ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 680 ಕೋಟಿ ಅಕ್ರಮ ಪಾವತಿ: ಬಿಬಿಎಂಪಿ ಲೆಕ್ಕಾಧಿಕಾರಿ ಗೋವಿಂದರಾಜು ಅಕ್ರಮ

ಬಿಬಿಎಂಪಿ ಲೆಕ್ಕಾಧಿಕಾರಿ ಗೋವಿಂದರಾಜು ವಿರುದ್ಧದ ಆರೋಪ ಪ್ರಾಥಮಿಕ ತನಿಖೆಯಲ್ಲಿ ದೃಢ
Last Updated 19 ಅಕ್ಟೋಬರ್ 2020, 1:55 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್‌ ಪಾವತಿಯ ವೇಳೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಗೋವಿಂದರಾಜು ಅವರು ನಿಯಮಬಾಹಿರವಾಗಿ ₹ 680 ಕೋಟಿ ಪಾವತಿ ಮಾಡಿರುವುದು ಪತ್ತೆಯಾಗಿದೆ.

ಜ್ಯೇಷ್ಠತೆ ನಿಯಮಗಳನ್ನು ಉಲ್ಲಂಘಿಸಿ ಶೇ 2ರಿಂದ ಶೇ 5ರಷ್ಟು ಕಮಿಷನ್‌ ಪಡೆದು ಗೋವಿಂದರಾಜು ಬಿಲ್‌ ಪಾವತಿ ಮಾಡುತ್ತಿದ್ದಾರೆ ಎಂದು ಹಲವು ಗುತ್ತಿಗೆದಾರರು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಕಾರಣದಿಂದ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಮಂಜುನಾಥ ಪ್ರಸಾದ್‌ ಅವರು ಅ. 2ರಂದು ಬೀಗಮುದ್ರೆ ಹಾಕಿಸಿದ್ದರು. ಗೋವಿಂದರಾಜು ಅವರನ್ನು ಬಿಬಿಎಂಪಿ ಸೇವೆಯಿಂದ ಅಂದೇ ಬಿಡುಗಡೆ ಮಾಡಿ ಮಾತೃ ಇಲಾಖೆಯಾದ ಹಣಕಾಸು ಇಲಾಖೆಗೆ ಕಳುಹಿಸಲಾಗಿತ್ತು.

ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿರುವ ಆಯುಕ್ತರು, 43 ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಜತೆಗೆ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌ ಅವರಿಗೆ ಪತ್ರ ಬರೆದಿರುವ ಆಯುಕ್ತರು, ಇಲಾಖಾ ವಿಚಾರಣೆ ಕಾಯ್ದಿರಿಸಿ ಗೋವಿಂದರಾಜು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಕೋರಿದ್ದಾರೆ. ಬಿಲ್‌ ಪಾವತಿಯಲ್ಲಿ ಅಂದಾಜು ₹ 30 ಕೋಟಿಯಷ್ಟು ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ತಿಳಿಸಿವೆ.

ಪಾಲಿಕೆಯಲ್ಲಿ ಹಣಕಾಸು ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಹಾಗೂ ಜ್ಯೇಷ್ಠತೆ ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ (ಐಎಫ್‌ಎಂಎಸ್‌) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ‘ಐಎಫ್‌ಎಂಎಸ್‌ ತಂತ್ರಾಂಶದ ಮೂಲಕ ಪಾವತಿ ಮಾಡುವಾಗ ಆಯುಕ್ತರ ಅನುಮೋದನೆ ಪಡೆಯಬೇಕು. ಮೊದಲು ಕಾಮಗಾರಿ ಪೂರ್ಣಗೊಳಿಸಿದವರಿಗೆ ಆದ್ಯತೆ ಮೇರೆಗೆ ಬಿಲ್ ಪಾವತಿ ಮಾಡಬೇಕು’ ಎಂದು ಆಯುಕ್ತರು ಈ ಹಿಂದೆ ಆದೇಶ ಹೊರಡಿಸಿದ್ದರು. ಆದರೆ, ಗೋವಿಂದರಾಜು ಅವರು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬಿಲ್‌ ಪಾವತಿ ಮಾಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ವಾರ್ಡ್‌ ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ಪ್ರತ್ಯೇಕ (ಎಸ್ಕ್ರೊ) ಖಾತೆ ತೆರೆಯಲಾಗಿದೆ. ಐಎಫ್‌ಎಂಎಸ್‌ ತಂತ್ರಾಶದಲ್ಲೂ ಪ್ರತ್ಯೇಕ ವಿಭಾಗ ಸೃಜಿಸಿ ಜ್ಯೇಷ್ಠತೆ ಮೇಲೆ ಬಿಲ್‌ ಪಾವತಿಗೆ ಅನುವು ಮಾಡಿಕೊಡಲಾಗಿದೆ. ಸಾಮಾನ್ಯ ಜ್ಯೇಷ್ಠತೆಯಡಿ 16ರಿಂದ 24 ತಿಂಗಳ ಅವಧಿಯಲ್ಲಿ ಬಿಲ್‌ ಪಾವತಿ ಮಾಡಲಾಗುತ್ತಿದೆ. ಆದರೆ, ಮುಖ್ಯ ಲೆಕ್ಕಾಧಿಕಾರಿ ಸಾಮಾನ್ಯ ಜ್ಯೇಷ್ಠತೆ ಉಲ್ಲಂಘಿಸಿ ಎಸ್ಕ್ರೊ ಖಾತೆ ಮೂಲಕ ₹ 21.38 ಕೋಟಿ ಪಾವತಿಸಿದ್ದಾರೆ.

ಪಾಲಿಕೆ ಅನುದಾನದ ₹ 133.59 ಕೋಟಿ ಕಾಮಗಾರಿ ಬಿಲ್‌ಗಳನ್ನು ರಾಜ್ಯ ಹಣಕಾಸು ಆಯೋಗದ ಅನುದಾನದ ಮುಕ್ತ ನಿಧಿಯ ಶೀರ್ಷಿಕೆಯಡಿ ಅಕ್ರಮವಾಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ಶೀರ್ಷಿಕೆಯಡಿ ₹ 12.26 ಕೋಟಿಯನ್ನು ಅಕ್ರಮವಾಗಿ ಪಾವತಿಸಿದ್ದಾರೆ. ಜಿಎಸ್‌ಟಿ ಬಗ್ಗೆ ತಪ್ಪು ಅಭಿಪ್ರಾಯ ನೀಡಿದ್ದರಿಂದ ರಾಜಕಾಲುವೆ ಕಾಮಗಾರಿಯಲ್ಲಿ ಪಾಲಿಕೆಗೆ ₹ 4.39 ಕೋಟಿ ಹೆಚ್ಚುವರಿ ಹೊರೆಯಾಗಿದೆ ಎಂದು ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT