ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ದಾಳಿ ನಡೆಸಲು ಅಷ್ಟೊಂದು ಕಲ್ಲು, ಪೆಟ್ರೋಲ್‌ ಎಲ್ಲಿಂದ ಬಂತು: ಕಟೀಲ್‌

ಬೆಂಗಳೂರಿನ ಘಟನೆ ರಾಜಕೀಯ ಪ್ರೇರಿತ
Last Updated 12 ಆಗಸ್ಟ್ 2020, 7:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿಂದೆ ರಾಜಕೀಯ ಪಕ್ಷಗಳ ಕುತಂತ್ರವಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಪಕ್ಷ ಸಂಘಟನೆಯ ಪ್ರವಾಸದಲ್ಲಿ ತೊಡಗಿರುವ ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಕೋವಿಡ್ ನಿಯಂತ್ರಣ ಹಾಗೂ ನೆರೆಯಿಂದ ಸಂಕಷ್ಟದಲ್ಲಿರುವ ಜನರ ರಕ್ಷಣೆ ವಿಚಾರದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲೆಡೆಯೂ ಶಾಂತಿ ನೆಲೆಸಿದೆ; ಇದನ್ನು ಸಹಿಸದೆ ರಾಜಕೀಯ ಪಕ್ಷಗಳು ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಎರಡು ದಿನ ಮೊದಲು ಕಾರ್ಯಕ್ರಮದಲ್ಲಿ ಗದ್ದಲವಾದರೆ ಬೆಂಕಿ ಬೀಳಬಹುದು ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಹೇಳಿದ್ದರು. ಅಲ್ಲಿ ಅದೇ ರೀತಿ ಆಯಿತು’ ಎಂದರು. ನಳೀನ್‌ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ.

ಬೆಂಗಳೂರಿನ ಘಟನೆಯನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ರಾಜ್ಯದಲ್ಲಿ ವಿನಾಕಾರಣ ದಾಂದಲೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ದಿಢೀರನೆ ಹಿಂಸಾಚಾರ ನಡೆಸಲು ದುಷ್ಕರ್ಮಿಗಳಿಗೆ ಅಷ್ಟೊಂದು ಕಲ್ಲುಗಳು ಹಾಗೂ ಪೆಟ್ರೋಲ್ ಹೇಗೆ ಸಿಕ್ಕಿತು? ಎಂದು ಪ್ರಶ್ನಿಸಿದರು. ಇವೆಲ್ಲದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಬೇಕು ಎಂದೂ ಆಗ್ರಹಿಸಿದರು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಮತ, ಧರ್ಮಗಳ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಎಂದರು.

14ರಂದು ಒಂಬತ್ತು ಕಟ್ಟಡಗಳಿಗೆ ಶಿಲಾನ್ಯಾಸ

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷ ಸ್ವಂತ ಕಟ್ಟಡ ಹೊಂದಬೇಕು ಎಂದು ಅಮಿತ್‌ ಶಾ ಅವರು ಅಧ್ಯಕ್ಷರಾಗಿದ್ದಾಗ ಹೇಳಿದ್ದರು. ಅದರಂತೆ ರಾಜ್ಯದ ಎಲ್ಲ ಕಡೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಆ. 14ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವೆಬಿನಾರ್ ಮೂಲಕ ತಿಪಟೂರಿನಲ್ಲಿ ಮಂಡಲ ಕಚೇರಿ ಮತ್ತು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕಟೀಲ್‌ ತಿಳಿಸಿದರು.

ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಆ. 22ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಆದ್ದರಿಂದ ಮಂಡಲದಿಂದ ಪಕ್ಷ ಸಂಘಟನೆಗೆ ಒತ್ತು ಕೊಡಲಾಗಿದೆ. ಕೋವಿಡ್‌ ಹಾಗೂ ನೆರೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರವಷ್ಟೇ ಅಲ್ಲ; ನಮ್ಮ ಪಕ್ಷದ ಕಾರ್ಯಕರ್ತರು ಕೂಡ ನೆರವಾಗಿದ್ದಾರೆ. ಹೋಂ ಕ್ವಾರಂಟೈನ್‌ ಇದ್ದ ಕುಟುಂಬಕ್ಕೆ ಕಾರ್ಯಕರ್ತರು ಸಹಾಯ ಮಾಡಿದ್ದಾರೆ ಎಂದರು.

ಹೆಗಡೆ ಅವರಿಂದ ವರದಿ ಕೇಳುವೆ

ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳು ತುಂಬಿದ್ದಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್‌ ‘ಅನಂತಕುಮಾರ್ ಏನು ಹೇಳಿದ್ದಾರೆ ಎಂಬುದು ಸರಿಯಾಗಿ ಗೊತ್ತಿಲ್ಲ. ಪೂರ್ಣ ಮಾಹಿತಿ ತಿಳಿದುಕೊಳ್ಳುವೆ; ಅವರಿಂದ ವಿವರಣೆ ಕೇಳುವೆ’ ಎಂದರು. ಮಥುರಾ ಹಾಗೂ ಕಾಶಿಯಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಈಶ್ವರಪ್ಪ ಹೇಳಿಕೆ ಕುರಿತು ‘ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ, ಆ ಹೇಳಿಕೆಗೂ ಸಂಬಂಧವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT