ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ‘ಅಫಿಶಿಯಲ್‌ ಕೆಟಗರಿ’ಯಡಿ ನೇಮಕ: ಕೆಪಿಎಸ್‌ಸಿ ಅಧ್ಯಕ್ಷ ಅನರ್ಹ?

Last Updated 11 ಆಗಸ್ಟ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಎಸ್‌ ಸೇರಿದಂತೆ ರಾಜ್ಯ ಸರ್ಕಾರದ ನಾನಾ ಹುದ್ದೆಗಳಿಗೆ ನಡೆಯುವ ನೇಮಕಾತಿ ವೇಳೆ ಭ್ರಷ್ಟಾಚಾರ, ಅಕ್ರಮ, ಸ್ವಜನಪಕ್ಷಪಾತ ಆರೋಪಗಳಿಂದ ಸದಾ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಹಾಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರ ನೇಮಕವೇ ‘ಅಕ್ರಮ’ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರು ಬಿ.ಎಸ್‌.ಯಡಿಯೂರಪ್ಪ ನೇತೃತೃದ ಸರ್ಕಾರದ ಶಿಫಾರಸಿನ ಅನ್ವಯ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಸಂವಿಧಾನದ 316ನೇ ವಿಧಿಯ ಸೆಕ್ಷನ್‌ 1ರ ಪ್ರಕಾರ 'ಅಫಿಶಿಯಲ್‌ ಕೆಟಗರಿ'ಯಲ್ಲಿ (ಅಧಿಕಾರಿ ವರ್ಗ) ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಿ 2019ರ ಆಗಸ್ಟ್‌ 31ರಂದು ಅಧಿಸೂಚನೆ ಹೊರಡಿಸಿದ್ದರು. ಆ ಬಳಿಕ, ಮತ್ತೆ ಸರ್ಕಾರದ ಶಿಫಾರಸಿನಂತೆ ಸಂವಿಧಾನದ ಅದೇ ವಿಧಿಯ ಪ್ರಕಾರ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಿಸಿ 2021ರ ಏಪ್ರಿಲ್‌ 3ರಂದು ಅಧಿಸೂಚನೆ ಹೊರಡಿಸಿದ್ದರು.

‘ಆದರೆ, ಸಂವಿಧಾನದ 316ನೇ ವಿಧಿಯ ಸೆಕ್ಷನ್‌ 1ರಲ್ಲಿರುವ ಅಂಶಗಳ ಪ್ರಕಾರ ಶಿವಶಂಕರಪ್ಪ ಅವರಿಗೆ ಕೆಪಿಎಸ್‌ಸಿ ಸದಸ್ಯರಾಗುವ ಅರ್ಹತೆಯೇ ಇಲ್ಲ. ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಅವರನ್ನು ಕೆಪಿಎಸ್‌ಸಿ ಸದಸ್ಯ, ಬಳಿಕ ಅಧ್ಯಕ್ಷರಾಗಿ ನೇಮಿಸುವಂತೆ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು' ಎಂಬ ಆರೋಪ ಕೇಳಿಬಂದಿದೆ.

ಕೆಪಿಎಸ್‌ಸಿಯ ಒಟ್ಟು ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಠ 10 ವರ್ಷ ಕರ್ತವ್ಯ ಸಲ್ಲಿಸಿದವರು (ಅಫಿಶಿಯಲ್‌ ಕೆಟಗರಿ) ಇರಬೇಕು ಎಂದು ಸಂವಿಧಾನದ 316ನೇ ವಿಧಿಯ ಸೆಕ್ಷನ್‌ 1 ಹೇಳುತ್ತದೆ. ಈ ಕೆಟಗರಿಯಲ್ಲಿ ನೇಮಕಗೊಂಡಿರುವ ಶಿವಶಂಕರಪ್ಪ, ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರೇ ಆಗಿರಲಿಲ್ಲ ಎಂದು ಗೊತ್ತಾಗಿದೆ.

ಭಾರತೀಯ ರಾಷ್ಟ್ರೀಯ ಸಹಕಾರಿ ಸಂಘ (ನ್ಯಾಷನಲ್‌ ಕೋ–ಆಪರೇಟಿವ್‌ ಯೂನಿಯನ್‌ ಆಫ್‌ ಇಂಡಿಯಾ) ಗುಲ್ಬರ್ಗದಲ್ಲಿ (ಕಲಬುರ್ಗಿ) ಶಿಕ್ಷಣ ಫೀಲ್ಡ್‌ ಪ್ರಾಜೆಕ್ಟ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಅವರು ಕೆಲಸ ಮಾಡಿದ್ದರು. ಕೆಲಸ ನಿರ್ವಹಣೆ ತೃಪ್ತಿಕರವಲ್ಲ ಮತ್ತು ಸಮಯಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಅವರ ಗುತ್ತಿಗೆ ಅವಧಿಯನ್ನು ಮುಂದುವರಿಸದಂತೆ 2010ರ ಮಾರ್ಚ್‌ 18ರಂದು ಸಂಘದ ಮುಖ್ಯ ಕಾರ್ಯನಿರ್ವಾಹಕರು ಕಚೇರಿ ಆದೇಶ ಹೊರಡಿಸಿದ್ದರು. ಅಲ್ಲದೆ, ತಾನು ಕರ್ತವ್ಯದಲ್ಲಿದ್ದ ಅವಧಿಯ ಸೌಲಭ್ಯಗಳ ಸೆಟ್ಲ್‌ಮೆಂಟ್‌ಗಳಿಗಾಗಿ 2015ರ ಡಿ. 21ರಂದು ಶಿವಶಂಕರಪ್ಪ ಬರೆದ ಪತ್ರಕ್ಕೆ 2016ರ ಜೂನ್‌ 1ರಂದು ಉತ್ತರಿಸಿದ್ದ ಸಂಘದ ನಿರ್ದೇಶಕರು (ಪ್ರಾಜೆಕ್ಟ್), ‘ನೀವು ನಿರ್ವಹಿಸಿದ್ದ ಹುದ್ದೆಯ ಅಧಿಕಾರವನ್ನು ಗುಲ್ಬರ್ಗದ ಪ್ರಾಜೆಕ್ಟ್‌ ಅಧಿಕಾರಿಗೆ ತಕ್ಷಣ ನೀಡಿ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಬಳಿಕ ನಿಮಗಿರುವ ಸೌಲಭ್ಯಗಳನ್ನು ನೀಡಲಾಗುವುದು’ ಎಂದಿದ್ದರು. 2018ರ ಏ. 23ರಂದು ನಿರ್ದೇಶಕರು (ಪ್ರಾಜೆಕ್ಟ್‌) ಪತ್ರ ಬರೆದು, ಗ್ರ್ಯಾಚ್ಯುಯಿಟಿ ಮತ್ತು ರಜೆ ನಗದೀಕರಣದ ಹಣ ಪಾವತಿಗೆ ದೆಹಲಿಯ ರಾಜ್ಯ ಕೋ–ಆಪರೇಟಿವ್‌ ಬ್ಯಾಂಕಿನ ಎರಡು ಚೆಕ್‌ಗಳನ್ನು (₹ 63,125 ಮತ್ತು ₹ 46,760) ಕಳುಹಿಸಿದ್ದರು.

‘ಸಹಕಾರಿ ಸಂಘದಲ್ಲಿ ಗುತ್ತಿಗೆ ಆಧಾರದಲ್ಲಿ ಶಿವಶಂಕರಪ್ಪ ಕೆಲಸ ಮಾಡಿದ್ದರೆ, ಸಹಕಾರಿ ಸಂಘದ ಕೆಲಸ ‘ಸರ್ಕಾರಿ ಉದ್ಯೋಗ’ ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ, ಅವರ ಕೆಲಸ ತೃಪ್ತಿಕರ ಅಲ್ಲವೆಂದು ಗುತ್ತಿಗೆ ಅವಧಿಯನ್ನೂ ಮುಂದುವರಿಸಿಲ್ಲ. ಈ ಎಲ್ಲ ಕಾರಣಕ್ಕೆ ಸಂವಿಧಾನದ 316ರ ಸೆಕ್ಷನ್‌ 1ರ ಪ್ರಕಾರ ಅಫಿಶಿಯಲ್‌ ಕೆಟಗರಿಯಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಲು ಅವಕಾಶ ಇಲ್ಲ. ಕೇಂದ್ರ, ರಾಜ್ಯ ಸರ್ಕಾರದಲ್ಲಿ ಕಾಯಂ ನೌಕರ ಅಲ್ಲದ ವ್ಯಕ್ತಿಯನ್ನು ಈ ಕೆಟಗರಿಯಲ್ಲಿ ನೇಮಿಸಿರುವುದು ಕಾನೂನುಬಾಹಿರ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಅಧಿಕಾರಿಯೊಬ್ಬರು ಹೇಳಿದರು.

‘ನೇಮಕಾತಿ ಅಧಿಸೂಚನೆ ತಪ್ಪಾಗಿದೆ’

ಅಪಘಾತವೊಂದರಲ್ಲಿ ಗಾಯಗೊಂಡು ಕಲಬುರ್ಗಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಿ ಅಧಿಸೂಚನೆ ಹೊರಡಿಸಿರುವ ಮಾಹಿತಿ ಬಂದಿತ್ತು. ಅಧಿಕಾರಿಯೇತರ ವರ್ಗದಿಂದ ನೇಮಕಗೊಳ್ಳುವ ಬದಲು, ಅಧಿಕಾರಿ ವರ್ಗದಿಂದ ನೇಮಕಗೊಂಡಿದ್ದೆ. ನನ್ನ ನೇಮಕಾತಿ ಅಧಿಸೂಚನೆಯಲ್ಲಿ ತಪ್ಪಾಗಿದೆ. ಈಗ ಈ ವಿಷಯ ಯಾಕೆ ಮುನ್ನಲೆಗೆ ಬಂದಿದೆಯೆಂದು ಗೊತ್ತಿಲ್ಲ.

-ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‌ಸಿ ಅಧ್ಯಕ್ಷ

***

ಪಿಐಎಲ್‌: ಸಿ.ಎಂಗೆ ಸಿದ್ದರಾಮಯ್ಯ ಪತ್ರ

ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಸಂವಿಧಾನದ 316ನೇ ವಿಧಿಯ ಉಲ್ಲಂಘನೆಯಾಗಿದೆ ಎಂದುಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವ ವಕೀಲ ಶಶಿ ಪಿ. ಗಾಂಧಿ ಎಂಬವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಪಿಎಆರ್‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಶಿವಶಂಕರಪ್ಪ ಸಾಹುಕಾರ್ ಮತ್ತು ಕೆಪಿಎಸ್‌ಸಿಯನ್ನು ಪ್ರತಿವಾದಿಯಾಗಿ ಹೆಸರಿಸಿದ್ದಾರೆ.

ಅಲ್ಲದೆ, ಈ ಆರೋಪದ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT