ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ತು: ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

Last Updated 21 ಡಿಸೆಂಬರ್ 2022, 21:00 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿಯಿಂದ ಪರಿಷತ್ತಿಗೆ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ, ಮೂರನೇ ಬಾರಿ ಸಭಾಪತಿಯಾಗಿ ಆಯ್ಕೆಯಾದರು.

ಸಭಾಪತಿ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಗೆ ಹೊರಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಂಗಾಮಿ ಸಭಾಪತಿಯಾಗಿದ್ದ ರಘುನಾಥರಾವ್ ಮಲ್ಕಾಪುರೆ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರಲ್ಲದೇ, ಹೊರಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿರುವುದನ್ನು ಘೋಷಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ, ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹಾಗೂ ಜೆಡಿಎಸ್‌ನ ಎಸ್.ಎಲ್‌. ಭೋಜೇಗೌಡ ಅವರು ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರು.

ಹೊರಟ್ಟಿಯವರನ್ನು ಅಭಿನಂದಿಸಿ ಮಾತನಾಡಿದ ಎಲ್ಲರೂ ಅವರ ಪಕ್ಷಾತೀತ ನಿಲುವು, ಸುದೀರ್ಘ ಅವಧಿಯ ರಾಜಕೀಯ ಜೀವನದ
ವೈಶಿಷ್ಟ್ಯವನ್ನು ಕೊಂಡಾಡಿದರು.

1946ರಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕಲಗುಂದಿಯಲ್ಲಿ ಜನಿಸಿದ ಹೊರಟ್ಟಿ ಹುಬ್ಬಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದಾರೆ. ಈಗ ಅವರಿಗೆ 76 ವರ್ಷ.

1980ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಪರಿಷತ್ ಪ್ರವೇಶಿಸಿದ ಹೊರಟ್ಟಿ ಅವರು ಸತತ ಎಂಟು ಬಾರಿ ಗೆಲುವು ಸಾಧಿಸಿದ್ದಾರೆ. ಜನತಾ ಪಕ್ಷ, ಜನತಾದಳ, ಲೋಕಶಕ್ತಿ, ಜೆಡಿಎಸ್‌ನಿಂದ ಗೆದ್ದಿದ್ದಾರೆ. ಎಂಟು ತಿಂಗಳ ಹಿಂದೆ ಪರಿಷತ್ತಿಗೆ ನಡೆದ ಚುನಾವಣೆ ವೇಳೆ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದರು.

ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌, ಜೆಡಿಎಸ್ ಸರ್ಕಾರದಲ್ಲಿ ಹಾಗೂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಬಿಜೆಪಿ ಸರ್ಕಾರಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕಾನೂನು ಮತ್ತು ಸಂಸದೀಯ ಹಾಗೂ ಗ್ರಾಮೀಣಾಭಿವೃದ್ಧಿಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಸಭಾಪತಿ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸದನಕ್ಕೆ ತಿಳಿಸಿದರು.

ವಿರೋಧ ಪಕ್ಷದ ಸದಸ್ಯರು ಮೇಜು ತಟ್ಟಿ ಸಭಾಪತಿ ನಿಲುವು ಸ್ವಾಗತಿಸಿದರು. ಸಭಾಪತಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸಭಾಪತಿಯಾದವರು ಪಕ್ಷಾತೀತವಾಗಿ ಕೆಲಸ ಮಾಡುವ ಪರಂಪರೆ ಇದೆ. ಹೊರಟ್ಟಿಯವರು ಅದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದರು.

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು, ಹೊರಟ್ಟಿಯವರು ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಯೇ ಬಂದಿದ್ದಾರೆ ಎಂಬ ವಿಶ್ವಾಸವಿದೆ. ಅವರು ಪಕ್ಷಾತೀತವಾಗಿ ನಡೆದುಕೊಳ್ಳುವ ಸದನದ ಪರಂಪರೆಯನ್ನು ಮುಂದುವರಿಸಲಿ ಎಂದು ಆಶಿಸಿದ್ದರು.

ಹಿರಿತನಕ್ಕೆ ಮನ್ನಣೆ: ಬೊಮ್ಮಾಯಿ

ಹೊರಟ್ಟಿಯವರ ಹಿರಿತನ, ಅನುಭವಕ್ಕೆ ಮನ್ನಣೆ ಸಿಕ್ಕಿದೆ. ಸರ್ವಾನುಮತದ ಆಯ್ಕೆಯು ಈ ಸದನದ ಗೌರವವನ್ನು ಹೆಚ್ಚಿಸಿದೆ. 1980ರಿಂದ ಸದನದ ಸದಸ್ಯರಾಗಿದ್ದಾರೆ. ಶಿಕ್ಷಕರಾಗಿ, ಶಿಕ್ಷಕ ಸಮುದಾಯದ ಸಂಘಟನೆಯಲ್ಲಿ ಒಳ್ಳೆಯ ಕೆಲ ಮಾಡಿರುವ ಅವರು, ಕಾರ್ಯಪ್ರವೃತ್ತಿ, ಕರ್ತವ್ಯಪ್ರಜ್ಞೆಯಿಂದಲೇ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. 42 ವರ್ಷಗಳ ಸುದೀರ್ಘ ರಾಜಕೀಯ ಬದುಕು ಆದರ್ಶಪ್ರಾಯವಾಗಿದೆ. ಶಿಕ್ಷಣ ಸಚಿವರಾಗಿ ಮಾಡಿದ ಕೆಲಸ ಶಿಕ್ಷಣ ಕ್ಷೇತ್ರಕ್ಕೆ ಸ್ಥಿರತೆಯನ್ನು ತಂದುಕೊಟ್ಟಿದೆ. ಕಾನೂನು ಸಚಿವರಾಗಿದ್ದಾಗ ಹುಬ್ಬಳ್ಳಿಗೆ ಕಾನೂನು ವಿಶ್ವವಿದ್ಯಾಲಯ ತಂದಿದ್ದಾರೆ. ಬೆಳಗಾವಿಅಧಿವೇಶನದಲ್ಲಿ ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT