ಗುರುವಾರ , ಡಿಸೆಂಬರ್ 3, 2020
23 °C

ಐಎಂಎ ಪ್ರಕರಣ: ಮನ್ಸೂರ್‌ ಖಾನ್‌ಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಎಂಎ ಕಂಪನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ಮನ್ಸೂರ್‌ ಖಾನ್‌ಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ಆಗಸ್ಟ್‌ 18ರಂದು ನಿರಾಕರಿಸಿತ್ತು.

‘ಪೊಲೀಸ್ ತನಿಖೆ ಮುಕ್ತಾಯಗೊಂಡಿದೆ. 2019ರ ಆಗಸ್ಟ್ 1ರಿಂದಲೂ ಮನ್ಸೂರ್‌ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತನಾಳಗಳಲ್ಲಿ ಶೇ 100 ಬ್ಲಾಕ್ ಇತ್ತು. ಬೆನ್ನೆಲುಬು ಸವಕಳಿಯಿಂದ ಕಾಣಿಸಿಕೊಳ್ಳುವ ಬೆನ್ನುನೋವಿನಿಂದಲೂ ಬಳಲುತ್ತಿದ್ದಾರೆ’ ಎಂದು ಮನ್ಸೂರ್ ಪರ ವಕೀಲರು ತಿಳಿಸಿದರು. ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಅಲ್ಲಿನ ಮುಖ್ಯ ವೈದ್ಯಾಧಿಕಾರಿ ನೀಡಿರುವ ‍ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

‘₹4 ಸಾವಿರ ಕೋಟಿಯನ್ನು ಜನರಿಂದ ಸಂಗ್ರಹಿಸಿ ಅದರಲ್ಲಿ ₹1,323 ಕೋಟಿ ಹಿಂದಿರುಗಿಸಿದ್ದಾರೆ. ಈ ನಡುವೆ ₹209 ಕೋಟಿ ಮೌಲ್ಯದ ಆಸ್ತಿಯನ್ನು ಮನ್ಸೂರ್ ಖರೀದಿಸಿದ್ದಾರೆ. ಈ ಆಸ್ತಿಯನ್ನೂ ವಿಲೇ ಮಾಡುವ ಸಾಧ್ಯತೆ ಇದೆ ಮತ್ತು ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ’ ಎಂದು ಇ.ಡಿ ‍ಪರ ವಾದ ಮಂಡಿಸಿದ ವಿಶೇಷ ವಕೀಲ ಮಧುಕರ ದೇಶಪಾಂಡೆ ಹೇಳಿದರು.

‘ಮುಖ್ಯ ವೈದ್ಯಾಧಿಕಾರಿ ನೀಡಿರುವ ಪತ್ರದ ಪ್ರಕಾರ, ಮನ್ಸೂರ್‌ ಖಾನ್‌ಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ. ವಿವಿಧ ದರ್ಜೆಯ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯಾಧಿಕಾರಿ ಸ್ಪಷ್ಟವಾಗಿ ಅವಲೋಕನ ಮಾಡಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಈ ಅಂಶವನ್ನು ಜಾಮೀನು ನೀಡಲು ಪರಿಗಣಿಸಬಹುದು’ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅಭಿಪ್ರಾಯಪಟ್ಟರು.

‘ವಿಚಾರಣಾ ನ್ಯಾಯಾಲಯದ ತೃಪ್ತಿಗಾಗಿ ₹5 ಲಕ್ಷ ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಮತ್ತೊಬ್ಬರ ಶ್ಯೂರಿಟಿ ನೀಡಬೇಕು. ಆಸ್ತಿಗಳನ್ನು ವಿಲೇ ಮಾಡಬಾರದು. ಕಾಯಿಲೆ ವಿಷಯದಲ್ಲಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬೇಕಿದ್ದರೆ, ಆ ನ್ಯಾಯಾಲಯದ ಅನುಮತಿ ಪಡೆಯಬೇಕು. ಅನುಮತಿ ನೀಡುವಾಗ ವಿಚಾರಣಾ ನ್ಯಾಯಾಲಯ ಷರತ್ತುಗಳನ್ನು ವಿಧಿಸಬಹುದು’ ಎಂದು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು