ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ಖರೀದಿಯಲ್ಲಿ ₹ 100 ಕೋಟಿ ಅಕ್ರಮ: ಬಸವರಾಜ ರಾಯರಡ್ಡಿ ಆರೋಪ

Last Updated 11 ಮೇ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲು ಲ್ಯಾಪ್‌ಟಾಪ್‌ ಖರೀದಿಯಲ್ಲಿ ₹ 100 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಶಾಮೀಲಾಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರಡ್ಡಿ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದೆ. ಆಗ ತಲಾ ₹ 14,490ರ ದರದಲ್ಲಿ 38,000 ಲ್ಯಾಪ್‌ಟಾಪ್‌ ಖರೀದಿಸಿದ್ದೆವು. ನಂತರ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ. ದೇವೇಗೌಡ ಅದೇ ಲ್ಯಾಪ್‌ಟಾಪ್‌ ಅನ್ನು ತಲಾ 28,320ರ ದರದಲ್ಲಿ ಖರೀದಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಆಗ ಖರೀದಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಬಳಿಕ ಅದೇ ದರದಲ್ಲಿ ಖರೀದಿಸಲಾಗಿದೆ’ ಎಂದು ದೂರಿದರು.

‘ಹಿಂದೆ ಖರೀದಿಸಿದ್ದ ಮಾದರಿಯ ಲ್ಯಾಪ್‌ಟಾಪ್‌ ಅನ್ನೇ ದುಪ್ಪಟ್ಟು ದರಕ್ಕೆ ಖರೀದಿಸಲು ಮುಂದಾಗಿರುವ ಕುರಿತು ಅಶ್ವತ್ಥ ನಾರಾಯಣ ಅವರಿಗೆ ಮಾಹಿತಿ ನೀಡಿದ್ದೆವು. ಅವರು ಅಕ್ರಮ ತಡೆಯಲಿಲ್ಲ. ₹ 159.26 ಕೋಟಿ ವೆಚ್ಚವಾಗುತ್ತಿದ್ದ ಯೋಜನೆಗೆ ₹ 311.28 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ₹ 100 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ’ ಎಂದರು.

ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಮಾತನಾಡಿ, ‘ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಟೆಂಡರ್‌ನಲ್ಲೂ ಅಕ್ರಮ ನಡೆದಿದೆ. ಸ್ಮಾರ್ಟ್‌ ತರಗತಿ ಕೊಠಡಿಗಳ ನಿರ್ಮಾಣಕ್ಕೆ ₹ 200 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಕೂಡ ಭಾಗಿಯಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳ ಕುರಿತು ಲೋಕಾಯುಕ್ತರಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಖರೀದಿ’

ಬೆಂಗಳೂರು: ತಲಾ ₹ 28,320ರ ದರದಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ನಿರ್ಧಾರ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ನಡೆದಿತ್ತು. ಆಗ ನಡೆದಿರಬಹುದಾದ ಅಕ್ರಮಗಳನ್ನು ಬಿಜೆಪಿ ಸರ್ಕಾರದ ತಲೆಗೆ ಕಟ್ಟಲು ಬಸವರಾಜ ರಾಯರಡ್ಡಿ ಯತ್ನಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.

ರಾಯರಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಸಿದ್ದರಾಮಯ್ಯ ಸರ್ಕಾರದಲ್ಲಿ ಇವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ನಂತರ ಬಂದ ಸಮ್ಮಿಶ್ರ ಸರ್ಕಾರ ಲ್ಯಾಪ್‌ಟಾಪ್‌ ಖರೀದಿಗೆ ದರ ನಿಗದಿ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂರೈಕೆ ಮತ್ತು ವಿತರಣೆ ಮಾತ್ರ ಆಗಿದೆ. ಕೋತಿ ತಾನು ಮೊಸರು ತಿಂದು ಮೇಕೆಯ ಗಡ್ಡಕ್ಕೆ ಒರೆಸಿದ ರೀತಿಯಲ್ಲಿ ಈ ವ್ಯಕ್ತಿ ಆರೋಪ ಮಾಡಿದ್ದಾರೆ’ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ ಕೆಸರೆರಚುವ ಭರದಲ್ಲಿ ರಾಯರಡ್ಡಿ ತಮ್ಮ ಪಕ್ಷ ಎಸಗಿರಬಹುದಾದ ಅಕ್ರಮಗಳನ್ನೇ ಬಯಲು ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲ್ಯಾಪ್‌ಟಾಪ್‌ ಬದಲಿಗೆ ಟ್ಯಾಬ್‌ ವಿತರಿಸಲಾಗಿದೆ. ಅಲ್ಲಿಯೂ ಅಕ್ರಮ ನಡೆದಿದೆ ಎಂಬರ್ಥದಲ್ಲಿ ರಾಯರಡ್ಡಿ ಆರೋಪಿಸಿರುವುದು ಉಡಾಫೆಯ ಪರಮಾವಧಿ ಎಂದು ಹೇಳಿದ್ದಾರೆ.

‘ರಾಯರಡ್ಡಿ ಅವರಿಗೆ ನೈತಿಕ ಪ್ರಜ್ಞೆ ಇಲ್ಲ. ಅವರಿರುವ ಕಾಂಗ್ರೆಸ್ಸಿನ ನರನಾಡಿಗಳಲ್ಲೆಲ್ಲ ಭ್ರಷ್ಟಾಚಾರ ಹರಿಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ಸ್ವಾಯತ್ತತೆ ಎಲ್ಲವನ್ನೂ ತರಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT