ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲೂ 'ನಿರ್ಭಯ' ಅತ್ಯಾಚಾರ; ಬಾಂಗ್ಲಾ ಅಕ್ರಮ ವಲಸಿಗರಿಂದ ಪೈಶಾಚಿಕ ಕ್ರೌರ್ಯ

ಬಾಂಗ್ಲಾ ಪ್ರಜೆಗಳ ನಡುವೆ ವೈಮನಸ್ಸು: ವಿಡಿಯೊ ಆಧರಿಸಿ ಆರೋಪಿಗಳ ಬಂಧನ
Last Updated 28 ಮೇ 2021, 3:02 IST
ಅಕ್ಷರ ಗಾತ್ರ

ಬೆಂಗಳೂರು: ಬಾಂಗ್ಲಾದೇಶದ 23 ವರ್ಷದ ಯುವತಿಯ ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಕೃತ್ಯ ನಗರದಲ್ಲಿ ನಡೆದಿದೆ.

ಯುವತಿ ಮೇಲಿನ ಕ್ರೌರ್ಯದ ದೃಶ್ಯವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದ ದುಷ್ಟರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದೇ ವಿಡಿಯೊ ಆಧರಿಸಿ ನಾಲ್ವರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಕಾಮುಕರ ಕೃತ್ಯದಿಂದಾಗಿ ಯುವತಿಯ ಗುಪ್ತಾಂಗದಿಂದ ರಕ್ತ ಸೋರಿ ತೀವ್ರ ಹಾನಿಯಾಗಿದ್ದು, ಸದ್ಯ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅವರಿಗಾಗಿ ಹುಡುಕಾಟ ನಡೆದಿದೆ. ಪ್ರಕರಣದಲ್ಲಿ ಬಾಂಗ್ಲಾದೇಶದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹೈದರಾಬಾದ್‌ನ ಹಕೀಲ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಂಧಿತ ಆರೋಪಿಗಳು, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಬಾಂಗ್ಲಾದೇಶದಿಂದ ಯುವತಿಯನ್ನು ನಗರಕ್ಕೆ ಕರೆಸಿ ಕೃತ್ಯ ಎಸಗಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಆಗಿದ್ದೇನು? ‘ಬಾಂಗ್ಲಾದೇಶದ ಯುವತಿ, ಸಂಬಂಧಿ ಹಾಗೂ ಪರಿಚಯಸ್ಥರ ಜೊತೆ ಭಾರತಕ್ಕೆ ಬಂದಿದ್ದರು. ಅವರನ್ನು ಬರಮಾಡಿಕೊಂಡಿದ್ದ ಆರೋಪಿಗಳು, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಕೊಠಡಿಯೊಂದರಲ್ಲಿ ಇರಿಸಿದ್ದರು. ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಯುವತಿ ಅದಕ್ಕೆ ಒಪ್ಪಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ಗ್ರಾಹಕರ ಜೊತೆ ಹೋಗುವುದಿಲ್ಲವೆಂದಿದ್ದ ಯುವತಿ, ವಾಪಸು ಊರಿಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದರು. ಜೊತೆಯಲ್ಲೇ ಇದ್ದ ಇನ್ನೊಬ್ಬ ಮಹಿಳೆ, ವೇಶ್ಯಾವಾಟಿಕೆಗಾಗಿ ಪುನಃ ಒತ್ತಾಯಿಸಿದ್ದಳು. ಅದಕ್ಕೂ ಯುವತಿ ಒಪ್ಪಿರಲಿಲ್ಲ. ಜೊತೆಗೆ, ಹಣದ ವಿಚಾರಕ್ಕೂ ಅವರ ನಡುವೆ ವೈಮನಸ್ಸು ಉಂಟಾಗಿತ್ತು.’

‘ಆಕ್ರೋಶಗೊಂಡ ಮಹಿಳೆ ಹಾಗೂ ಇತರೆ ಆರೋಪಿಗಳು, ಯುವತಿಯನ್ನು ಮಂಚದ ಮೇಲೆ ಮಲಗಿಸಿ ಎಳೆದಾಡಿದ್ದರು. ಬಟ್ಟೆ ಕಳಚಿ ನಗ್ನಗೊಳಿಸಿದ್ದರು. ನಂತರ, ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ತಮ್ಮ ಕಾಲು ಬೆರಳುಗಳನ್ನು ಹಾಕಿ ಮೃಗೀಯವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಅಕ್ರಮವಾಗಿ ನುಸುಳಿದ್ದರು: ‘ಯುವತಿ, ಅವರ ಸಂಬಂಧಿಕರು ಹಾಗೂ ಪರಿಚಯಸ್ಥರು ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶದೊಳಗೆ ನುಸುಳಿದ್ದರು. ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದರು ಎಂಬ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಲೊಕೇಶನ್ ನೀಡಿದ ಸುಳಿವು
’ಅತ್ಯಾಚಾರದ ವಿಡಿಯೊಗಳು ಈಶಾನ್ಯ ರಾಜ್ಯಗಳು ಹಾಗೂ ಬಾಂಗ್ಲಾದೇಶದಲ್ಲಿ ಹರಿದಾಡಿದ್ದವು. ವಿಚಾರಣೆ ಆರಂಭಿಸಿದ್ದ ಅಸ್ಸಾಂ ಪೊಲೀಸರು, ಯುವತಿ ಕುಟುಂಬಸ್ಥರನ್ನು ಪತ್ತೆ ಮಾಡಿದ್ದರು. ಸಂಬಂಧಿ ಜೊತೆ ಯುವತಿ ಭಾರತಕ್ಕೆ ಹೋಗಿರುವುದಾಗಿ ಕುಟುಂಬಸ್ಥರು ಹೇಳಿದ್ದರು’ ಎಂದು ಗೊತ್ತಾಗಿದೆ.

ಯುವತಿಯ ಸಂಬಂಧಿಯ ಮೊಬೈಲ್ ನೆಟ್‌ವರ್ಕ್‌ ಪರಿಶೀಲಿಸಿದಾಗ ಬೆಂಗಳೂರು ತೋರಿಸಿತ್ತು. ಅದೇ ಮಾಹಿತಿಯನ್ನು ಅಸ್ಸಾಂ ಪೊಲೀಸರು, ಬೆಂಗಳೂರು ಪೊಲೀಸರಿಗೆ ನೀಡಿದ್ದರು.

ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದಲ್ಲಿ ತಂಡ ರಚಿಸಿದ್ದ ಕಮಿಷನರ್ ಕಮಲ್ ಪಂತ್, ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರು. ರಾಮಮೂರ್ತಿನಗರ ಮತ್ತು ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ವಾಸವಿರುವ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂಧಿಸಲು ಹೋದ ಪೊಲೀಸರನ್ನು ಕಂಡಿದ್ದ ಆರೋಪಿಗಳು, ಮನೆಯ ಕಾಂಪೌಂಡ್ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯ ಎಸಗಿದ್ದ ಮನೆಗೆ ಕಮಲ್‌ ಪಂತ್, ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್.ಮುರುಗನ್, ಡಿಸಿಪಿ ಎಸ್.ಡಿ. ಶರಣಪ್ಪ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT