ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತಾಂತರ ತಡೆಗೆ ಕಾಯ್ದೆ ತರಲು ಚಿಂತನೆ: ಆರಗ ಜ್ಞಾನೇಂದ್ರ

Last Updated 21 ಸೆಪ್ಟೆಂಬರ್ 2021, 20:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಲವಂತದ ಹಾಗೂ ಆಮಿಷವೊಡ್ಡಿ ಮತಾಂತರ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಮತಾಂತರ ನಿಷೇಧಕ್ಕೆ ಕಾಯ್ದೆ ತರಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ’ ಎಂದರು.

‘ಜನರ ಮುಗ್ಧತೆ ಅಥವಾ ಇನ್ನಿತರ ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ಯಾವುದೇ ಸಂಘಟನೆ ಅಥವಾಸಂಸ್ಥೆಗಳು ಮತಾಂತರ ಮಾಡುವುದರಿಂದ, ಸಮಾಜದಲ್ಲಿ ಶಾಂತಿ ಕದಡುವ ಸಂಭವವೂ ಇದೆ’ ಎಂದರು. ‘ಆಮಿಷ ಒಡ್ಡಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಯಲ್ಲಿ ಒಂದು ವ್ಯವಸ್ಥಿತ ಜಾಲವೇ ಇದ್ದು ಅದನ್ನು ಯಾವರೀತಿ ತಡೆಗಟ್ಟಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕಾನೂನನ್ನು ತರಲಾಗುವುದು’ ಎಂದು ಸಚಿವರು ತಿಳಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮತಾಂತರದ ಪಿಡುಗು ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ವ್ಯಾಪಿಸಿದೆ. ಬೇರೆ ಬೇರೆ ರಾಜ್ಯಗಳು ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆಗಳನ್ನು ತಂದಿವೆ. ನಮ್ಮಲ್ಲೂ ಅಂತಹ ಕಾಯ್ದೆಗಳನ್ನು ಜಾರಿಗೆ ತರಬೇಕು’ ಎಂದು ಸಲಹೆ ನೀಡಿದರು.

ಗೂಳಿಹಟ್ಟಿ ಶೇಖರ್‌, ‘ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಮಂದಿ ಮತಾಂತರ ಆಗಿದ್ದಾರೆ. ನನ್ನ ತಾಯಿ ಸಹ ಮತಾಂತರಗೊಂಡಿದ್ದಾರೆ. ಕುಂಕುಮ ಇಡಬಾರದು ಹಾಗೂ ದೇವರ ಫೋಟೋ ಇಡಬಾರದು ಎಂದು ಅವರ ಬ್ರೈನ್‌ ವಾಶ್‌ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿವಿಮಾತು ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಇಡೀ ಕುಟುಂಬ ಮುಜುಗರ ಅನುಭವಿಸುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮಾತ್ರವಲ್ಲದೆ ಮುಸ್ಲಿಮರನ್ನು ಸಹ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದಾಗಿ ಚರ್ಚ್‌ನವರು ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯ ಕೆ.ಜಿ.ಬೋಪಯ್ಯ, ‘ರಾಜ್ಯದಲ್ಲಿ ಮತಾಂತರ ಪಿಡುಗು ವ್ಯಾಪಕವಾಗಿದೆ. ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಕೆ.ಜೆ.ಜಾರ್ಜ್, ‘ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಚರ್ಚ್‌ನವರು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಯಾವ ಚರ್ಚ್‌ನವರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಆಗ್ರಹಿಸಿದರು.

ಜೆಡಿಎಸ್‌ನ ದೇವಾನಂದ ಚವ್ಹಾಣ್‌, ‘ವಿಜಯಪುರ ಜಿಲ್ಲೆಯ ಬಂಜಾರ ಕಾಲೊನಿಗಳಲ್ಲಿ ಚರ್ಚ್‌ಗಳನ್ನು ನಿರ್ಮಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

220 ಸಲ ಸ್ಯಾಟಲೈಟ್‌ ಫೋನ್‌ ಬಳಕೆ ಪತ್ತೆ
‘ರಾಜ್ಯದಲ್ಲಿ 2020ರಲ್ಲಿ 256 ಸಲ ಹಾಗೂ 2021ರಲ್ಲಿ ಈವರೆಗೆ 220 ಸಲ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವುದು ಪತ್ತೆಯಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘2011ರ ಮುಂಬೈ ದಾಳಿ ನಡೆದ ಬಳಿಕ ಭಾರತದ ಒಳನಾಡಿನಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿಷೇಧ ವಿಧಿಸಿ ನೌಕಾಯಾನದ ಡಿಜಿಪಿ ಅವರು ಅದೇ ವರ್ಷ ಆದೇಶ ಹೊರಡಿಸಿದ್ದಾರೆ. ಆದರೂ, ಕೆಲವರು ಸ್ಯಾಟಲೈಟ್‌ ಫೋನ್‌ ಬಳಕೆ ಮಾಡುತ್ತಿದ್ದಾರೆ. ದೇಶದ ಭದ್ರತೆಯ ವಿಚಾರವೂ ಇದರಲ್ಲಿ ಅಡಗಿದೆ. ಅಂತರರಾಷ್ಟ್ರೀಯ ಕರೆಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಮಾಹಿತಿಯನ್ನು ‘ರಾ’ ಜತೆಗೆ ಹಂಚಿಕೊಳ್ಳಲಾಗಿದೆ’ ಎಂದರು. ರಾಜ್ಯದ ಕರಾವಳಿ ಹಾಗೂ ಇನ್ನಿತರ ಅಕ್ರಮವಾಗಿ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ‘ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT