ಭಾನುವಾರ, ಮೇ 29, 2022
23 °C

ಪ್ರಶ್ನೆಪತ್ರಿಕೆ ಸೋರಿಕೆ: ದೈಹಿಕ ಶಿಕ್ಷಣ ಶಿಕ್ಷಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವೆಂಕಟೇಶ್, ಕೊರಟಗೆರೆ ತಾಲ್ಲೂಕಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ದೈಹಿಕ  ಶಿಕ್ಷಣ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪ ನೀಡಿದ್ದ ಮಾಹಿತಿ ಆಧರಿಸಿ ವೆಂಕಟೇಶ್‌ನನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಸರ್ಕಾರಿ ನೌಕರಿ ಪಡೆಯುವ ಕನಸು ಕಾಣುತ್ತಿದ್ದ ವೆಂಕಟೇಶ್, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಫ್‌ಡಿಎ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ದೊಡ್ಡಪ್ಪನ ಮಗನೇ ಆಗಿರುವ ರಾಚಪ್ಪ, ಪರೀಕ್ಷೆಗೂ ಕೆಲದಿನಗಳ ಮುನ್ನ ವೆಂಕಟೇಶ್‌ಗೆ ಕರೆ ಮಾಡಿದ್ದ. ‘ನನಗೆ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿಗಲಿದೆ. ಅದನ್ನು ನಿನಗೆ ಕೊಡುತ್ತೇನೆ. ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ, ಪ್ರತಿಯೊಬ್ಬರಿಂದ ತಲಾ ₹10 ಲಕ್ಷದಿಂದ ₹ 20 ಲಕ್ಷ ಸಂಗ್ರಹಿಸು’ ಎಂದು ಹೇಳಿದ್ದ.’

‘ಆತನ ಮಾತು ನಂಬಿದ್ದ ವೆಂಕಟೇಶ್, ಸ್ಥಳೀಯವಾಗಿ ಕೆಲ ಅಭ್ಯರ್ಥಿ ಗಳನ್ನು ಸೇರಿಸಿ ಪ್ರಶ್ನೆಪತ್ರಿಕೆಗಾಗಿ ಕಾಯು ತ್ತಿದ್ದ. ಪರೀಕ್ಷೆ ಮುನ್ನಾದಿನವೇ ಸೋರಿಕೆ ಪ್ರಕರಣದ ಹಲವು ಆರೋಪಿಗಳು ಸಿಕ್ಕಿಬಿದ್ದರು. ಅದು ತಿಳಿಯುತ್ತಿದ್ದಂತೆ ವೆಂಕಟೇಶ್, ತಲೆಮರೆಸಿಕೊಂಡಿದ್ದ. ಗುರುವಾರ ನಮ್ಮ ಕೈಗೆ ಸಿಕ್ಕಿಬಿದ್ದ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

‘ಪರೀಕ್ಷೆಗೂ ಮುನ್ನಾದಿನ ಆರೋಪಿ ವೆಂಕಟೇಶ್ ಕೈಗೆ ಪ್ರಶ್ನೆಪತ್ರಿಕೆ ಸಿಕ್ಕಿದ್ದ ಮಾಹಿತಿ ಇದೆ. ಬೆಳಗಾವಿ ಜಿಲ್ಲೆಯ ಹಲವು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿದ್ದಾನೆ. ಎಲ್ಲರೂ ಪರೀಕ್ಷೆ ಬರೆಯಲು ಸಿದ್ಧರಾಗಿದ್ದರೆಂಬ ಮಾಹಿತಿಯೂ ಇದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು