ಶನಿವಾರ, ಸೆಪ್ಟೆಂಬರ್ 26, 2020
22 °C
ಗಲಭೆ: ಬೆಂಗಳೂರು ಡಿ.ಸಿ.ಯಿಂದ ತನಿಖೆ

ಬೆಂಗಳೂರು ಗಲಭೆ | ಎಸ್‌ಡಿಪಿಐ ಪಾತ್ರಕ್ಕೆ ಪುಷ್ಟಿ, ಸಂಘಟನೆ ನಿಷೇಧಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಪಾತ್ರವನ್ನು ಪುಷ್ಟೀಕರಿಸುವ ಮತ್ತಷ್ಟು ಹೊಸ ಮಾಹಿತಿಗಳು ತನಿಖೆ ವೇಳೆ ಲಭಿಸಿದ್ದು, ಈ ಸಂಘಟನೆಯನ್ನು ನಿಷೇಧಿಸುವ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ), ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಗಲಭೆಯ ತನಿಖೆ ಸಂದರ್ಭದಲ್ಲಿ ವಿಡಿಯೊ ದೃಶ್ಯಾವಳಿಗಳಲ್ಲದೆ, ಇನ್ನೂ ಹಲವು ಬಗೆಯ ಸಾಕ್ಷ್ಯಗಳು ಸಿಕ್ಕಿವೆ. ಅವುಗಳ ಪ್ರಕಾರ ಗಲಭೆ ಸೃಷ್ಟಿಯಲ್ಲಿ ಎಸ್‌ಡಿಪಿಐ ಕೈವಾಡ ಮತ್ತಷ್ಟು ನಿಚ್ಚಳವಾಗಿದೆ. ಇವು ಸೂಕ್ಷ್ಮ ವಿಚಾರ ಆಗಿರುವುದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲವನ್ನೂ ಬಹಿರಂಗ ಪಡಿಸುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

‘ಗಲಭೆ ನಡೆಸಲೆಂದೇ ನಗರದ ವಿವಿಧ ಪ್ರದೇಶಗಳಿಂದ ಕಿಡಿಗೇಡಿಗಳು ಬಂದಿರುವುದು ವಿಡಿಯೊ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಗಲಭೆ ಮತ್ತು ದುಷ್ಕೃತ್ಯಗಳಲ್ಲಿ ಎಸ್‌ಡಿಪಿಐ ಪಾತ್ರದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಮಾಹಿತಿಯನ್ನು ಆಧರಿಸಿ ಸಂಘಟನೆಯ ನಿಷೇಧಕ್ಕೆ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಬೊಮ್ಮಾಯಿ ಹೇಳಿದರು.

‘ಇದೇ ಮಾದರಿಯಲ್ಲಿ ಬೇರೆ ಕಡೆಗಳಲ್ಲಿ ನಡೆದಿರುವ ಗಲಭೆಗಳ ಘಟನಾವಳಿಗಳ ಜತೆ ತಾಳೆ ಹಾಕಿ ನೋಡುತ್ತಿದ್ದೇವೆ. ಇದರ ಹಿಂದಿನ ಷಡ್ಯಂತ್ರ ಭೇದಿಸುವವರೆಗೂ ವಿಶ್ರಮಿಸುವುದಿಲ್ಲ. ಅಲ್ಲದೆ, ಈ ಪ್ರಕರಣದ ಹಿಂದೆ ಯಾವುದಾದರೂ ರಾಜಕೀಯ ಪಕ್ಷಗಳು ಮತ್ತು ನಾಯಕರ ಕೈವಾಡ ಇದೆಯೇ, ವೈಷಮ್ಯ–ವೈಮನಸ್ಸು ಇತ್ಯಾದಿಗಳ ಬಗ್ಗೆಯೂ ಕೂಲಂಕಶ ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಗಲಭೆಕೋರರ ಬಗ್ಗೆ ಶಾಸಕ ಜಮೀರ್ ಅಹಮದ್‌‌ ಮಾತನಾಡಿರುವುದನ್ನು ಉಲ್ಲೇಖಿಸಿದ ಬೊಮ್ಮಾಯಿ, ‘ಜಮೀರ್‌ ಹೇಳಿಕೆಯಿಂದ ಅವರು ಯಾರ ಪರ ನಿಂತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಹೇಳಿಕೆಗೆ ಅವರೇ ಜವಾಬ್ದಾರರಾಗುತ್ತಾರೆ’ ಎಂದೂ ಎಚ್ಚರಿಕೆ ನೀಡಿದರು.

ಡಿ.ಸಿಗೆ ತನಿಖೆ ಹೊಣೆ: ಗಲಭೆ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಲಾಗಿದೆ. ಮೂವರ ಸಾವಿಗೆ ಕಾರಣಗಳು, ಎರಡು ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ವಿಚಾರಣೆ ನಡೆಸಿ ಮೂರು ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ  ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು