ಶನಿವಾರ, ಜೂನ್ 25, 2022
25 °C

ಸಿದ್ಧರಾಮಯ್ಯ ದ್ರಾವಿಡರೇ ಆರ್ಯರೇ : ಸ್ಪಷ್ಟನೆಗೆ ಬೊಮ್ಮಾಯಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿರೋಧಪಕ್ಷ ನಾಯಕರಾದ ಸಿದ್ಧರಾಮಯ್ಯ ಅವರು ದ್ರಾವಿಡರೇ ಅಥವಾ ಆರ್ಯರೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

‘ಆರೆಸ್ಸೆಸ್‌ನವರೇನು ಭಾರತೀಯರೇ’ ಎಂದು ಸಿದ್ದರಾಮಯ್ಯ ಅವರು ಶುಕ್ರವಾರ ಪ್ರಶ್ನಿಸಿದ್ದರು. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸಿದ್ದರಾಮಯ್ಯನವರ ಮೂಲ ಯಾವುದೆಂದು ಅವರು ಹೇಳಲಿ’ ಎಂದರು.

‘ನೆಹರೂ ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ನೆಹರೂ ಅವರನ್ನು ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಚೀನಾವು ಭಾರತ ಗಡಿಯನ್ನು ಆಕ್ರಮಿಸಿದಾಗ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ನೆಹರೂ ಅವರು ಗಡಿಭಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಚೀನಾವು ಗಡಿಪ್ರದೇಶ ಆಕ್ರಮಿಸಲು ಬಂದಾಗ ಗಟ್ಟಿಯಾಗಿ ನಿಂತು ಆ ಪ್ರದೇಶವನ್ನು ಉಳಿಸಿಕೊಂಡವರು. ಪಾಕಿಸ್ತಾನದ ಜೊತೆಗೆ ರಾಜಿ ಮಾಡಿಕೊಳ್ಳಲಿಲ್ಲ. ಭಾರತದ ಅಖಂಡತೆ ಹಾಗೂ ಏಕತೆಯನ್ನು ಕಾಪಾಡಿದ್ದಾರೆ’ ಎಂದರು.

ಹಿಜಾಬ್‌–ಆದೇಶ ಪಾಲಿಸಿ: ಮಂಗಳೂರಿನಲ್ಲಿ ಮತ್ತೆ ಎದ್ದಿರುವ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿವಾದವನ್ನು ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಬಗೆಹರಿಸಲಾಗಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದೆ. ಎಲ್ಲರೂ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು. ಪಿಯು ಕಾಲೇಜುಗಳಲ್ಲಿ ಸಿಡಿಸಿ (ಕಾಲೇಜು ಅಭಿವೃದ್ಧಿ ಸಮಿತಿ), ಸಿಡಿಸಿ ಇಲ್ಲದಿರುವ ಕಡೆ ಕಾಲೇಜಿನ ಆಡಳಿತ ಮಂಡಳಿ ಅಥವಾ ಕಾಲೇಜಿನ ಪ್ರಾಂಶುಪಾಲರ ಆದೇಶದಂತೆ ನಡೆಯಬೇಕು. ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ನಿರ್ಣಯಗಳಂತೆ ನಡೆದುಕೊಳ್ಳಬೇಕು. ಸಿಂಡಿಕೇಟ್ ಅವರೂ ಕೂಡ ನ್ಯಾಯಾಲಯದ ಆದೇಶ ಪರಿಪಾಲನೆಗೆ ಒತ್ತು ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಈ ವಿವಾದಗಳಲ್ಲಿ ಸಿಲುಕದೇ ವಿದ್ಯಾರ್ಜನೆಯ ಮೇಲೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ದಾಖಲೆಗಳ ‌ಪರಿಶೀಲನೆ: ಪೀರ್ ಪಾಷಾ ದರ್ಗಾ ಹಾಗೂ ಅನುಭವ ಮಂಟಪದ ಬಗ್ಗೆ ಬರುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಇಂತಹ ವಿಷಯಗಳು ತೀರ್ಮಾನವಾಗುದುದು ಹೇಳಿಕೆಗಳ ಆಧಾರದ ಮೇಲೆ ಅಲ್ಲ. ದಾಖಲೆಗಳ ಆಧಾರದ ಮೇಲೆ ಪರಿಶೀಲನೆ ಮಾಡಬೇಕಾಗುತ್ತದೆ’ ಎಂದರು.

ಇದನ್ನೂ ಓದಿ.. 

‘ಎಂಇಎಸ್ ಪುಂಡಾಟಿಕೆ ಸಹಿಸಲ್ಲ’
‘ಬೆಳಗಾವಿಯಲ್ಲಿ ಎಂಇಎಸ್ ನಡೆಸಿರುವ ಪುಂಡಾಟಿಕೆಯನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

‘ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಂಡರೆ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಹಾಗೂ ಕರ್ನಾಟಕದಲ್ಲಿ ಕನ್ನಡಿಗರಿಗೆ ತೊಂದರೆ ತಂದರೆ ಸರ್ಕಾರ ಉಗ್ರ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಅವರು ಎಚ್ಚರಿಸಿದರು.

‘ಸಿದ್ದರಾಮಯ್ಯ ಈಗ ಮಜಾವಾದಿ’
ಮಂಗಳೂರು:
‘ಸಮಾಜವಾದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಬಳಿಕ ಮಜಾವಾದಿಯಾಗಿ ಪರಿವರ್ತನೆಯಾಗಿದ್ದಾರೆ. ಸಮಾಜವನ್ನು ಒಡೆಯುವ, ಜಾತಿ ಸಂಘರ್ಷ, ಗಲಭೆ ಸೃಷ್ಟಿಸುವ ಮನಸ್ಸುಗಳೊಂದಿಗೆ ಕೈಜೋಡಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನೆಹರೂ ಸಂತಾನ ದೇಶವನ್ನು ನಾಶ ಮಾಡಿದರೆ, ಆರ್‌ಎಸ್‌ಎಸ್ ದೇಶವನ್ನು ಉದ್ಧಾರ ಮಾಡಿದೆ. ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯಗೆ ಮತಿಭ್ರಮಣೆ ಆಗಿದೆ. ಅಧಿಕಾರದ ಹುಚ್ಚಿನಲ್ಲಿ ಇತಿಹಾಸ, ಭಾರತೀಯತೆ ಎಲ್ಲವನ್ನೂ ಮರೆತಿದ್ದಾರೆ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಇಟಲಿ ಮೂಲದ್ದಲ್ಲ’
ಕೊಪ್ಪಳ:
‘ದೇಶಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಇಟಲಿ ಮೂಲದ್ದಲ್ಲ. 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು 5 ವರ್ಷ ಆಡಳಿತದಲ್ಲಿದ್ದ ಸಿದ್ದರಾಮಯ್ಯ ಸಂಘದ ಮೂಲ ತಿಳಿದುಕೊಂಡು ಏನಾದರೂ ಕ್ರಮ ಕೈಗೊಳ್ಳಬಹುದಿತ್ತು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಮೂಲದ ಬಗ್ಗೆ ಮಾತನಾಡುವವರು ಇಷ್ಟು ವರ್ಷ ಏನು ಮಾಡಿದರು? ಆರ್‌ಎಸ್‌ಎಸ್‌ ದೇಶಕ್ಕೆ ಏನು ಸೇವೆ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು