ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ಹೆತ್ತವರ ಕಳೆದುಕೊಂಡ ಬಾಲಕಿಗೆ ಚಿಕ್ಕಮ್ಮನ ಆಸರೆ

‘ದೇವರ ಬಳಿ ಹೋದವರಿಗೆ’ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುವ ಕಂದಮ್ಮ
Last Updated 18 ಜೂನ್ 2021, 19:31 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ನಿಂದಾಗಿ ನಾಲ್ಕು ದಿನಗಳ ಅಂತರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಐದು ವರ್ಷದ ವರ್ಷಾ ಎಂಬ ಬಾಲಕಿಯ ಕಥೆ ಇದು.

ಚಿಕ್ಕಮ್ಮ (ಅಮ್ಮನ ತಂಗಿ) ಹಾಗೂ ಚಿಕ್ಕಪ್ಪನೇ ಈಗ ಆಕೆಗೆ ತಾಯಿ–ತಂದೆ. ‘ಅಪ್ಪ–ಅಮ್ಮ ಇಬ್ಬರೂ ದೇವರ ಬಳಿಗೆ ಹೋಗಿದ್ದಾರೆ‘ ಎಂದು ಚಿಕ್ಕಮ್ಮ–ಚಿಕ್ಕಪ್ಪ ಹೇಳಿದ್ದನ್ನು ಮಗು ನಂಬಿದೆ. ಇಬ್ಬರ ಫೋಟೋ ದೇವರ ಕೋಣೆ ಸೇರಿದೆ. ತಂದೆ ತಾಯಿಯ ನೆನಪಾದಾಗ ದೇವರ ಕೋಣೆಗೆ ಹೋಗಿ ಪೂಜೆ ಮಾಡುತ್ತಾಳೆ ವರ್ಷಾ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್‌ (35) ಹಾಗೂ ರಶ್ಮಿ (27) ದಂಪತಿಯನ್ನು, ನಾಲ್ಕು ದಿನಗಳ ಅಂತರಲ್ಲಿ ಕೋವಿಡ್‌ ಬಲಿ ತೆಗೆದುಕೊಂಡಿದೆ. ಈ ದಂಪತಿ ಮಗಳು ಈಗ ಅನಾಥೆ. ರಶ್ಮಿ ಅವರ ತಂಗಿ, ಅದೇ ಊರಿನಲ್ಲಿರುವ ರಮ್ಯಾ ಹಾಗೂ ಅವರ ಪತಿ ಮಹದೇವಸ್ವಾಮಿ ಅವರು ವರ್ಷಾಳನ್ನು ದತ್ತು ತೆಗೆದುಕೊಂಡು ಆರೈಕೆ ಮಾಡುತ್ತಿದ್ದಾರೆ.

‘ಮಗು ನಮ್ಮ ಜೊತೆಗೆ ಹೊಂದಿಕೊಂಡಿದೆ. ಕೆಲವು ಬಾರಿ, ರಾತ್ರಿ ಹೊತ್ತು ಅಪ್ಪ–ಅಮ್ಮನನ್ನು ವಿಚಾರಿಸುತ್ತಾಳೆ. ದೇವರ ಬಳಿಗೆ ಹೋಗಿದ್ದಾರೆ ಎಂದಾಗ ಸುಮ್ಮನಾಗುತ್ತಾಳೆ’ ಎಂದು ಮಹದೇವಸ್ವಾಮಿ ಹಾಗೂ ರಮ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಡ ಕುಟುಂಬ: ಗುರುಪ್ರಸಾದ್‌ ಅವರದ್ದು ಬಡ ಕುಟುಂಬವಾಗಿತ್ತು. ಸರಕು ಸಾಗಣೆ ಆಟೊ ಹೊಂದಿದ್ದ ಅವರು, ಅದನ್ನು ಬಾಡಿಗೆಗೆ ಓಡಿಸಿ ಜೀವನ ನಡೆಸುತ್ತಿದ್ದರು.

‘ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದು ಆಟೊ ತೆಗೆದುಕೊಂಡಿದ್ದರು. ಆದರೆ, ಸಾಲದ ಕಂತು ಕಟ್ಟಿಲ್ಲ ಎಂದು ಫೈನಾನ್ಸ್‌ನವರು ಆಟೊ ಜಪ್ತಿ ಮಾಡಿಕೊಂಡು ಹೋಗಿದ್ದರು’ ಎಂದು ಮಹದೇವಸ್ವಾಮಿ ಅವರು ಹೇಳಿದರು.

‘ಗುರುಪ್ರಸಾದ್‌, ಸಂಬಂಧಿಯಾಗುವ ಮೊದಲೇ ನನಗೆ ಸ್ನೇಹಿತ. ನಮ್ಮ ಮದುವೆ ಮಾಡಿಸಿದ್ದೂ ಅವನೇ. ಇಬ್ಬರೂ ಸರಕು ಸಾಗಣೆ ಆಟೊ ಓಡಿಸಿಕೊಂಡು ಜೀವನ ಮಾಡುತ್ತಿದ್ದೆವು. ಕೋವಿಡ್ ಅವನ ಪ್ರಾಣ ತೆಗೆಯಿತು. ನಾಲ್ಕು ದಿನ ದ ಬಳಿಕ ಅವನ ಹೆಂಡತಿಯೂ ಮೃತಪಟ್ಟರು’ ಎಂದು ಮಹದೇವಸ್ವಾಮಿ ಬೇಸರ
ವ್ಯಕ್ತಪಡಿಸಿದರು.

'ಭಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಕ್ಕನಿಗೆ ಕೋವಿಡ್ ಇದ್ದರೂ ಮನೆಯಲ್ಲೇ ಆರಾಮವಾಗಿದ್ದಳು. ಆದರೆ, ಭಾವ ಮೃತಪಟ್ಟಿದ್ದರಿಂದ ಆಘಾತಕ್ಕೆ ಒಳಗಾಗಿದ್ದಳು. ತಾಯಿಗೂ ಕೋವಿಡ್ ಆಗಿತ್ತು. ನಾನು ಗರ್ಭಿಣಿ ಆಗಿದ್ದು, ಆಕೆಯನ್ನು ಸಂತೈಸುವುದಕ್ಕೆ ಹೋಗಲಾಗಲಿಲ್ಲ. ದುಃಖದಲ್ಲೇ ಆಕೆ ಕಣ್ಣು ಮುಚ್ಚಿದಳು' ಎಂದು ರಮ್ಯಾ ದುಃಖಿಸಿದರು.

'‌ ವರ್ಷಾ ನಮ್ಮೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಎಷ್ಟೇ ಕಷ್ಟವಾದರೂ ಅವಳ ಇಷ್ಟಗಳನ್ನು ಪೂರೈಸುತ್ತೇವೆ. ಇವಳು ನಮ್ಮ‌ ದೊಡ್ಡ ಮಗಳು. ಇನ್ನು ಹುಟ್ಟುವುದು ಎರಡನೇ ಮಗು' ಎಂದು ಹೇಳುತ್ತಾರೆ ರಮ್ಯಾ ಹಾಗೂ ಮಹದೇವಸ್ವಾಮಿ.

ಪಾಲಕರ ಸಂಪರ್ಕಕ್ಕೆ: 9591259722

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT