ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ: ವರ್ಷಾಂತ್ಯಕ್ಕೆ ಮೊದಲ ಹಂತ ಪೂರ್ಣ?

ಬೆಂಗಳೂರು–ಮೈಸೂರು ದಶಪಥದ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ
Last Updated 13 ಆಗಸ್ಟ್ 2021, 9:41 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು–ಮೈಸೂರು ನಡುವಿನ ದಶಪಥಗಳ ಹೆದ್ದಾರಿ ಕಾಮಗಾರಿಯು ಭರದಿಂದ ಸಾಗಿದ್ದು, ಈ ವರ್ಷಾಂತ್ಯದಲ್ಲಿ ಮೊದಲ ಹಂತದ ಕಾಮಗಾರಿಯು ಮುಗಿಯುವ ನಿರೀಕ್ಷೆ ಇದೆ.

ದಶಪಥದ ಕಾಮಗಾರಿ ಬಗ್ಗೆ ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್‌ ಗಡ್ಕರಿ ಹರ್ಷ ವ್ಯಕ್ತಪಡಿಸಿದ್ದು, ಈ ಬಗ್ಗೆ ಟ್ವೀಟ್ ಸಹ ಮಾಡಿದ್ದರು. ಯೋಜನೆಗಾಗಿ ಒಟ್ಟು ₹8,172 ಕೋಟಿ ವ್ಯಯಿಸುತ್ತಿದ್ದು, 2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು–ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ ಎಂದೂ ಹೇಳಿದ್ದರು.

ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ದಶಪಥಗಳ ಹೆದ್ದಾರಿ ವಿಸ್ತರಣೆ ಕಾಮಗಾರಿ ಲಾಕ್‌ಡೌನ್‌ ಘೋಷಣೆಗೆ ಮುನ್ನ ಭರದಿಂದ ಸಾಗಿತ್ತು. ಆದರೆ ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಮಧ್ಯೆ ಒಂದೆರಡು ತಿಂಗಳು ಕೆಲಸ ನಿಂತಿತ್ತು. ಇದೀಗ ಮತ್ತೆ ಭರದಿಂದ ಕೆಲಸಗಳು ಸಾಗಿವೆ.

ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25ರಿಂದ 30ಮೀಟರ್‌ ಅಗಲ ಇದ್ದು, ಇದನ್ನು 60 ಮೀಟರ್‌ಗೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಬಳಿ 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು–ಮೈಸೂರು ನಡುವೆ ಸದ್ಯ 135 ಕಿಲೋಮೀಟರ್‌ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್‌ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ.

ಮೈಸೂರು–ಬೆಂಗಳೂರು ನಡುವೆ ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ನೈಸ್‌ ಜಂಕ್ಷನ್‌ ರಸ್ತೆ ಸಮೀಪದಿಂದ ಮಂಡ್ಯ ಜಿಲ್ಲೆಯ ನಿಡಘಟ್ಟವರೆಗಿನ ಮೊದಲ ಹಂತದ ಕಾಮಗಾರಿಯು ಭಾಗಶಃ ಮುಕ್ತಾಯ ಹಂತ ತಲುಪಿದೆ. ಇಲ್ಲಿ ಒಟ್ಟಾರೆ 56.2 ಕಿ.ಮೀ ಉದ್ದದ ರಸ್ತೆಯು ವಿಸ್ತರಣೆ ಆಗುತ್ತಿದೆ.

ಬಿಡದಿ, ರಾಮನಗರ- ಚನ್ನಪಟ್ಟಣ ಮಾರ್ಗದಲ್ಲಿ ಒಟ್ಟು 29.33 ಉದ್ದದ ಬೈಪಾಸ್ ರಸ್ತೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಕೆಲಸ ಈಗಾಗಲೇ ಪೂರ್ಣವಾಗಿದ್ದು, ಹೊಸ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಬಿಡದಿ ಸಮೀಪದ ಕೆರೆ ಮೇಲೆ, ರಾಮನಗರ–ಚನ್ನಪಟ್ಟಣ ನಡುವೆ ಅರ್ಕಾವತಿ ನದಿ ಮೇಲೆ, ಕಣ್ವ ನದಿ ಮೇಲೆ ಹಾಗೂ ಮತ್ತೊಂದು ಕೆರೆಯ ಮೇಲೆ ಈ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆಗಳು ಹಾಗೂ ಅಲ್ಲಲ್ಲಿ ಅಂಡರ್‌ಪಾಸ್‌ಗಳ ನಿರ್ಮಾಣ ಕಾಮಗಾರಿಗಳಷ್ಟೇ ಸದ್ಯ ಬಾಕಿ ಉಳಿದುಕೊಂಡಿವೆ.

ನಿಡಘಟ್ಟವರೆಗೆ ಎಲ್ಲೆಲ್ಲಿ ಕಾಮಗಾರಿ ಮುಗಿದಿದೆಯೋ ಅಲ್ಲೆಲ್ಲ ದಶಪಥ ರಸ್ತೆಯನ್ನು ಈಗಾಗಲೇ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಕಳೆದ ಮೂರು ವರ್ಷದಿಂದ ರಸ್ತೆ ಕಾಮಗಾರಿಯಿಂದ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರು ಕೊಂಚ ನಿರಾಳ ಆಗಿದ್ದಾರೆ. ಬೈಪಾಸ್‌ ರಸ್ತೆಗಳನ್ನು ಎಕ್ಸ್‌ಪ್ರೆಸ್‌ ಪಥಗಳ ಜೊತೆ ಸಂಪರ್ಕ ಕಲ್ಪಿಸುವುದು ಇನ್ನೂ ಬಾಕಿ ಇದೆ. ಎರಡನೇ ಹಂತದಲ್ಲಿ ಮದ್ದೂರಿನಲ್ಲಿ ಎಲಿವೇಟೆಡ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT