ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ ಕುಲಕರ್ಣಿ ಜಾಮೀನು ಷರತ್ತು ಸಡಿಲಿಕೆ

Last Updated 16 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಯೋಗೇಶ್‌ ಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಆರ್‌. ಕುಲಕರ್ಣಿ ಅವರ ಜಾಮೀನು ಷರತ್ತು ಸಡಿಲಿಸಿರುವ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಲು ಅನುಮತಿ ನೀಡಿದೆ.

ಕೊಲೆ ಪ್ರಕರಣದಲ್ಲಿ ಸಿಬಿಐ ವಿನಯ ಅವರನ್ನು ಬಂಧಿಸಿತ್ತು. 2021ರ ಆಗಸ್ಟ್‌ 11ರಂದು ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್‌, ಷರತ್ತುಗಳನ್ನು ವಿಧಿಸಿ, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಆ.13ರಂದು ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ‘ಆರೋಪಿಯು ಈ ನ್ಯಾಯಾಲಯದ ಅನುಮತಿ ಇಲ್ಲದೇ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೊರ ಹೋಗುವಂತಿಲ್ಲ’ ಎಂಬ ಷರತ್ತು ವಿಧಿಸಿತ್ತು.

ಧಾರವಾಡದಲ್ಲಿರುವ ಡೇರಿ ವ್ಯವಹಾರದ ಕಾರಣ ನೀಡಿ ನವೆಂಬರ್‌ 30ರಿಂದ ಡಿಸೆಂಬರ್‌ 30ರವರೆಗೂ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗಲು ವಿನಯ ಅನುಮತಿ ಪಡೆದಿದ್ದರು. ಬಳಿಕ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು, ಈ ಷರತ್ತನ್ನೇ ಕೈಬಿಡುವಂತೆ ಕೋರಿದ್ದರು.

ಸಿಬಿಐ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌, ಈ ಅರ್ಜಿಯನ್ನು ವಿರೋಧಿಸಿದ್ದರು. ‘ಆರೋಪಿಯು ಈ ಹಿಂದೆ ವಿನಾಯಿತಿ ಪಡೆದು ಧಾರವಾಡ ಜಿಲ್ಲೆಯ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ವಾದಿಸಿದ್ದರು.

ವಿಚಾರಣೆಯನ್ನು ಪೂರ್ಣಗೊಳಿಸಿ ಜನವರಿ 14ರಂದು ಆದೇಶ ಪ್ರಕಟಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್‌ ಕುಮಾರ್‌, ‘ನ್ಯಾಯಾಲಯದ ಅನುಮತಿ ಇಲ್ಲದೇ ಹೊರ ಹೋಗುವಂತಿಲ್ಲ’ ಎಂಬ ಷರತ್ತನ್ನು ಮಾರ್ಪಾಡು ಮಾಡಿದ್ದಾರೆ. ‘ಆರೋಪಿಯು ಸಿಬಿಐ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಹುದು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT