ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ಘಾಟಿ ಮಾರ್ಗದಲ್ಲಿ ಸಂಚಾರ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

ಸಾಲುಗಟ್ಟಿ ನಿಂತ ವಾಹನಗಳು
Last Updated 17 ಜುಲೈ 2022, 3:27 IST
ಅಕ್ಷರ ಗಾತ್ರ

ಹಾಸನ: ಬೆಂಗಳೂರು– ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆ ಮತ್ತೊಮ್ಮೆ ಬಂದ್‌ ಆಗಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭೂಕುಸಿತ ಉಂಟಾಗಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಕರಾವಳಿ ಹಾಗೂ ರಾಜಧಾನಿಗೆ ಇದ್ದ ಸಂಪರ್ಕ ಕೊಂಡಿಕಳಚಿದೆ.

ಪ್ರಮುಖವಾಗಿ ವಾಣಿಜ್ಯ ವಹಿವಾಟು ಹಾಗೂ ಪ್ರಯಾಣಿಕ ಸಾರಿಗೆಗೆ ಸಮಸ್ಯೆ ಉಂಟಾಗಿದೆ. ಸರಕುಗಳನ್ನು ಹೊತ್ತು ಮಂಗಳೂರಿನ ಎನ್‌ಎಂಪಿಟಿಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿಗಳು ನಗರದ ಹೊರವಲಯ ದೇವರಾಯಪಟ್ಟಣದ ಬಳಿ ಸಾಲುಗಟ್ಟಿ ನಿಂತಿವೆ.

ಲಘು ವಾಹನಗಳಿಗೆ ಪರ್ಯಾಯ ಮಾರ್ಗ ತೋರಿಸಿದ್ದರೂ, ಭಾರಿ ಸರಕು ಸಾಗಣೆ ವಾಹನಗಳಿಗೆ ಯಾವ ಮಾರ್ಗದಲ್ಲಿ ಸಂಚರಿಸಬೇಕು ಎನ್ನುವ ಮಾಹಿತಿಯೇ ಇಲ್ಲ. ಎರಡು ದಿನಗಳಿಂದ ನಗರದಲ್ಲಿಯೇ ನಿಂತಿರುವ ವಾಹನಗಳ ಚಾಲಕರು, ಮುಂದೇನು ಮಾಡಬೇಕು ಎಂದು ಚಿಂತೆಯಲ್ಲಿದ್ದಾರೆ.

‘ಹೆದ್ದಾರಿ ಬಂದ್‌ ಆಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಚೆನ್ನೈನಿಂದ ಮಂಗಳೂರಿಗೆ ಹೊರಟಿದ್ದು, ಇದೀಗ ಇಲ್ಲಿ ತಡೆದು ನಿಲ್ಲಿಸಲಾಗಿದೆ. ಯಾವ ದಾರಿಯಲ್ಲಿ ಹೋಗಬೇಕು ಎಂಬುದೂ ಗೊತ್ತಿಲ್ಲ. ಹೆದ್ದಾರಿ ಬಂದ್‌ ಆಗಿರುವ ವಿಷಯ ಮೊದಲೇ ತಿಳಿದಿದ್ದರೆ, ಲಾರಿಗೆ ಸರಕನ್ನೇ ತುಂಬುತ್ತಿರಲಿಲ್ಲ’ ಎಂದು ಮಂಗಳೂರಿನ ಲಾರಿ ಚಾಲಕ ರಫೀಕ್ ಹೇಳಿದರು.

‘ಶುಕ್ರವಾರ ಮಧ್ಯಾಹ್ನದಿಂದ ಇಲ್ಲಿ ಲಾರಿಗಳನ್ನು ನಿಲ್ಲಿಸಲಾಗಿದೆ. ದೋಣಿಗಲ್ ಬಳಿ ಭೂಕುಸಿತ ಆಗಿದ್ದರಿಂದ ಸಂಚಾರ ಬಂದ್‌ ಆಗಿದೆ. ಇತ್ತ ಕುಶಾಲನಗರದ ಮೂಲಕ ಹೋಗಬೇಕಾದರೂ, ಅಲ್ಲಿಯೂ ಸಂಚಾರ ನಿಷೇಧವಿದೆ. ಏನು ಮಾಡುವುದು ಎಂಬುದು ತಿಳಿಯುತ್ತಿಲ್ಲ’ ಎಂದು ತಮಿಳುನಾಡಿನ ಚಾಲಕ ಸೆಲ್ವಂ ಹೇಳಿದರು.

ಅಪಾರ ಪ್ರಮಾಣದ ಸರಕುಗಳನ್ನು ಹೊತ್ತು ನಿಂತಿರುವ ಲಾರಿಗಳಲ್ಲಿ ಆಹಾರ ಪದಾರ್ಥಗಳೂ ಇವೆ. ಹಾಗಾಗಿ ಅವುಗಳನ್ನು ಬೇಗನೆ ನಿಗದಿತ ಸ್ಥಳಕ್ಕೆ ತಲುಪಿಸುವ ಚಿಂತೆ ಲಾರಿ ಚಾಲಕರದ್ದು. ಒಂದು ವೇಳೆ ತಡವಾದರೆ, ಆ ವಸ್ತುಗಳೆಲ್ಲ ಹಾಳಾಗುತ್ತವೆ. ಅದರ ನಷ್ಟವನ್ನೂ ಲಾರಿಯವರೇ ಭರಿಸಬೇಕು ಎನ್ನುತ್ತಾರೆ ಲಾರಿ ಚಾಲಕರು.

ಬಸ್ ಸಂಚಾರಕ್ಕೂ ಅಡಚಣೆ: ಬೆಂಗಳೂರಿನಿಂದ ಹಾಸನದ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ಗಳು ಈಗ ಬೇರೆ ಮಾರ್ಗದಲ್ಲಿ ಸಂಚರಿಸಬೇಕಿದೆ. ಎಲ್ಲ ರೀತಿಯ ಲಘು ವಾಹನಗಳಿಗೆ ಹಾಸನದಿಂದ ಬೇಲೂರು– ಮೂಡಿಗೆರೆ– ಚಾರ್ಮಾಡಿ ಘಾಟಿ, ಬೆಳ್ತಂಗಡಿ ಮೂಲಕ ಮಂಗಳೂರು ಅಥವಾ ಹಾಸನದಿಂದ ಅರಕಲಗೂಡು– ಕುಶಾಲನಗರ– ಸಂಪಾಜೆ ಮೂಲಕ ಮಂಗಳೂರಿಗೆ ಸಂಚರಿಸಬೇಕಾಗಿದೆ.

‘ಇದು ಪ್ರಯಾಸಕರ ಪ್ರಯಾಣವಾಗಿದ್ದು, ಹಣ ನೀಡಿಯೂ ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿದೆ. ಹೀಗಾದರೆ, ಮಂಗಳೂರಿಗೆ ಹೋಗುವುದನ್ನೇ ಬಿಡಬೇಕಾಗುತ್ತದೆ’ ಎಂದು ನಗರದ ವರ್ತಕ ಹಿಮೇಶ್‌ ಜೈನ್ ಅಲವತ್ತುಕೊಂಡರು.

‘ಕರ್ನಾಟಕ ಸಾರಿಗೆ ಬಸ್‌ಗಳು ಚಾರ್ಮಾಡಿ ಮೂಲಕ ಮಂಗಳೂರಿಗೆ ಹೋಗುತ್ತಿವೆ. ಮಲ್ಟಿ ಎಕ್ಸೆಲ್‌, ವೊಲ್ವೊ ಬಸ್‌ಗಳು ಕುಶಾಲನಗರ, ಸಂಪಾಜೆ ಮೂಲಕ ಮಂಗಳೂರಿಗೆ ಹೋಗುತ್ತಿವೆ. ಬೆಂಗಳೂರಿನಿಂದ ಬರುವ ಕೆಲ ಬಸ್‌ಗಳು ಹಾಸನಕ್ಕೆ ಬರದೇ ಚನ್ನರಾಯಪಟ್ಟಣದಿಂದಲೇ ಕುಶಾಲನಗರ ಮಾರ್ಗದಲ್ಲಿ ಸಂಚರಿಸುತ್ತಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ತಿಳಿಸಿದರು.

ಯಾರು ಹೊಣೆ: ಜನರ ಪ್ರಶ್ನೆ
ಪ್ರತಿ ವರ್ಷ ದೋಣಿಗಲ್‌ನಲ್ಲಿ ಇದೇ ಸ್ಥಿತಿ ಮರುಕಳಿಸುತ್ತಿದೆ. ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ಶಾಶ್ವತ ಪರಿಹಾರ ರೂಪಿಸಲು ಮುಂದಾಗುತ್ತಿಲ್ಲ. ಇದೀಗ ಮತ್ತೊಮ್ಮೆ ಸಂಚಾರ ಬಂದ್‌ ಆಗಿದೆ. ಇದರಿಂದ ಉಂಟಾಗುತ್ತಿರುವ ನಷ್ಟಕ್ಕೆ ಯಾರು ಹೊಣೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

‘ಕಳಪೆ ಕಾಮಗಾರಿ, ನಿಧಾನಗತಿಯಿಂದಲೇ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರಕ್ಕೆ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಹಿಡಿತವಿಲ್ಲ. ಕಮಿಷನ್‌ ದಂಧೆಯಿಂದಾಗಿ ಶಿರಾಡಿ ರಸ್ತೆಗೆ ದುಸ್ಥಿತಿ ಬಂದಿದೆ. ಸೌಕರ್ಯ ಒದಗಿಸದ ಜನಪ್ರತಿನಿಧಿಗಳು ಯಾವ ಮುಖ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೆದ್ದಾರಿಯನ್ನು ಒಂದು ಗಂಟೆ ಬಂದ್‌ ಮಾಡಿದರೆ, ಪ್ರಕರಣ ದಾಖಲಿಸಲಾಗುತ್ತಿದೆ. ಪ್ರತಿ ವರ್ಷ ತಿಂಗಳುಗಟ್ಟಲೆ ಹೆದ್ದಾರಿ ಬಂದ್ ಆಗುತ್ತಿದೆ. ಅದಕ್ಕೆ ಕಾರಣರಾದವರ ಮೇಲೂ ಪ್ರಕರಣ ದಾಖಲಿಸಬೇಕು. ಅವರಿಂದಲೇ ನಷ್ಟ ವಸೂಲಿ ಮಾಡಬೇಕು’ ಎಂದು ಕಾಫಿ ಬೆಳೆಗಾರ ವಿಜಿತ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT