ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿಗೆ ಹೊಸ ಸ್ವರೂಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated 24 ಮಾರ್ಚ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕಾಯಕಲ್ಪ ನೀಡಲು ನಿರ್ಧರಿಸಿದ್ದು, ಈಗಾಗಲೇ ಎರಡು ಸಭೆ ನಡೆಸಲಾಗಿದೆ.ಶೀಘ್ರವೇ ಆಯೋಗಕ್ಕೆ ಹೊಸ ಸ್ವರೂಪ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ನಜೀರ್ ಅಹ್ಮದ್ ಪ್ರಶ್ನೆಗೆ ಉತ್ತರಿಸಿದ ಅವರು, ‘2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಮುಖ್ಯ ಪರೀಕ್ಷೆಯ ಉತ್ತರಪತ್ರಿಕೆಯ ಪ್ರತಿಯನ್ನು ಮಾಹಿತಿ ಹಕ್ಕಿನ ಅಡಿ ನೀಡಲು ಕೆಪಿಎಸ್‌ಸಿ ನಿರಾಕರಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠವು ಉತ್ತರ ಪತ್ರಿಕೆ ನೀಡಲು ಆದೇಶಿಸಿದೆ. ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ’ ಎಂದರು.

‘ಮುಖ್ಯಪರೀಕ್ಷೆ ಬರೆದು ಫಲಿತಾಂಶ ಬಂದ ಬಳಿಕ ಅಭ್ಯರ್ಥಿಗಳಿಗೆ ಉತ್ತರಪತ್ರಿಕೆ ನೋಡಲು ಅವಕಾಶ ಇಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತರಪತ್ರಿಕೆ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಆದರೆ, ಬೇರೆ ಪ್ರಕರಣಗಳಲ್ಲಿ ಉತ್ತರ ಪತ್ರಿಕೆ ನೀಡಲು ಕೋರ್ಟ್‌ ಆದೇಶಿಸಿದೆ ಎಂದು ಅಭ್ಯರ್ಥಿಗಳು ವಾದಿಸುತ್ತಿದ್ದಾರೆ. ಒಂದು ವೇಳೆ ಆ ರೀತಿಯ ತೀರ್ಪು ಇದ್ದರೆ ಅದನ್ನು ಪರಿಶೀಲಿಸಿ, ಅಭ್ಯರ್ಥಿಗಳಿಗೆ ನೆರವು ನೀಡಲಾಗುವುದು’ ಎಂದರು.

ಹಂತ ಹಂತವಾಗಿ ಭರ್ತಿ: ಕಾಂಗ್ರೆಸ್ಸಿನ ಎಸ್. ರವಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಖಾಲಿ ಇರುವ2.50 ಲಕ್ಷ ಭರ್ತಿಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು’ ಎಂದರು.

‘ಹಲವು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಹಿಂದಿನ ಸರ್ಕಾರಗಳು ನೇಮಕಾತಿ ತಡೆಹಿಡಿದಿದ್ದರಿಂದ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿವೆ. ನೇಮಕಾತಿಗೆ 517 ಅಧಿಸೂಚನೆಗಳನ್ನು ಹೊರಡಿಸಿ, 26 ಸಾವಿರ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿತ್ತು. ಅದರಲ್ಲಿ 17 ಸಾವಿರ ಹುದ್ದೆಗಳಿಗೆ ನೇಮಕಾತಿ ಆಗಿದೆ’ ಎಂದೂ ಹೇಳಿದರು.

₹ 26,953 ಕೋಟಿ ಮೊತ್ತದ ಪೂರಕ ಅಂದಾಜಿಗೆ ಒಪ್ಪಿಗೆ
ಬೆಂಗಳೂರು:
₹ 26,953.33 ಕೋಟಿ ಮೊತ್ತದ ಪೂರಕ ಅಂದಾಜುಗಳಿಗೆ ವಿಧಾನಸಭೆಯು ಗುರುವಾರ ಅನುಮೋದನೆ ನೀಡಿತು.

2021–22ನೇ ಆರ್ಥಿಕ ವರ್ಷದ ಮೂರನೇ ಕಂತಿನ ಪೂರಕ ಅಂದಾಜುಗಳನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ‘ಪ್ರಸಕ್ತ ವರ್ಷ ಬಜೆಟ್‌ ಅಂದಾಜಿಗೆ ಹೋಲಿಸಿದರೆ ವರಮಾನ ಸಂಗ್ರಹದಲ್ಲಿ ₹ 27,774 ಹೆಚ್ಚಳವಾಗಿದೆ. ಇದರಿಂದಾಗಿ ಹೆಚ್ಚುವರಿ ವೆಚ್ಚಗಳನ್ನು ಮಾಡಲು ಸರ್ಕಾರಕ್ಕೆ ಸಾಧ್ಯವಾಗಿದೆ’ ಎಂದರು.

ವರಮಾನ ಸಂಗ್ರಹದಲ್ಲಿ ಸೋರಿಕೆ ತಡೆಗೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನಗತ್ಯ ಲೆಕ್ಕ ಶೀರ್ಷಿಕೆಗಳು ಮತ್ತು ಅನುಪಯುಕ್ತ ಯೋಜನೆಗಳನ್ನು ತೆಗೆದುಹಾಕಲಾಗುವುದು. ಕಡತಗಳ ಚಲನೆಯ ಹಂತವನ್ನು ಕಡಿಮೆ ಮಾಡಲಾಗುವುದು. ಕಟ್ಟಡಗಳ ನಿರ್ಮಾಣಕ್ಕೆ ಅನಗತ್ಯ ವೆಚ್ಚ ಮಾಡುವುದನ್ನೂ ತಗ್ಗಿಸಲಾಗುವುದು ಎಂದು ಹೇಳಿದರು.

ಕ್ರಮದ ಭರವಸೆ: ‘ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ನಿಗಮಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಆಡಳಿತಾತ್ಮಕ ಅನುಮೋದನೆ ಇಲ್ಲದೆ ಕೈಗೆತ್ತಿಕೊಳ್ಳಲಾಗಿದೆ. ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

‘ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕುವ ಕೆಲಸ ಆರಂಭಿಸಿದ್ದೇನೆ. ನಿಯಮ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ಟೆಂಡರ್‌ ತಡೆಹಿಡಿಯಲು ಸೂಚಿಸಲಾಗಿದೆ. ಭ್ರಷ್ಟರ ವಿರುದ್ಧದ ಗದಾಪ್ರಹಾರ ಆರಂಭವಾಗಿದೆ. ಈವರೆಗೆ ಯಾರೂ ಮುಟ್ಟದ ಸಂಸ್ಥೆಗಳನ್ನು ನಮ್ಮ ಸರ್ಕಾರ ಮುಟ್ಟಿದೆ. ಇದು ನಿಲ್ಲುವುದಿಲ್ಲ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT