ಗುರುವಾರ , ಆಗಸ್ಟ್ 11, 2022
20 °C
ಹಳ್ಳಿಗಳಲ್ಲಿ ಜಾಗೃತಿ ಕರಪತ್ರ ವಿತರಣೆ, ಬ್ಯಾನರ್‌ ಅಳವಡಿಕೆ

‘ಕನ್ನಡ ಮತದಾರರಿಗೊಂದು ಪತ್ರ’: ಪಂಚಾಯ್ತಿ ನಿವೃತ್ತ ಕಾರ್ಯದರ್ಶಿಯ ಮತ ಜಾಗೃತಿ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ನಿವೃತ್ತ ಕಾರ್ಯದರ್ಶಿ ಬಿದರಹಳ್ಳಿ ಚೆನ್ನವೀರಪ್ಪ ‘ಆಮಿಷಕ್ಕೆ ಒಳಗಾಗದ ಮತದಾನದ ಕುರಿತು ಜಾಗೃತಿ ಮೂಡಿಸಲು ‘ಕನ್ನಡ ಮತದಾರರಿಗೊಂದು ಪತ್ರ’ ಶೀರ್ಷಿಕೆಯ ಕರಪತ್ರಗಳನ್ನು ಹಳ್ಳಿಗಳಲ್ಲಿ ಏಕಾಂಗಿಯಾಗಿ ವಿತರಿಸುತ್ತಿದ್ದಾರೆ.

2015ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಜಾಗೃತಿ ಮೂಡಿಸಿದ್ದ ಅವರು ಬಳಿಕ ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲೂ ಸ್ವಂತ ಖರ್ಚಿನಿಂದ ಜಾಗೃತಿ ಮೂಡಿಸಿದ್ದರು. ಈ ಬಾರಿ ಅನಾರೋಗ್ಯದ ನಡುವೆಯೂ ಪ್ರಯತ್ನ ನಿಲ್ಲಿಸಿಲ್ಲ ಎಂಬುದು ವಿಶೇಷ.

ಹಡಗಲಿಯ ತಮ್ಮ ಹುಟ್ಟೂರಾದ ಹಿರೇಹಡಗಲಿ ಸೇರಿದಂತೆ ಹಿರೇಕೊಳಚಿ, ಹಗರನೂರು, ಕಾಂತೆಬೆನ್ನೂರಿನಲ್ಲಿ ಅವರು ಜಾಗೃತಿ ಕರಪತ್ರಗಳನ್ನು ವಿತರಿಸುತ್ತಿದ್ದಾರೆ. ಬ್ಯಾನರ್‌ಗಳನ್ನೂ ಅಳವಡಿಸಲಿದ್ದಾರೆ.

‘ಕಾಂತೆಬೆನ್ನೂರು, ದಾಸನಹಳ್ಳಿ, ಹಗರನೂರಿನಲ್ಲಿ ಕೆಲಸ ಮಾಡಿ 2014ರಲ್ಲಿ ಹೊಳಗುಂದಿಯಲ್ಲಿ ನಿವೃತ್ತನಾದ ಬಳಿಕ ಪಂಚಾಯ್ತಿ ಚುನಾವಣೆ ಬಂತು. ಸಮಾಜಕ್ಕೆ ಕಿರು ಸೇವೆ ಮಾಡಬೇಕೆಂಬ ಹಂಬಲದಿಂದ ಜಾಗೃತಿಯನ್ನು ಮೂಡಿಸಲಾರಂಭಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

‘ಸರ್ಕಾರವೊಂದೇ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ಸಾರ್ವಜನಿಕರು ಕೂಡ ಸ್ಪಂದಿಸಿ ಜಾಗೃತಿ ಮೂಡಿಸಿದರೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಧ್ಯ. ನನ್ನ ಪ್ರಯತ್ನದಿಂದ ದೊಡ್ಡಮಟ್ಟದ ಪರಿಣಾಮವೇನೂ ಆಗುವುದಿಲ್ಲ ಎಂಬ ಅರಿವೂ ಇದೆ. ಆದರೆ ಹಾಗೆಂದು ಸುಮ್ಮನೆ ಇರಲು ಸಾಧ್ಯವಿಲ್ಲ’ ಎಂದರು.

‘ಮನೆಯಲ್ಲಿ ಕುಳಿತುಕೊಳ್ಳದೆ ಮತಗಟ್ಟೆಗೆ ಬನ್ನಿ, ಆಮಿಷಕ್ಕೆ ಒಳಗಾಗದೆ ಮತ ಹಾಕಿ. ಕೊರೊನಾ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ’ ಎಂಬ ಸಂದೇಶ ಕರಪತ್ರದಲ್ಲಿದೆ. ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಶೌಚಾಲಯ ನಿರ್ಮಾಣದ ಜಾಗೃತಿಯ ಘೋಷವಾಕ್ಯಗಳೂ ಇವೆ.

‘₹ 600 ಕೊಟ್ಟು ಸದ್ಯ 1 ಸಾವಿರ ಕರಪತ್ರಗಳನ್ನು ಹಂಚಲು ಆರಂಭಿಸಿದ್ದೇನೆ. ಹಿರೇಹಡಗಲಿಯಲ್ಲಿಯೇ ವಾಸವಿರುವುದರಿಂದ ಅಲ್ಲಿ ದಿನವೂ ಓಡಾಡಿ ಕರಪತ್ರ ಹಂಚುತ್ತಿದ್ದೇನೆ. ಇತರೆ ಗ್ರಾಮಗಳಿಗೆ ಒಮ್ಮೊಮ್ಮೆ ಹೋಗಿ ಬರುತ್ತೇನೆ’ ಎಂದರು. ಅವರ ಪತ್ನಿ ವಿಜಯ, ಮಗ ನಾಗರಾಜ, ಸೊಸೆ ಐಶ್ವರ್ಯ ಕೂಡ ಅವರ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ.

‘ಪ್ರತಿ ವರ್ಷ ಮನೆಯಲ್ಲೇ ಕನ್ನಡ ರಾಜ್ಯೋತ್ಸವವನ್ನೂ ಮಾಡುತ್ತೇವೆ. ಅತಿಥಿಗಳಿಗೆ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ಕೊಡುತ್ತೇವೆ’ ಎಂದರು.

*
ಪಂಚಾಯತ್‌ ರಾಜ್‌ ವ್ಯವಸ್ಥೆಯೇ ಪ್ರಜಾತಂತ್ರದ ತಾಯಿಬೇರು.ಅದನ್ನು ರಕ್ಷಿಸುವ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನವಷ್ಟೇ. –ಬಿದರಹಳ್ಳಿ ಚೆನ್ನವೀರಪ್ಪ, ಗ್ರಾ.ಪಂ. ನಿವೃತ್ತ ಕಾರ್ಯದರ್ಶಿ


ಮತದಾನ ಜಾಗೃತಿಗೆ ಮುದ್ರಿಸಲಾದ ಕರ ಪತ್ರ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು