ಶನಿವಾರ, ಸೆಪ್ಟೆಂಬರ್ 18, 2021
27 °C
13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ * ಲಿಂಗಾಯತ–ಒಕ್ಕಲಿಗ–ಬ್ರಾಹ್ಮಣರದ್ದೇ ಪಾರುಪತ್ಯ * ಉಪ ಮುಖ್ಯಮಂತ್ರಿ ಸ್ಥಾನ ನೀಡದಿರಲು ವರಿಷ್ಠರ ನಿರ್ಧಾರ

ಹಳಬರಿಗೇ ಮಣೆ: ಬೊಮ್ಮಾಯಿಗೆ ಪೂರ್ಣ ಹೊಣೆ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳಂಕ ರಹಿತರೂ, ಭ್ರಷ್ಟರಲ್ಲದವರನ್ನು ಹೊಸ ಸಚಿವ ಸಂಪುಟಕ್ಕೆ ತಂದು ಆಡಳಿತಕ್ಕೆ ಹೊಸ ಸ್ಪರ್ಶ ನೀಡಲಾಗುತ್ತದೆ ಹಾಗೂ ಯುವ ತಲೆಮಾರಿಗೆ ಆದ್ಯತೆ ಸಿಗಲಿದೆ ಎಂಬೆಲ್ಲ ವಾದಗಳು ಬದಿಗೆ ತಳ್ಳಲ್ಪಟ್ಟಿವೆ. ಯಡಿಯೂರಪ್ಪ ಛಾಯೆಯಿಂದ ಸರ್ಕಾರವನ್ನು ಹೊರತರುವ ಸಲುವಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಕಟ್ಟಿ ಹಾಕದಂತಹ ವಾತಾವರಣ ನಿರ್ಮಿಸಿ, ಅವರಿಗೇ ಪೂರ್ತಿ ಹೊಣೆ ವಹಿಸುವ ಚಾಣಾಕ್ಷ ನಡೆಯನ್ನು ಬಿಜೆಪಿ ವರಿಷ್ಠರು ಕೈಗೊಂಡಿದ್ದಾರೆ.

ಯಡಿಯೂರಪ್ಪ ಅವರ ಸಂಪುಟ ರಚನೆಗೆ 25 ದಿನ ಕಾಯಿಸಿದ್ದ ಬಿಜೆಪಿ ವರಿಷ್ಠರು, ಅವರ ಸರ್ಕಾರವನ್ನು ತಮ್ಮದೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವು ಕಡಿವಾಣಗಳನ್ನು ಹಾಕಿದ್ದರು. ಬೊಮ್ಮಾಯಿ ಅವರ ಸಂಪುಟ ರಚನೆಗೆ ಒಂದೇ ವಾರದಲ್ಲಿ ಹಸಿರು ನಿಶಾನೆ ತೋರಿಸಿದ ಆ ಪಕ್ಷದ ನಾಯಕರು, ಯಡಿಯೂರಪ್ಪ ಹಟ, ಬೊಮ್ಮಾಯಿ ಮನವಿಗೆ ಮಣಿಯದೇ ತಮ್ಮದೇ ಪಟ್ಟಿಯನ್ನು ಕಳಿಸಿ, ತಮ್ಮ ಮೂಗಳತೆಯಲ್ಲಿ ಸರ್ಕಾರ ಇರುವಂತೆ ನೋಡಿಕೊಂಡಿದ್ದಾರೆ.

ರಾಜಭವನದಲ್ಲಿ ಬುಧವಾರ( ಆ.4)ರಂದು ನಡೆದ ಸಮಾರಂಭದಲ್ಲಿ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಯೂ ಸೇರಿಕೊಂಡಂತೆ ಬೊಮ್ಮಾಯಿ ಸಂಪುಟದ ಬಲ ಮೂವತ್ತಕ್ಕೆ ಏರಿದೆ. ನಾಲ್ಕು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗಿದೆ. 29 ಜನರ ಪೈಕಿ 23 ಹಳೆಯ ಮುಖಗಳೇ ಆಗಿವೆ. ಆರು ಹೊಸ ಮುಖಗಳಿಗಷ್ಟೇ ಅವಕಾಶ ಸಿಕ್ಕಿದೆ.

ಶಕ್ತಿಕೇಂದ್ರ ತಪ್ಪಿಸುವ ಲೆಕ್ಕ: ಕರ್ನಾಟಕದ ಬಿಜೆಪಿ ಮತ್ತು ಸರ್ಕಾರವನ್ನು ಯಡಿಯೂರಪ್ಪ ಹಿಡಿತದಿಂದ ತಪ್ಪಿಸಲು ಹೊಸ ಮಾರ್ಗ ಹುಡುಕುವುದು, ಬೊಮ್ಮಾಯಿ ನೇತೃತ್ವದಲ್ಲಿ ‘ಪರ್ಯಾಯ’ವೊಂದನ್ನು ಸೃಷ್ಟಿಸುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ ಇದ್ದಂತೆ ಮೇಲ್ನೋಟಕ್ಕೆ ತೋರುತ್ತಿದೆ.

ಮುಖ್ಯಮಂತ್ರಿಯಾಗಿ ನಿಯುಕ್ತಿಗೊಂಡಾಗ, ದೆಹಲಿಗೆ ಹೋಗುವ ಮುನ್ನ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿ ಹೋಗುತ್ತಿದ್ದ ಬೊಮ್ಮಾಯಿ, ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ರಾಜಧಾನಿಗೆ ಬುಧವಾರ ಬೆಳಿಗ್ಗೆ ಬರುತ್ತಲೇ ನೇರ ವಿಧಾನಸೌಧಕ್ಕೆ ಹೋದರು. ಅಲ್ಲಿ ಸಭೆ, ಪತ್ರಿಕಾಗೋಷ್ಠಿ ನಡೆಸಿ ಸಚಿವ ಸಂಪುಟದ ರೂಪುರೇಷೆಯನ್ನು ರಾಜ್ಯದ ಜನರ ಮುಂದಿಟ್ಟರು. ಅದಾದ ಬಳಿಕವಷ್ಟೇ ಯಡಿಯೂರಪ್ಪ ಮನೆಗೆ ಧಾವಿಸಿದರು. ವರಿಷ್ಠರ ಸೂಚನೆಯ ಮೇರೆಗೆ ಬೊಮ್ಮಾಯಿ ಈ ಮಾರ್ಗ ಅನುಸರಿಸಿದರು. ತಮ್ಮ ಶಕ್ತಿಕೇಂದ್ರ ವಿಧಾನಸೌಧವೇ ವಿನಃ ಯಡಿಯೂರಪ್ಪ ಮನೆಯಲ್ಲ ಎಂಬ ಸೂಚನೆಯನ್ನು ನೀಡುವುದು ಇದರ ಉದ್ದೇಶ ಇದ್ದಂತಿದೆ.

ಗೋವಿಂದ ಕಾರಜೋಳ, ಶ್ರೀರಾಮುಲು, ಅಶೋಕ, ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡದೇ ಇದ್ದರೆ ಎಲ್ಲ ಸಮುದಾಯವರನ್ನು ಓಲೈಸಿಕೊಂಡು, ಸರ್ಕಾರವನ್ನು ಸುಗಮವಾಗಿ ನಡೆಸುವುದು ಕಷ್ಟ. ಸಾಮಾಜಿಕ ನ್ಯಾಯದ ಆಶಯವನ್ನು ಕಡೆಗಣಿಸಿದಂತಾಗುತ್ತದೆ ಎಂಬುದು ಬೊಮ್ಮಾಯಿ ವಾದವಾಗಿತ್ತು. ಉಪಮುಖ್ಯಮಂತ್ರಿ ಪಟ್ಟವೆಂಬುದು ಮತ್ತೊಂದು ಶಕ್ತಿಕೇಂದ್ರವಾಗಬಾರದು; ನಿರ್ಧಾರ ಸಾಮೂಹಿಕವಾದರೂ ನಾಯಕತ್ವ ಏಕಾತ್ಮಕವಾಗಿರಬೇಕು ಎಂಬ ತರ್ಕದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಬಿಜೆಪಿ ವರಿಷ್ಠರು ನಿರಾಕರಿಸಿದರು.

ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಯಡಿಯೂರಪ್ಪ ಬೆದರಿಕೆ ಹಾಕಿದ್ದರು. ನಾಯಕನ ಬೇಡಿಕೆ ನಿರಾಕರಿಸಲಾಗದೇ ಬೊಮ್ಮಾಯಿ ಈ ಪ್ರಸ್ತಾವನೆಯನ್ನೂ ವರಿಷ್ಠರ ಮುಂದಿಟ್ಟಿದ್ದರು. ಮತ್ತೊಂದು ಶಕ್ತಿಕೇಂದ್ರಕ್ಕೆ ಅವಕಾಶವಾಗುತ್ತದೆ; ಭ್ರಷ್ಟಾಚಾರ ತಡೆಯಬೇಕೆಂಬ ಒತ್ತಾಸೆ ಮಣ್ಣುಪಾಲಾಗುತ್ತದೆ ಎಂಬ ಕಾರಣ ಮುಂದಿಟ್ಟ ಬಿಜೆಪಿ ವರಿಷ್ಠರು ಅದನ್ನು ನಿರಾಕರಿಸಿದರು.

ಮರೆಯಾದ ಪ್ರಾದೇಶಿಕ ನ್ಯಾಯ: ಹಿಂದಿನ ಬಾರಿಯಂತೆ ಈಗಲೂ ಪ್ರಾದೇಶಿಕ ನ್ಯಾಯ ಮರೆಯಾಗಿದೆ. 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳಿಗಷ್ಟೇ ಪ್ರಾತಿನಿಧ್ಯ ಸಿಕ್ಕಿದೆ. ಅದರಲ್ಲೂ ಹಿಂದುಳಿದ ಜಿಲ್ಲೆಗಳಿಗೆ ‍ಸ್ಥಾನವೇ ಸಿಕ್ಕಿಲ್ಲ.

ಹಳೆ ಮೈಸೂರು ಭಾಗದ ಮೈಸೂರು, ರಾಮನಗರ, ಹಾಸನ, ಕೊಡಗು ಜಿಲ್ಲೆಗಳಿಗೂ ಪ್ರಾತಿನಿಧ್ಯ ಇಲ್ಲದಂತಾಗಿದೆ. ಬಿಜೆಪಿಗೆ ಗಟ್ಟಿ ನೆಲೆಯೇ ಇಲ್ಲದ (ಕೊಡಗು ಬಿಟ್ಟು) ಈ ಜಿಲ್ಲೆಗಳಲ್ಲಿ ಆದ್ಯತೆ ನೀಡಿದರೆ ವಿಧಾನಸಭೆ ಚುನಾವಣೆ ಹೊತ್ತಿಗೆ ಅನುಕೂಲಕಾರಿ ವಾತಾವರಣ ನಿರ್ಮಾಣವಾಗಬಹುದು ಎಂಬ ಲೆಕ್ಕಾಚಾರ ಇತ್ತು. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡುವಾಗ ಈ ಭಾಗದಲ್ಲಿ ಪಕ್ಷಕ್ಕೆ ನೆಲೆ ಕಟ್ಟುವ ಆಶಯ ಇದೆ ಎಂದು ಹೇಳಲಾಗಿತ್ತು. ಜೆಡಿಎಸ್‌ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಲೆಕ್ಕಾಚಾರದಲ್ಲಿ ಈ ಭಾಗವನ್ನು ನಿರ್ಲಕ್ಷ್ಯಿಸಲಾಗಿದೆಯೇ ಎಂಬ ಚರ್ಚೆಯೂ ಶುರುವಾಗಿದೆ.

ಲಿಂಗಾಯತ–ಒಕ್ಕಲಿಗರ ಪಾರುಪತ್ಯ: ಈಗಿನ 30 ಸದಸ್ಯರ ಸಂಪುಟ ಬಲದಲ್ಲಿ ಮುಖ್ಯಮಂತ್ರಿ ಸೇರಿದಂತೆ 10 ಸ್ಥಾನಗಳು ಪ್ರಬಲ ಲಿಂಗಾಯತ–ವೀರಶೈವ ಕೋಮಿಗೆ ಮೀಸಲಾಗಿವೆ. ಒಕ್ಕಲಿಗರೂ ತಾವೂ ಕಮ್ಮಿ ಇಲ್ಲ ಎಂಬಂತೆ 7 ಸ್ಥಾನ ಗಿಟ್ಟಿಸಿದ್ದಾರೆ. ಜನಸಂಖ್ಯಾ ಬಾಹುಳ್ಯದಲ್ಲಿ ಕಡಿಮೆ ಇರುವ ಬ್ರಾಹ್ಮಣ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, ಈಗಾಗಲೇ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದಾರೆ. ಹೀಗಾಗಿ, ಸಚಿವ ಸ್ಥಾನದ ಗೌರವ ಒಂದೇ ಸಮುದಾಯದ ಮೂವರಿಗೆ ಲಭಿಸಿದಂತಾಗಿದೆ. ಕುರುಬ ಸಮುದಾಯ–ಈಡಿಗ ಸಮುದಾಯಗಳು ನಂತರದ ಪ್ರಾತಿನಿಧ್ಯ ಪಡೆದಿವೆ. ಅನೇಕ ತಳಸಮುದಾಯಗಳು, ಅಲಕ್ಷಿತ ಸಮುದಾಯಗಳು ಈ ಬಾರಿಯೂ ಕಡೆಗಣನೆಗೆ ಗುರಿಯಾಗಿರುವುದು ಢಾಳಾಗಿ ಕಾಣಿಸುತ್ತದೆ.

ವಲಸಿಗರಿಗೆ ಮಣೆ: ಸಚಿವ ಸಂಪುಟ ವಿಸ್ತರಣೆ ವೇಳೆ ವಲಸಿಗರಿಗೆ ಹೆಚ್ಚಿನ ಆದ್ಯತೆಯೇ ಸಿಕ್ಕಿದೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ವಲಸಿಗರ ಪೈಕಿ ಶೇ 50 ಮಂದಿಗಷ್ಟೇ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ಅಂದಾಜಿತ್ತು. ಆದರೆ, ಶ್ರೀಮಂತ ಪಾಟೀಲ, ಆರ್. ಶಂಕರ್ ಸ್ಥಾನ ಕಳೆದುಕೊಂಡಿದ್ದರೆ ಮುನಿರತ್ನ ಹೊಸ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಸರ್ಕಾರ ಕೈವಶ ಮಾಡಿಕೊಳ್ಳುವ ಅಂದಾಜಿನಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಇಲ್ಲಿ ಸಚಿವ ಸ್ಥಾನ ತಪ್ಪಿಸಿದರೆ ಅಲ್ಲಿ ತಮ್ಮ ಕಾರ್ಯತಂತ್ರಕ್ಕೆ ಹಿನ್ನಡೆಯಾದೀತು ಎಂಬ ಕಾರಣಕ್ಕೆ ಇಷ್ಟವಿಲ್ಲದೇ ಇದ್ದರೂ ಕೆಲವರನ್ನು ಮುಂದುವರಿಸಲು ತೀರ್ಮಾನಿಸಿದರು ಎಂಬ ಮಾತುಗಳೂ ಇವೆ.

ಬೊಮ್ಮಾಯಿ ಅವರೂ ಸೇರಿದಂತೆ ಅನ್ಯ ಪಕ್ಷಗಳಿಂದ ಬಂದವರೇ ಸಚಿವ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಘ ಪರಿವಾರದ ಚಿಂತನೆ, ಕಠೋರ ಹಿಂದುತ್ವ ಪ್ರತಿಪಾದನೆ ಮಾಡುವವರಿಗೆ ಸಂಪುಟ ರಚನೆಯ ವೇಳೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಹೇಳಲಾಗಿತ್ತು. ಒಟ್ಟು ಸಂಖ್ಯೆಯನ್ನು ಗಮನಿಸಿದರೆ ಕೆ.ಎಸ್. ಈಶ್ವರಪ್ಪ, ವಿ. ಸುನಿಲ್‌ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಬಿ.ಸಿ. ನಾಗೇಶ್ ಅವರಂತಹ ಕೆಲವೇ ನಿಷ್ಠರಿಗೆ ಈ ಬಾರಿ ಪಕ್ಷ ಮಣೆ ಹಾಕಿದೆ.

ಬಿಎಸ್‌ವೈ ಪರ–ವಿರೋಧಿಗಳಿಗೆ ಸಿಗದ ಮನ್ನಣೆ

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪರ ವಕಾಲತ್ತು ವಹಿಸುತ್ತಿದ್ದವರು ಹಾಗೂ ಅವರ ವಿರುದ್ಧ ಬೀದಿಯಲ್ಲಿ ಅಬ್ಬರಿಸುತ್ತಿದ್ದ ಇಬ್ಬಣಗಳನ್ನೂ ಸಂಪುಟ ರಚನೆಯ ವೇಳೆ ಖುಲ್ಲಂಖುಲ್ಲಾ ಹೊರಗಿಡಲಾಗಿದೆ.

‘ಈಗಿರುವುದು ಮೂರು ಪಕ್ಷಗಳ ಸರ್ಕಾರ. ಪರೀಕ್ಷೆ ಬರೆದಿದ್ದೇವೆ; ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ನನಗೆ ಉತ್ತಮ ಖಾತೆಯೇ ಸಿಗಲಿದೆ’ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ಸಿ.ಪಿ. ಯೋಗೇಶ್ವರ್‌ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ‘ವಿಜಯೇಂದ್ರ ಹಿಡಿತದಲ್ಲಿರುವ ಈ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ; ಗಡ್ಡ ಬಿಟ್ಟಿದ್ದು ಯಾಕೆ ಎಂದು ಕೆಲವು ದಿನಗಳಲ್ಲೇ ಗೊತ್ತಾಗಲಿದೆ ’ ಎಂದು ಏರುಧ್ವನಿಯಲ್ಲಿ ಮಾತನಾಡುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ, ‘ನಾನೇ ಮುಖ್ಯಮಂತ್ರಿ’ ಎಂದು ಓಡಾಡಿಕೊಂಡಿದ್ದ ಅರವಿಂದ ಬೆಲ್ಲದ, ಸರ್ಕಾರದ ವಿರುದ್ಧ ಗಟ್ಟಿ ಧ್ವನಿ ಮೊಳಗಿಸುತ್ತಿದ್ದ ಎಚ್. ವಿಶ್ವನಾಥ್‌ ಅವರಿಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಿದ್ದವರ ಮೇಲೆ ಹರಿಹಾಯುತ್ತಿದ್ದ ಎಂ.ಪಿ. ರೇಣುಕಾಚಾರ್ಯ, ರಾಜೂಗೌಡ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

ಇಂತಹದೇ ಖಾತೆ ಬೇಕು ಎಂಬ ಷರತ್ತು ಒಡ್ಡಿದ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾರಕಿಹೊಳಿ ಕುಟುಂಬ ಈ ಬಾರಿ ಮಹತ್ವದ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿತ್ತು. ಬಾಲಚಂದ್ರ ಅವರನ್ನು ಸೇರಿಸಿಕೊಳ್ಳದೇ ಇರುವ ಮೂಲಕ, ಅಂತಹ ಹಟಕ್ಕೆಲ್ಲ ಮಣಿಯುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ರವಾನಿಸಿದ್ದಾರೆ.

ಹಿಂದಿನ ಸಾಲಿಗೆ ‘ಹೊಸ ತಲೆಮಾರು’

ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ನೇತೃತ್ವದ ಸಂಪುಟ ರಚನೆಯಾದಾಗ ಹೊಸ ತಲೆಮಾರಿಗೆ ನಾಯಕತ್ವ ನೀಡಬೇಕು ಎಂಬ ಕಾರಣಕ್ಕೆ ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ, ಕಿರಿಯರಿಗೆ ಬಡ್ತಿ ನೀಡಲಾಗಿತ್ತು. ಯಡಿಯೂರಪ್ಪ ಜತೆಗೂ ಚರ್ಚಿಸದೇ ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು.

ಬಿಜೆಪಿ ವರಿಷ್ಠರ ಈ ನಿಲುವಿನಿಂದಾಗಿ ಪಕ್ಷದಲ್ಲಿ ಹಿರಿಯರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ ಅವರೆಲ್ಲ ಕೆಳಹಂತಕ್ಕೆ ತಳ್ಳಲ್ಪಟ್ಟಿದ್ದರು. ಎರಡನೇ ತಲೆಮಾರಿನ ನಾಯಕತ್ವ ಬೆಳೆಸಲು ಈ ಕ್ರಮ ಎಂದು ಆ ಪಕ್ಷದ ವರಿಷ್ಠರು ಸಮರ್ಥನೆ ನೀಡಿದ್ದರು. ಆ ಪ್ರಯೋಗ ನಿರೀಕ್ಷಿತ ಫಲ ನೀಡದ ಕಾರಣಕ್ಕೆ ಈ ಬಾರಿ ಹಿರಿತನವನ್ನು ಆಧರಿಸಿಯೇ ಸಚಿವ ಸಂಪುಟದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ, ಸಂಪುಟದಿಂದ ಸವದಿ ಹೊರಹೋಗಿದ್ದರೆ, ಅಶ್ವತ್ಥನಾರಾಯಣ ಸಚಿವರ ಯಾದಿಯಲ್ಲಿ 10 ನೇ ಸ್ಥಾನಕ್ಕೆ ಹೋಗಿದ್ದಾರೆ. ಹಿರಿತನದ ಆಧಾರದಲ್ಲಿ ಕಾರಜೋಳ, ಈಶ್ವರಪ್ಪ, ಅಶೋಕ ಮೊದಲ ಮೂರು ಸ್ಥಾನಕ್ಕೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು