ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಅಮಿತ್ ಶಾ

ಚುನಾವಣೆ ನಾಯಕತ್ವದ ಬಗ್ಗೆ ಸಂದೇಶ ರವಾನಿಸಿದ ಬಿಜೆಪಿ ನಾಯಕ
Last Updated 2 ಸೆಪ್ಟೆಂಬರ್ 2021, 21:24 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವುದಾಗಿ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ದಾವಣಗೆರೆಯಲ್ಲಿ ಗಾಂಧಿ ಭವನ, ಪೊಲೀಸ್‌ ಪಬ್ಲಿಕ್‌ ವಸತಿ ಶಾಲೆ, ಪೊಲೀಸ್‌ ವಸತಿಗೃಹಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಶಾ, ‘ಆಡಳಿತದಲ್ಲಿ, ಸಾರ್ವಜನಿಕ ಜೀವನದಲ್ಲಿ ಬಸವರಾಜ ಬೊಮ್ಮಾಯಿ ಅಪಾರ ಅನುಭವ ಹೊಂದಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ ಬಗ್ಗೆ ಬಿಜೆಪಿಯಲ್ಲಿ ಒಳಗೊಳಗೇ ಅಸಮಾಧಾನಗೊಂಡಿರುವವರಿಗೆ ಶಾ ಅವರ ಈ ಮಾತುಗಳು ಪಕ್ಷದ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿವೆ ಎಂಬ ವಿಶ್ಲೇಷಣೆ ನಡೆದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮುಂದಿನ ಚುನಾವಣೆ ನಳಿನ್‌ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು.

ಬೊಮ್ಮಾಯಿ ಬೆನ್ನು ತಟ್ಟಿದ ಶಾ: ‘ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯ ಯುಗ ಆರಂಭವಾಯಿತು. ಹೊಸ ವ್ಯಕ್ತಿಗೆ ಜವಾಬ್ದಾರಿ ನೀಡಬೇಕು ಎಂದು ಯಡಿಯೂರಪ್ಪ ಸ್ವಯಂ ನಿರ್ಧಾರ ಕೈಗೊಂಡಿದ್ದರಿಂದ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹೊಣೆಗಾರಿಕೆ ನೀಡಲು ಬಿಜೆಪಿ ನಿರ್ಧರಿಸಿತು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ವಿಶೇಷವಾಗಿ ಹಳ್ಳಿಗಳ ಹಾಗೂ ರೈತರ ಅಭಿವೃದ್ಧಿಗಾಗಿ ಎಲ್ಲಾ ಬಗೆಯ ಕ್ರಮಗಳನ್ನೂ ಕೈಗೊಂಡಿದ್ದಾರೆ. ಅವರ ಸರ್ಕಾರದಲ್ಲಿ ಕೆಲಸ ಮಾಡಿರುವ ಹಾಗೂ ಸಾರ್ವಜನಿಕ ಜೀವನದಲ್ಲಿ ಅನುಭವ ಹೊಂದಿರುವ ಬೊಮ್ಮಾಯಿ ಅವರು ಕೂಡ ಉತ್ತಮವಾಗಿ ಕೆಲಸ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿವಿಐಪಿ ವ್ಯವಸ್ಥೆಯಲ್ಲಿ ಕೆಲವನ್ನು ಕೈಬಿಟ್ಟಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಲವು ಕ್ರಮ ಕೈಗೊಳ್ಳುವ ಮೂಲಕ ಅಧಿಕಾರ ಸ್ವೀಕರಿಸಿದ ಅಲ್ಪಾವಧಿಯಲ್ಲೇ ಬದಲಾವಣೆಗಳನ್ನು ತಂದಿದ್ದಾರೆ. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿರುವುದರಿಂದ ಬಿಜೆಪಿ ತನ್ನನ್ನು ತಾನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ ಎಂದು ಕರ್ನಾಟಕ ಸರ್ಕಾರವನ್ನು ಹತ್ತಿರದಿಂದ ನೋಡುತ್ತಿರುವ ದೆಹಲಿಯಲ್ಲಿರುವವರು ಹೇಳುತ್ತಿದ್ದಾರೆ. ಬೊಮ್ಮಾಯಿ ಉತ್ತಮ ಆಡಳಿತ ನೀಡುವ ಮೂಲಕ ದೇಶದ ವಿಕಾಸದಲ್ಲಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವನ್ನೂ ಮುಂಚೂಣಿಗೆ ತರಲಿ’ ಎಂದು ಅಮಿತ್‌ ಶಾ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT