ಶುಕ್ರವಾರ, ಮೇ 27, 2022
29 °C
ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ ಪ್ರಕರಣ

ಭದ್ರತೆಯೊಂದಿಗೆ ಕೋರ್ಟ್‌ಗೆ ಭಗವಾನ್ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಮಾಯಣ, ಮಹಾಭಾರತ ಮತ್ತು ಹಿಂದೂ ಧರ್ಮ ದೇವತೆಗಳನ್ನು ಅವಹೇಳನ ಮಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೊದಲ ಆರೋಪಿಯಾಗಿರುವ ಪ್ರೊ. ಕೆ.ಎಸ್. ಭಗವಾನ್ ಶುಕ್ರವಾರ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿಗಿ ಭದ್ರತೆಯ ನಡುವೆ ಹಾಜರಾದರು.

ನ್ಯಾಯಾಧೀಶ ವೀರನಗೌಡ ಎಸ್. ಪಾಟೀಲ ಪ್ರಕರಣದ ವಿಚಾರಣೆ ನಡೆಸಿದರು. ಈ ವೇಳೆ ಭಗವಾನ್ ಪರವಾಗಿ ವಕೀಲ ಸಿ.ಎಚ್. ಹನುಮಂತ ರಾಯ ವಕಾಲತ್ತು ಸಲ್ಲಿಸಿದರು.

ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ತಮಿಳ್ ಸೆಲ್ವಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಅವರಿಬ್ಬರೂ ಗೈರು ಹಾಜರಾಗಿದ್ದರು. ಚಂಪಾ ಮತ್ತು ತಮಿಳ್ ಸೆಲ್ವಿ ಪರವಾಗಿ ಹಾಜರಾಗಿದ್ದ ವಕೀಲರು, ತಮ್ಮ ಕಕ್ಷಿದಾರ ಆರೋಪಿಗಳ ಹಾಜರಾತಿಗೆ ವಿನಾಯಿತಿ ಕೋರಿದರು. ನ್ಯಾಯಾಲಯ ವಿಚಾರಣೆಯನ್ನು 2022ರ ಏಪ್ರಿಲ್ 4ಕ್ಕೆ ಮುಂದೂಡಿತು.

ಜನ್ಮದಿನದ ಕಾರ್ಯಕ್ರಮ ನಡೆದ ಸ್ಥಳ ಬೆಂಗಳೂರು ಎಂಬ ಕಾರಣಕ್ಕೆ ನಂತರ ಈ ಪ್ರಕರಣವನ್ನು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ್ದ ಹೈ ಗ್ರೌಂಡ್ಸ್ ಠಾಣೆ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿಂದೆ ನ್ಯಾಯಾಲಯದಆವರಣದಲ್ಲಿ ವಕೀಲರಾದ ಮೀರಾ ರಾಘವೇಂದ್ರ ಅವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ಕಾರಣ ಇಂದು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಏನಿದು ಪ್ರಕರಣ?

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದ್ದ ಪೆರಿಯಾರ್ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರೊ. ಭಗವಾನ್, ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ತಮಿಳ್ ಸೆಲ್ವಿ ಭಾಷಣ ಮಾಡಿದ್ದರು.

ಭಾಷಣದಲ್ಲಿ ಅವರು, ‘ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಮಹಾಭಾರತ ಓದಬೇಡಿ. ದೇವಾಲಯಗಳು ಕೇವಲ ಹಣ ಮಾಡುವ ವ್ಯವಸ್ಥೆ ಸೃಷ್ಟಿಸಿಕೊಂಡಿವೆ. ಭಗವದ್ಗೀತೆ ಓದುವವರು ಭಯೋತ್ಪಾದಕರಾಗಿ ಪರಿವರ್ತನೆಯಾಗುತ್ತಾರೆ, ಉಪನಿಷತ್ತು ಒಂದು ಕೆಟ್ಟ ಗ್ರಂಥ... ಎಂದೆಲ್ಲ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ ಅವಹೇಳನಾಕಾರಿ ಭಾಷಣ ಮಾಡಿದ್ದಾರೆ. ಇದರಿಂದ ಹಿಂದೂಗಳ ಶ್ರೇಷ್ಠ ಧರ್ಮಗ್ರಂಥಗಳಿಗೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಶಾಮಸುಂದರ ಭಟ್ ಎಂಬುವವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2017ರ ಸೆಪ್ಟೆಂಬರ್ 19ರಂದು ದೂರು ನೀಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು