ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಬೆಂಗಳೂರಿಗೆ ಉಜ್ವಲ ಅವಕಾಶ: ಮುಸ್ತಫಾ

ಬೆಂಗಳೂರು ತಂತ್ರಜ್ಞಾನ ಶೃಂಗ
Last Updated 20 ನವೆಂಬರ್ 2021, 7:46 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳು (ಇ.ವಿ.) ಭವಿಷ್ಯದ ಆಯ್ಕೆಯಾಗಿದ್ದು, ಅದಕ್ಕೆ ಅಗತ್ಯವಿರುವ ಹಾರ್ಡ್‌ವೇರ್ ಪೂರೈಕೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಒತ್ತು ಕೊಡಬೇಕಿದೆ. ಬೆಂಗಳೂರಿಗೆ ಈ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳ ತಾಣವಾಗುವ ಎಲ್ಲ ಸಾಮರ್ಥ್ಯವೂ ಇದೆ ಎಂದು ಮೆಹೆರ್ ಎನರ್ಜೀಸ್ ವೆಂಚರ್ಸ್ ಕಂಪನಿಯ ಸಿಇಒ ಮುಸ್ತಫಾ ವಾಜಿದ್ ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಶುಕ್ರವಾರ ವರ್ಚುಯಲ್ ಆಗಿ ನಡೆದ ‘ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ಉದ್ಯಮಿಗಳಿಗೆ ಇರುವ ಅವಕಾಶಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಸಾರಿಗೆ ವಲಯವು ಪರಿಸರಸ್ನೇಹಿಯಾಗಿ ಸುಸ್ಥಿರಗೊಳ್ಳಬೇಕಾಗಿದೆ. ಜಾಗತಿಕ ರಾಜಕಾರಣದಿಂದಾಗಿ ಚೀನಾ ಒಂದನ್ನು ಬಿಟ್ಟರೆ ಪ್ರಪಂಚದ ಉಳಿದ ಭಾಗಗಳಲ್ಲಿ ಪೂರಕ ವಾತಾವರಣವಿದ್ದು, ದೇಶವು ಈ ಅವಕಾಶವನ್ನು ಬಾಚಿಕೊಳ್ಳಬೇಕು’ ಎಂದರು.

ಈಗಾಗಲೇ ಜನರ ಮನೋಭಾವ ಇ.ವಿ.ವಾಹನಗಳ ಪರವಾಗಿ ಬದಲಾಗಿದೆ. ಈ ವಲಯವು ದೇಶದಲ್ಲಿ 2030ರ ವೇಳೆಗೆ 1500 ಕೋಟಿ ಡಾಲರ್ ವಹಿವಾಟಿನ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದ್ದು, ಐಟಿ ನಗರವಾಗಿರುವ ಬೆಂಗಳೂರು ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ತಾಣವಾಗುವ ಉಜ್ವಲ ಅವಕಾಶವಿದೆ ಎಂದು ಹೇಳಿದರು.

ಕೇಂದ್ರ ಸರಕಾರವು ಹೇಗೆ ಸಮರ್ಥ ಪರಿಸರಸ್ನೇಹಿ ಜಲಜನಕ ನೀತಿಯನ್ನು ರೂಪಿಸಿದೆಯೋ ಹಾಗೆಯೇ ಇ.ವಿ.ಗೆ ಬೇಕಾಗಿರುವ ಹಾರ್ಡ್‌ವೇರ್ ಸಮಸ್ಯೆಯ ನಿವಾರಣೆಯನ್ನೂ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ದೇಶದ ಹೈಡ್ರೋಜನ್ ನೀತಿಯನ್ನು ಬಳಸಿಕೊಂಡು, ಪೂರ್ವ ಕರಾವಳಿಯಲ್ಲಿ ಜಲಜನಕ ಉತ್ಪಾದನೆಯ ಸ್ಥಾವರಗಳನ್ನು ಸ್ಥಾಪಿಸಿದರೆ, ಆಗ್ನೇಯ ಏಷ್ಯಾದ ದೇಶಗಳಿಗೆಲ್ಲ ನಾವು ಅದನ್ನು ರಫ್ತು ಮಾಡಬಹುದು ಎಂದು ಮುಸ್ತಫಾ ನುಡಿದರು.

ಬೌನ್ಸ್ ಕಂಪನಿಯ ಸ್ಥಾಪಕ ವಿವೇಕಾನಂದ ಹಲ್ಲೇಕೆರೆ ಮಾತನಾಡಿ, ಇನ್ನು ಕೆಲವೇ ವರ್ಷಗಳಲ್ಲಿ 2 ಕೋಟಿ ವಿದ್ಯುಚ್ಚಾಲಿತ ವಾಹನಗಳು ರಸ್ತೆಯ ಮೇಲಿರಲಿವೆ. ಪರಿಸರಸ್ನೇಹಿ ಮತ್ತು ಹೆಚ್ಚು ಖರ್ಚಿಲ್ಲದ ಸಂಚಾರ ವಾಹಕವಾಗಿರುವ ಇ.ವಿ. ವಾಹನಗಳನ್ನು ಜನರು ಸಹಜವಾಗಿಯೇ ಆರಿಸಿಕೊಳ್ಳುತ್ತಾರೆ ಎಂದರು.

ಚರಾ ಟೆಕ್ನಾಲಜೀಸ್ ಸಂಸ್ಥಾಪಕ ಭಕ್ತಕೇಶವಾಚಾರ್ ಸಂವಾದದಲ್ಲಿ ಪಾಲ್ಗೊಂಡು, ನಮ್ಮ ವ್ಯವಸ್ಥೆಯಲ್ಲಿ ದೋಷಗಳಿವೆ. ಮುಖ್ಯವಾಗಿ ಇಂಧನ ಕ್ಷೇತ್ರದಲ್ಲಿ ಸುಧಾರಣೆಗಳಾಗಬೇಕು. ಇಲ್ಲದಿದ್ದರೆ ಚೀನಾದ ಮೇಲೆ ಅವಲಂಬನೆ ಮುಂದುವರಿಯಲಿದ್ದು, ಇದು ಪ್ರತಿಕೂಲವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂವಾದದಲ್ಲಿ ಏಥರ್ ಎನರ್ಜಿ ಕಂಪನಿಯ ಸಹಸಂಸ್ಥಾಪಕ ತರುಣ್ ಮೆಹ್ತಾ, ಎಕ್ಸ್‌ಪೊನೆಂಟ್ ಎನರ್ಜಿ ಸಹಸಂಸ್ಥಾಪಕ ಅರುಣ್ ವಿನಾಯಕ್ ಪಾಲ್ಗೊಂಡಿದ್ದರು. ಜೋಲ್ವ್ ಕಂಪನಿಯ ಸ್ಥಾಪಕ ಜಿ.ರಘುನಂದನ್ ಸಂವಾದ ನಡೆಸಿಕೊಟ್ಟರು.

**
ಇ.ವಿ.ವಾಹನಗಳ ಚಾರ್ಜಿಂಗ್ ಈಗ ಕಷ್ಟವಾಗಿದೆ. ನಮ್ಮ ನಗರಗಳ ಪ್ರತಿಯೊಂದು ಪಾರ್ಕಿಂಗ್ ತಾಣಗಳಲ್ಲೂ ಇ.ವಿ.ಚಾರ್ಜಿಂಗ್ ಕೇಂದ್ರಗಳು ಬರಬೇಕು. ಜನರು ಈಗ ಪೆಟ್ರೋಲನ್ನು ಹೇಗೆ ಕ್ಷಣಾರ್ಧದಲ್ಲಿ ತುಂಬಿಸಿಕೊಂಡು ಹೋಗುತ್ತಾರೋ ಹಾಗೆ ಇ.ವಿ.ಚಾರ್ಜಿಂಗ್ ಕೂಡ ಸುಲಭವಾಗಬೇಕು.
-ಅರುಣ್ ವಿನಾಯಕ್, ಸಹಸಂಸ್ಥಾಪಕ, ಎಕ್ಸ್ಪೋನೆಂಟ್ ಎನರ್ಜಿ

**
ಹತ್ತು ವರ್ಷಗಳ ಹಿಂದೆ ವಿದ್ಯುಚ್ಚಾಲಿತ ವಾಹನವೆಂದರೆ ಜನ ಅದನ್ನು ಯಾವುದೋ ಬೊಂಬೆ ಎಂದುಕೊಂಡಿದ್ದರು. ಈಗ ಮನೋಭಾವ ಬದಲಾಗಿದೆ. ದ್ವಿಚಕ್ರ ವಾಹನ ಖರೀದಿಸುವ ಹೆಚ್ಚಿನ ಜನ ಈಗ ಇ.ವಿ.ಗಳ ಕಡೆಗೇ ಬರುತ್ತಿದ್ದಾರೆ.
-ತರುಣ್ ಮೆಹ್ತಾ, ಸಂಸ್ಥಾಪಕ. ಈಥರ್ ಎನರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT