರ ಪುತ್ತೂರಿನಲ್ಲಿ ನಡೆದ ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ಸಂಸ್ಕರಣೆ ಸಹಕಾರಿ ಸಂಸ್ಥೆ ‘ಕ್ಯಾಂಪ್ಕೊ’ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿಯೂ ರಾಜಕೀಯ ಭಾಷಣ ಮಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಿ, ಮೋದಿ ಅವರ ಕೈ ಬಲಪಡಿಸಿ’ ಎಂದು ಕೋರುವ ಮೂಲಕ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ‘ಬ್ರಾಹ್ಮಣ ಮುಖ್ಯಮಂತ್ರಿ’ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಸಂದೇಶ ರವಾನಿಸಲು ಯತ್ನಿಸಿದರು.

‘ಟಿಪ್ಪುವನ್ನು ಒಪ್ಪುವ ಕಾಂಗ್ರೆಸ್- ಜೆಡಿಎಸ್ ಬೇಕಾ, ರಾಣಿ ಅಬ್ಬಕ್ಕ ಅವರನ್ನು ಆರಾಧಿಸುವ ಬಿಜೆಪಿ ಬೇಕಾ’ ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಪುತ್ತೂರು ಸಮೀಪದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ‘ಅಮರಗಿರಿ' ಭಾರತ ಮಾತೆ ಮಂದಿರವನ್ನು ಲೋಕಾರ್ಪಣೆ ಮಾಡಿದ ಅವರು, ಅಲ್ಲಿಯ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬೆಳ್ಳಿ ಗದೆಯನ್ನು ಸಮರ್ಪಿಸಿದರು.

ಸಂಜೆ ಮಂಗಳೂರಿಗೆ ಬಂದು, ವಿಮಾನ ನಿಲ್ದಾಣದಿಂದ ಅರ್ಧ ಕಿಮೀ ರೋಡ್‌ಶೋ ನಡೆಸಿದರು. ನಂತರ ಇಲ್ಲಿನ ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜೀಸ್‌ ಸಭಾಂಗಣದಲ್ಲಿ ಶಿವಮೊಗ್ಗ ಮತ್ತು ಮಂಗಳೂರು ವಿಭಾಗಗಳ ಪಕ್ಷದ ಮುಖಂಡರ ಜೊತೆ ಒಂದೂವರೆ ಗಂಟೆ ಸಭೆ ನಡೆಸಿದರು. ಆದರೆ, ಇಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚಕಾರ ಎತ್ತಲಿಲ್ಲ.

‘ಈ ಭಾಗದ ಆರು ಜಿಲ್ಲೆಗಳ 33 ವಿಧಾನಸಭಾ ಕ್ಷೇತ್ರಗಳಲ್ಲಿ 29 ಬಿಜೆಪಿ ಶಾಸಕರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಇಷ್ಟಕ್ಕೇ ಸಂತುಷ್ಟರಾಗದೆ, ಉಳಿದಿರುವ ನಾಲ್ಕು ಕ್ಷೇತ್ರಗಳನ್ನೂ ಗೆಲ್ಲಬೇಕು’ ಎಂದು ಕಟ್ಟಪ್ಪಣೆ ಮಾಡಿದರು.

ಮುಂಬರುವ ಚುನಾವಣೆಯಲ್ಲಿ ಟಿಕೆಟ್‌ ನೀಡಿಕೆಯ ಬಗ್ಗೆಯಾಗಲಿ, ಹಾಲಿ ಶಾಸಕರ ಕಾರ್ಯವೈಖರಿಯ ಬಗ್ಗೆಯಾಗಲಿ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದ ಅವರು, ‘ಎಲ್ಲರ ಬಗ್ಗೆಯೂ ನಾವು ಮಾಹಿತಿ ಸಂಗ್ರಹಿಸಿದ್ದೇವೆ. ವರದಿ ನಮ್ಮ ಕೈಯಲ್ಲಿದೆ. ಶಾಸಕರ ಕಾರ್ಯವೈಖರಿ, ಆಯಾ ಪ್ರದೇಶದ ರಾಜಕೀಯ ಪರಿಸ್ಥಿತಿ, ಜಾತಿ ಲೆಕ್ಕಾಚಾರ ಎಲ್ಲವನ್ನೂ ಅಳೆದೂ ತೂಗಿ ಟಿಕೆಟ್‌ ಹಂಚಿಕೆ ಮಾಡುತ್ತೇವೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.

‘ಟಿಕೆಟ್‌ ಘೋಷಣೆಯಾಗುವವರೆಗಿನ ಪ್ರಚಾರ ಹಾಗೂ ‍ಪಕ್ಷದ ಚಟುವಟಿಕೆಗಳಿಗೆ ಹಾಲಿ ಶಾಸಕರೇ ಹಣ ಹೊಂದಿಸಿಕೊಳ್ಳಬೇಕು. ಟಿಕೆಟ್‌ ಘೋಷಣೆಯ ನಂತರದ ಖರ್ಚುವೆಚ್ಚಗಳನ್ನು ಅಭ್ಯರ್ಥಿ ನೋಡಿಕೊಳ್ಳಬೇಕಾಗುತ್ತದೆ ಎಂದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮೊದಲಾದವರು ಇದ್ದರು.

---

ನಾಯಕರ ಹೇಳಿಕೆಗಳು

ರಾಜ್ಯದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಬೇಕು. ಅದಕ್ಕಾಗಿ ಮುಂದಿನ 30 ದಿನಗಳಲ್ಲಿ ನಾಯಕರು ಏನೇನು ಮಾಡಬೇಕು ಎಂಬುದನ್ನು ಅಮಿತ್‌ ಶಾ ಸೂಚಿಸಿದ್ದಾರೆ

– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ

***

33 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ, ಮುಂದಿನ ದಿನಗಳಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಇದು ಸಾಮಾನ್ಯ ಪ್ರಕ್ರಿಯೆ. 2018 ರಲ್ಲೂ ಅವರು ಇಂಥ ಸಲಹೆಗಳನ್ನು ನೀಡಿದ್ದರು

ಪ್ರತಾಪಸಿಂಹ, ಸಂಸದ

***

ಕೇಂದ್ರದವರು ವಿಧಾನಸಭಾ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿರುವುದು ಸಂತೋಷ ತಂದಿದೆ, 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ಮೂಡಿದೆ. ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ.

– ಕೆ.ಎಸ್‌. ಈಶ್ವರಪ್ಪ, ಬಿಜೆಪಿ ಮುಖಂಡ

***

ಎರಡು ವಿಭಾಗಗಳ 33 ಕ್ಷೇತ್ರಗಳನ್ನು ಗೆಲ್ಲುವ ಸೂತ್ರಗಳೇನು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ವಿ. ಸುನಿಲ್‌ ಕುಮಾರ್‌, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT